
ಹೊನ್ನಾವರ: ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವವರು ಜೆಸಿಬಿ ಯಂತ್ರದಿಂದ ನೆಲವನ್ನು ಅಗೆಯುವಾಗ ನಿಷ್ಕಾಳಜಿಯಿಂದ ನೀರು ಸರಬರಾಜು ಮಾಡುವ ಪೈಪುಗಳನ್ನು ಒಡೆದು ಹಾಕುತ್ತಿದ್ದು, ಈ ಭಾಗದ ಮನೆಗಳಿಗೆ ನೀರಿಗೆ ತತ್ವಾರವುಂಟಾಗಿದೆ. ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾತನಗರದ ಫಾರೆಸ್ಟ್ ಕಾಲನಿಯ ಬಹುತೇಕ ಓಣಿಗಳಲ್ಲಿ ಪೈಪ್ ಲೈನ್ ಒಡೆದಿದೆ. ಕಳೆದ ಹದಿನೈದು ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಹಾಳಾಗಿರುವ ಪೈಪ್ಗಳನ್ನು ದುರಸ್ತಿ ಮಾಡಲು ಪಟ್ಟಣ ಪಂಚಾಯತಿಗೆ ಮತ್ತು ಗುತ್ತಿಗೆದಾರ ಕಂಪನಿಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಪಟ್ಟಣ ಪಂಚಾಯತಿ ಶೀಪಾರಸ್ಸು ಮಾಡಿದ ಪ್ಲಂಬರ್ಗಳು ಬಂದು ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಹಲವು ಮನೆಗಳಿಗೆ ಪೈಪ್ಗಳಲ್ಲಿ ನೀರು ಬರುತ್ತಿಲ್ಲ. ಹಾಳಾದ ಪೈಪ್ ದುರಸ್ತಿಯಾಗದೇ ಈ ಮನೆಯವರು ನೀರಿಗಾಗಿ ಪರದಾಡುತ್ತಿದ್ದಾರೆ.

ಪೈಪ್ ಒಡೆದು ನೀರು ಪೋಲು: ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿಯಲ್ಲಿ ಒಳ ಚರಂಡಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಮನಬಂದಂತೆ ಜೆಸಿಬಿ ಯಂತ್ರಗಳಿಂದ ಗುಂಡಿ ತೆಗೆಯುತ್ತಿದ್ದು, ಈ ಭಾಗದಲ್ಲಿ ನೆಲದಲ್ಲಿ ಹೂಳಲಾದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಗಳನ್ನು ಒಡೆದುಹಾಕುತ್ತಿದ್ದಾರೆ. ಇದರಿಂದಾಗಿ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಪೈಪ್ ಒಡೆದು ಪ್ರತಿದಿನ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ಮನೆಗಳಿಗೆ ಅತಿ ಅವಶ್ಯಕವಾಗಿರುವ ನೀರು ಪೂರೈಕೆಯಾಗದೇ ಜನರು ಪರದಾಡುತ್ತಿದ್ದು, ಒಳಚರಂಡಿ ಕಾಮಗಾರಿ ಗುತ್ತಿಗೆದಾರರ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಹಣವಿದ್ದವರು ಖಾಸಗೀ ಟ್ಯಾಂಕರ್ಗಳಿಂದ ಗಾಡಿಯೊಂದಕ್ಕೆ 300 ರಿಂದ 500 ರೂ. ರವರೆಗೆ ಹಣ ನೀಡಿ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ನೀರಿಗಾಗಿ ಪರಿತಪಿಸುವ ಕಾಲ ಬಂದಿದೆ. ಫಾರೆಸ್ಟ್ ಕಾಲನಿ ಸೇರಿದಂತೆ ಹಲವೆಡೆ ಪೈಪ್ಲೈನ್ಗಳಲ್ಲಿ ಉಂಟಾದ ದೋಷವನ್ನು ಸರಿಪಡಿಸಬೇಕು. ವರ್ಷದಲ್ಲಿ ಹಲವು ಬಾರಿ ಬೇರೆ ಬೇರೆ ಕಾರಣದಿಂದ ರಿಪೇರಿಗೆ ಒಳಗಾಗುವ ಪೈಪ್ಲೈನ್ಗಳಿಂದ ಜನ ಪರದಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

“ಹೊನ್ನಾವರ ಪ್ರಭಾತನಗರದಲ್ಲಿ ನೀರಿನ ಪೈಪ್ಗಳು ಒಡೆದು ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ಕಾಮಗಾರಿ ನಡೆಸುವವರು ನಿಷ್ಕಾಳಜಿಯಿಂದ ಪೈಪ್ಗಳನ್ನು ಒಡೆದು ಹಾಕಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು” – ರಮೇಶ ನಾಯ್ಕ, ಫಾರೆಸ್ಟ್ ಕಾಲನಿ ನಿವಾಸಿ.

“ಹೊನ್ನಾವರ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಮಂಜೂರಾಗಿ ಈಗ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಎಲ್ಲಿಯೂ ಸರಿಯಾಗಿ ಪೂರ್ಣಗೊಳಿಸುತ್ತಿಲ್ಲ. ಅಪೂರ್ಣ ಕಾಮಗಾರಿಯಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಭೆ ನಡೆಸಿ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.” – ನೀಲಕಂಠ ಮೇಸ್ತ, ಪ. ಪಂ. ಮುಖ್ಯಾಧಿಕಾರಿ.
“ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಗುತ್ತಿಗೆದಾರರ ವಿರುದ್ದ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಲಾಗಿದೆ. ಕಾಮಗಾರಿಯನ್ನು ಒಂದು ಕಡೆ ಪೂರ್ಣಗೊಳಿಸಿಯೇ ಇನ್ನೊಂದು ಕಡೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡು ಪ್ರಾರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ. ” – ವಿವೇಕ ಶೇಣ್ವೆ, ಹೊನ್ನಾವರ ತಹಸೀಲ್ದಾರ್

Leave a Comment