
ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯ ಉಜ್ವಲವಾಗಿಸಿ,
ಹೊನ್ನಾವರ ಜ. 22 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಘಟನೆಯಲ್ಲಿ 26ನೇ ಸಮ್ಮೇಲನವಾಗಿ ಉತ್ತರ ಕನ್ನಡ ಸಮ್ಮೇಲನ ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ಹೆಗಡೆ ಇವರ ಸರ್ವಾಧ್ಯಕ್ಷತೆಯಲ್ಲಿ ಆರ್.ಎಸ್. ಹೆಗಡೆ ಸಭಾಗೃಹದಲ್ಲಿ ಆರಂಭವಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಪಿ. ಕರ್ಕಿ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯವನ್ನು ಉಜ್ವಲವಾಗಿ ಕಟ್ಟಬೇಕು ಎಂಬ ಸಂದೇಶ ನೀಡಿದರು. ಜಿಲ್ಲಾ ಇತಿಹಾಸ ಸಮ್ಮೇಳನಗಳ ಸರಣಿಯಲ್ಲಿ ವಿಜಯನಗರ ಅಧ್ಯಯನ 21ನೇ ಸಂಪುಟವನ್ನು ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್ ಬಿಡುಗಡೆಮಾಡಿ ಜಿಲ್ಲೆಯ ಆಳವಾದ ಅಧ್ಯಯನ, ಸಂಶೋಧನೆ ನಡೆಸಿ ಅದನ್ನು ದಾಖಲಿಸಿ, ಸಂರಕ್ಷಿಸುವ ಮುಖಾಂತರ ಮುಂದಿನ ಪೀಳಿಗೆ ಇದರಿಂದ ಸ್ಪೂರ್ತಿ ದೊರೆಯುವಂತೆ ಮತ್ತು ಅವರು ಜೀವನದಲ್ಲಿ ಸಾಧಿಸುವಂತೆ ಆಗಬೇಕು. ಜಿಲ್ಲೆಯ ಪುರಾತನ ದೇವಾಲಯಗಳಿಗೆ ಇಲಾಖೆಯ ನೆರವು ಬೇಕು ಎಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮೈಸೂರು ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ಕೃಷ್ಣಮೂರ್ತಿ ಮಾತನಾಡಿ ದೇಶದಲ್ಲೇ ಅತಿಪುರಾತನವಾದ ನಾಮಾಂಕಿತ ನಗರ ಬನವಾಸಿ, ಕ್ರಿಸ್ತ ಶಕ ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಗೆ ಇದು ತಿಳಿದಿತ್ತು, ಈತ ತನ್ನ ಶಿಷ್ಯ ತೇರಾರಕ್ಷಿತನನ್ನು ಬನವಾಸಿಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳಿಸಿದ್ದ, ಆಗ ಸಂಪದ್ಭರಿತವಾದ ಬನವಾಸಿಯ ಇತಿಹಾಸ ಸಿಂಹಳಿಯರ ಸಾಹಿತ್ಯದಲ್ಲೂ ಬಂದಿದೆ. ರೋಮನ್ ಸಾಮ್ರಾಜ್ಯದೊಂದಿಗೆ ಬನವಾಸಿಯ ಸಂಪರ್ಕವಿತ್ತು. ಬನವಾಸಿಯ ಶ್ರೀಮಂತ ಪುಣೆಯ ಬಳಿ ಚೈತ್ಯಾಲಯ ಕಟ್ಟಿಸಿದ್ದ ಎಂದು ವಿವರಿಸಿ, ಬನವಾಸಿಯ ಇತಿಹಾಸದ ಮಹತ್ವ ತಿಳಿಸಿ ಆಳವಾದ ಸಂಶೋಧನೆಯಾಗಲಿ ಎಂದರು. ಕರ್ನಾಟಕ ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಷಡಕ್ಷರಯ್ಯ ಮಾತನಾಡಿ ಪುರಾತತ್ವ ಇಲಾಖೆಯ ನಿರ್ದೇಶಕರಾಗಿರುವ ಡಾ. ಆರ್. ಗೋಪಾಲ ಅವರು ರಾಜ್ಯದ ಎಲ್ಲ ಜಿಲ್ಲೆಗಳ ಇತಿಹಾಸವನ್ನು ದಾಖಲಿಸಿ, ಸಂಪುಟ ರೂಪದಲ್ಲಿ ಹೊರತರುತ್ತಿದ್ದಾರೆ. 20ಸಂಪುಟಗಳ ಹೊರಬಂದಿದೆ. 25ಜಿಲ್ಲೆಗಳಲ್ಲಿ ಇಂತಹ ವಿಚಾರ ಸಂಕಿರಣ ನಡೆದಿದೆ. ಉತ್ತರಕನ್ನಡದ ಸಮ್ಮೇಲನದಲ್ಲಿ 56ಪ್ರಬಂಧಗಳು ಮಂಡನೆಯಾಗಲಿದೆ. ಈ ಸಾಧನೆ ದೊಡ್ಡದು, ಭವಿಷ್ಯದ ಸಂಪತ್ತು ಎಂದು ಡಾ. ಗೋಪಾಲ ಅವರನ್ನು ಅಭಿನಂದಿಸಿದರು.
\

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ನಾಯ್ಕ ಈ ಸಮ್ಮೇಲನದಿಂದ ಜಿಲ್ಲೆಗೆ ಉಪಯೋಗವಾಗಲಿದೆ, ಇತಿಹಾಸದ ವಿದ್ಯಾರ್ಥಿಗಳು ಸಕ್ರೀಯರಾಗಿ ಎರಡು ದಿನದ ಸಮ್ಮೇಲನವನ್ನು ಯಶಸ್ವಿಗೊಳಿಸಬೇಕು ಎಂದರು. ಕಾಲೇಜು ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಇಲಾಖೆಯ ನಿರ್ದೇಶಕ ಡಾ. ಆರ್. ಗೋಪಾಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೋ. ನಾಗರಾಜ ಹೆಗಡೆ, ಪ್ರೋ. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೋ. ಜಿ.ಎಸ್. ಹೆಗಡೆ ವಂದಿಸಿದರು.

Leave a Comment