
ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೆ ಶೀಘ್ರದಲ್ಲಿ ಜರುಗಿಸುವ ಕುರಿತು ಇಂದು ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಅರಣ್ಯ ಅತಿಕ್ರಮಣದಾರರು ಬೃಹತ್ ಮೆರವಣಿಗೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲಾ ಮತ್ತು ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಸ್ಥಳಿಯ ಮಾಸ್ತಿಕಟ್ಟೆ ದೇವಾಲಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿರುವುದಿಲ್ಲ. ಅಭಯಾರಣ್ಯ ವಿಸ್ತರಣೆ ಕುರಿತು ಜನ ಜಾಗೃತಿ ಮೂಡಿಸಿರುವುದಿಲ್ಲ. ಅರಣ್ಯವ್ಯಾಪ್ತಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯಭೂಮಿ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗಲೇ ಸದ್ರಿ ಅಧಿಸೂಚನೆಯಿಂದ ಸದ್ರಿ ಪ್ರದೇಶದ ಅರಣ್ಯ ಸಾಗುವಳಿದಾರರ ಹಕ್ಕು ಕುಂಠಿತವಾಗುವುದು. ಅರಣ್ಯವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಸದ್ರಿ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸ್ವತಂತ್ರತೆ ಮತ್ತು ಸ್ವಾವಲಂಬನೆ ಜೀವನಕ್ಕೆ ಆತಂಕ ಉಂಟಾಗುವುದು. ಸಂಪೂರ್ಣವಾಗಿ ಈ ಪ್ರದೇಶ ಮಾನವನ ಸ್ವತಂತ್ರ ಜೀವನಕ್ಕೆ ಆತಂಕ ಉಂಟಾಗುವುದು. ಇದರಿಂದಾಗಿ ಮಾನವನ ಸ್ವತಂತ್ರ ಜೀವನಕ್ಕೆ ದಿಬ್ಭಂಧನೆ ಹಾಗೂ ಮೂಲಭೂತ ಹಕ್ಕು ಮತ್ತು ಸೌಲಭ್ಯದಿಂದ ವಂಚಿತರಾಗುವುದಲ್ಲದೇ ಮಾನವ ಹಕ್ಕು ಪಡೆಯಲು ಈ ಯೋಜನೆ ಮಾರಕವಾಗುವುದು ಎಂದು ಹೇಳಲಾಗಿದೆ.

ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ, ಮೇದಿನಿ, ಹೆಕ್ಕಳಿ, ಮೂರ್ಸೆ, ಬಂಗಣಿ, ಮುದ್ದಿನಹೊಸಳ್ಳಿ, ಹುಳ್ಳೂರು ಗ್ರಾಮಗಳ ಪ್ರದೇಶವನ್ನು ಸೇರಿಸಲ್ಪಟ್ಟು ಸುಮಾರು ೧೦೦೦ ಕ್ಕಿಂತ ಮಿಕ್ಕಿ ಕುಟುಂಬಗಳಿಗೆ ಅಭಯಾರಣ್ಯ ಯೋಜನೆಯಿಂದ ಸಮಸ್ಯೆ ಉಂಟಾಗುವ ಆತಂಕವನ್ನು ಎದುರಿಸುತ್ತಿದ್ದಾರೆ ಎಂದು ಒಕ್ಕೋರಿಲಿನಿಂದ ಆಗ್ರಹಿಸಲಾಯಿತು.
ಕಾರಣ ಸರಕಾರದ ಜನವಿರೋಧಿ ನೀತಿಯಾಗಿರುವ ಸದ್ರಿ ಆದೇಶವನ್ನು ರದ್ದುಪಡಿಸಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶವನ್ನು ರದ್ದುಗೊಳಿಸಿ ಅರಣ್ಯವಾಸಿ ಮತ್ತು ಜನ ಸಾಮಾನ್ಯರಿಗೆ ಮೂಲಭೂತ ಹಕ್ಕಿನಿಂದ ವಂಚಿತವಾಗದ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮೂಲಕ ಕೋರಿದ್ದಾರೆ.
ಉಪ ಮತ್ತು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳು ನಮ್ಮ ಅರ್ಜಿಯನ್ನು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂಧಿಸಿದ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಕ್ಕೆ ಆಗ್ರಹಿಸುತ್ತಿರುವುದು ವಿಷಾದಕರ. ಇದು ಕಾನೂನಿಗೆ ವ್ಯತಿರಿಕ್ತವಾಗಿದೆ. ನಿರ್ದಿಷ್ಟ ದಾಖಲಾತಿ ಸಾಕ್ಷ್ಯದ ಬಗ್ಗೆ ಕಾನೂನಿನಲ್ಲಿ ಉಲ್ಲೇಖವಿಲ್ಲ ಎಂದು ವ್ಯಾಖ್ಯಾನಿಸುತ್ತಾ, ಅರಣ್ಯ ಹಕ್ಕು ಕಾಯಿದೆ ಕೇಂದ್ರ ಬುಡಕಟ್ಟು ಮಂತ್ರಾಲಯದ ನಿರ್ದೇಶನದಂತೆ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸದೇ, ಕಾನೂನು ಅಡಿಯಲ್ಲಿ ಉಲ್ಲೇಖಿಸಿರುವಂತೆ ಮೌಖಿಕ ಹಾಗೂ ಪ್ರತ್ಯಕ್ಷ್ಯ ಸಾಗುವಳಿ ಸಾಕ್ಷ್ಯ ದ ಮೇಲೆ ಮಂಜೂರಿ ವ ಸಾಗುವಳಿ ಹಕ್ಕನ್ನು ನೀಡಬೇಕು. ಅಲ್ಲದೇ, ನಿರ್ದಿಷ್ಟ ದಾಖಲಾತಿಯ ಸಾಕ್ಷ್ಯವನ್ನು ಮಂಜೂರಿ ಪ್ರಕ್ರಿಯೆಗೆ ಮಾನದಂಡ ಮಾಡಿರುವುದು ಕಾನೂನು ಬಾಹೀರ ಎಂದು ಗುಜರಾತ ಉಚ್ಛ ನ್ಯಾಯಾಲಯ ಆದೇಶವನ್ನು ನೀಡಿರುವುದನ್ನು ಉಲ್ಲೇಖಿಸಿ ತಾಲೂಕಿನಾದ್ಯಂತ ಬಂದಿರುವ ಸಹಸ್ರಾರು ಅತಿಕ್ರಮಣದಾರರು ಜಿಲ್ಲಾಧಿಕಾರಿಗಳಿಗೆ ವೈಯಕ್ತಿಕ ಮನವಿ ನೀಡಿರುವುದು ಅರಣ್ಯ ಅತಿಕ್ರಮಣದಾರರ ಇಂದಿನ ಜನಾಂದೋಲನದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ, ತಾಲೂಕಾಧ್ಯಕ್ಷ ಮಂಜುನಾಥ ತಿಮ್ಮಾ ಮರಾಠಿ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಜಿಲ್ಲಾ ಸಂಚಾಲಕ ಜಿ.ಎಮ್. ಶೆಟ್ಟಿ, ಅಂಕೋಲಾ ತಾಲೂಕಾಧ್ಯಕ್ಷ ರಮಾನಂದ ನಾಯಕ, ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಭಟ್ಕಳದ ರಾಮಾ ಮೊಗೇರ, ಸಾರಾಂಬಿ ಶೇಖ, ಯಾಕೂಬ್ ಬೆಟ್ಕುಳಿ, ಜಗದೀಶ ಹರಿಕಾಂತ ನುಶಿಕೋಟೆ, ರಾಜು ಮಾಸ್ತಿಹಳ್ಳ, ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ಮರಾಠಿ ಯಾಣ, ಜಾನ್ ಮಿರ್ಜಾನ, ಶಾಂತಾರಾಮ ನಾಯಕ ಬಡಾಳ ಮುಂತಾದವರು ಉಪಸ್ಥಿತರಿದ್ದರು.

Leave a Comment