
ಯಲ್ಲಾಪುರ /ಅಡಿಕೆ ವ್ಯವಹಾರಸ್ಥರ ಸಂಘ, ರಂಗ ಸಹ್ಯಾದ್ರಿ ಇವರ ಆಶ್ರಯದಲ್ಲಿ ಪಟ್ಟಣದ ಗಾಂಧಿ ಕುಟೀರದಲ್ಲಿ ಫೆ.1, 2, 3 ರಂದು ಮೈಸೂರು ರಂಗಾಯಣದ ರಂಗ ಸಂಚಾರಿ ರಂಗ ಘಟಕದ ಕಲಾವಿದರಿಂದ ನಾಟಕೋತ್ಸವ 2019-20 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡುತ್ತಿದ್ದರು. ಉತ್ಸವವನ್ನು ಫೆ.1 ರಂದು ಸಂಜೆ 7 ಕ್ಕೆ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ 7 ಕ್ಕೆ ನಾಟಕ ಪ್ರದರ್ಶನ ನಡೆಯಲಿದ್ದು, ಫೆ.1 ರಂದು ಆರ್ಕೇಡಿಯಾದಲ್ಲಿ ಪಕ್, ಫೆ.2 ರ ಬೆಂದಕಾಳು ಆನ್ ಟೋಸ್ಟ್, ಫೆ.3 ರಂದು ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಸಂಘಟಕ ನಾರಾಯಣ ಭಟ್ಟ ಮಾತನಾಡಿ,ಜನರಿಗೆ ಸದಭಿರುಚಿಯ ನಾಟಕ ಪ್ರದರ್ಶನವನ್ನು ತೋರಿಸುವ ನಿಟ್ಟಿನಲ್ಲಿ ಅಡಿಕೆ ವರ್ತಕ ಸಂಘ ಕಾಯೋನ್ಮುಖವಾಗಿದೆ. ಕಳೆದ ವರ್ಷ ನಿನಾಸಂ ತಂಡದಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈಬಾರಿ ರಂಗಾಯಣ ತಂಡದಿಂದ ಮೂರು ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಸಂಗೀತ ಹಾಸ್ಯಮಯ ನಾಟಕ, ವೈಚಾರಿಕ ನಾಟಕ, ಹಾಗೂ ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕುತೂಹಲ ತೆರೆದಿಡುವ ನಾಟಕ ಹೀಗೆ ವೈವಿಧ್ಯಮಯ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಾಲಮಿತಿಯ ನಾಟಕ ಪ್ರದರ್ಶನ ಇದಾಗಿದ್ದು, ಪ್ರತಿ ದಿವಸ ಸಂಜೆ 7ಕ್ಕೆ ಆರಂಭವಾಗಲಿದೆ. ಸಹೃದಯಿ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದರು. ಸಂಘಟಕ ಲೋಕನಾಥ ಗಾಂವ್ಕಾರ ಉಪಸ್ಥಿತರಿದ್ದರು.

Leave a Comment