
ಮಕ್ಕಳಿಗೆ ಇಂದು ಶಿಕ್ಷಣದ ಜೊತೆ ದೇಶಪ್ರೇಮವನ್ನು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು.
ತಾಲೂಕಿನ ಸ್ಥಿತಿಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ ಹಾಗೂ ಮನೆಯ ಪರಿಸರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ವಾತವರಣ ನಿರ್ಮಾಣ ಮಾಡಿದರೆ ಉತ್ತಮ ಪ್ರಜೆಯನ್ನು ಕಾಣಲು ಸಾಧ್ಯ. ಮಕ್ಕಳಿಗೆ ಶಿಕ್ಷಣವನ್ನು ಸಂತಸದ ವಾತಾವರಣದಲ್ಲಿ ಕಲಿಯಲು ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಕಥೆಯೆಂದರೆ ತುಂಬಾ ಇಷ್ಟ, ಮಕ್ಕಳಿಗೆ ಕಥೆ ಹೇಳುತ್ತಾ ಶಿಕ್ಷಣ ನೀಡಬೇಕು. ಅಲ್ಲದೆ ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ವಾರ್ಷಿಕ ಸ್ನೇಹ ಸಮ್ಮೇಳನ ಸಹಕಾರಿಯಾಗಿದೆ ಎಂದರು.
ಜ್ಞಾನ ಗಂಗೋತ್ರಿ ಮಕ್ಕಳ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ನಾಯ್ಕ ಮಾತನಾಡಿ ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಅವರಿಗೆ ಸಂಸ್ಕಾರ ದೊರಕಿದರೆ ಮುಂದಿನ ಭವ್ಯ ಭಾರತದ ನಿರ್ಮಾಣ ಸುಭದ್ರಗೊಳ್ಳುತ್ತದೆ ಎಂದರು.
ಸಿಆರ್‍ಪಿ ವಿನಾಯಕ ಹೆಗಡೆ ಮಾತನಾಡಿ ಶಿಕ್ಷಣದಲ್ಲಿ ಪಾಲಕ-ಬಾಲಕ ಶಿಕ್ಷಕ ಈ ಮೂವರ ಪಾತ್ರ ಮುಖ್ಯವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕ ಮತ್ತು ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಹೇಳಿದರು.
ವಿಷ್ಣು ಮೂರ್ತಿ ಹಳೆಯ ಸಂಘದ ಉಪಾಧ್ಯಕ್ಷ ಸುರೇಶ ಆಚಾರಿ ಮಕ್ಕಳಿಗಾಗಿ ಸಾವಿರ ರೂಪಾಯಿಗಳ ಬಹುಮಾನ ನೀಡಿದರು. ಪೂರ್ವ ವಿದ್ಯಾರ್ಥಿ ಗಂಗಾಧರ ಆಚಾರಿ ಶಾಲೆಗೆ ಕೇರಂ ಬೊರ್ಡ, ಬ್ಯಾಡ್ಮಿಟನ್ ಸಾಮಗ್ರಿ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಾಲ್ಕೋಡ್ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಎಸ್.ಜಿ.ಹೆಗಡೆ, ಉದ್ಯಮಿ ರವಿ ಕೆ. ಶೆಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ಗಣೇಶ ಹೆಗಡೆ, ಉಪಾಧ್ಯಕ್ಷೆ ಸಂಧ್ಯಾ ಹೆಗಡೆ, ಮುಖ್ಯ ಶಿಕ್ಷಕಿ ಪಾರ್ವತಿ ಹೆಗಡೆ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment