
ಒಕ್ಕಲಿಗ ಸಮಾಜದ ಅಭಿಮಾನ ಹಾಗೂ ಶ್ರಮದ ದ್ಯೋತಕವಾಗಿ ನಿರ್ಮಾಣವಾದ ಸಮುದಾಯಭವನದ ಉದ್ಘಾಟನೆ ಅದ್ದೂರಿಯಾಗಿ ನೇರವೇರಿತು.
ಸಭಾಭವನವನ್ನು ಉದ್ಘಾಟನೆಯನ್ನು ನೇರವೇರಿಸಿದ ಆದಿಚುಂಚನಗಿರಿ ಮಠದ 7ನೇ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಮಾರ್ಗದರ್ಶನ ಮಾಡಿ ವ್ಯಕ್ತಿಗಳ ಶಕ್ತಿ ಒಂದೆಡೆ ಪ್ರವಹಿಸಿದಾಗ ಸಂಘಟನೆಯಾಗುತ್ತದೆ. ಸಂಸ್ಕಾರ ಸಿಗುತ್ತದೆ, ಇಂತಹ ಒಳ್ಳೆಯ ಘಟನೆಗಳಿಂದ ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ. ಅದಕ್ಕೊಬ್ಬ ಗುರು ಇದ್ದರೆ ಸಮಾಜ ಏಳ್ಗೆ ಕಾಣುತ್ತದೆ. ಸ್ವಾಮಿ ವಿವೇಕಾನಂದರನ್ನು ಕೇರಳದ ಒಂದು ಸಮುದಾಯದವರು ಕಂಡಾಗ ಗುರುವನ್ನು ಮಾಡಿಕೊಳ್ಳಿ ಎಂದರಂತೆ. ನಾರಾಯಣ ಗುರುಗಳನ್ನು ಸ್ವೀಕರಿಸಿದ ಆ ಸಮಾಜ ಇಂದು ಏಳ್ಗೆ ಸಾಧಿಸಿದೆ. ಮಠಗಳಿಗೆ ಸರ್ಕಾರ ನೆರವು ನೀಡುವುದರಿಂದ ಸನ್ಯಾಸಿಗಳು ಆ ಹಣವನ್ನು ಸಮಾಜದ ಅಭಿವೃದ್ಧಿಗೆ ಬಳಸುತ್ತಾರೆ. ಇದರಿಂದ ನಿದ್ರಿಸುವಂತಿರುವ ಸಮಾಜ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮೈಕೊಡವಿಕೊಂಡು ಏಳುತ್ತದೆ. ದೇಶದ ನಿಜವಾದ ಸಂಪತ್ತು ಐಟಿಬಿಟಿ ಎಂಬುದು ಪೂರ್ತಿ ಸತ್ಯವಲ್ಲ, ಮಾನವ ಸಂಪನ್ಮೂಲವೇ ದೊಡ್ಡ ಸಂಪತ್ತು. ಈ ಸಂಪತ್ತನ್ನು ಜಾಗೃತಗೊಳಿಸಿ, ಸಮಾಜದ ಒಳಿತಿಗೆ ಬಳಸುವ ಕೆಲಸವನ್ನು ಮಠಗಳು ಮಾಡುತ್ತಿವೆ. ಅಂತಹ ಘಟನೆ ಇಲ್ಲಿ ನಡೆದಿದೆ. ದೇಶಾದ್ಯಂತ ಇಂತಹ ಒಳ್ಳೆಯ ಘಟನೆಗಳು ನಡೆದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಆಶೀರ್ವಚನ ನೀಡಿದ ಶ್ರೀ ರಾಮ ಕ್ಷೇತ್ರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಮಾಜ ಮಠಕ್ಕೆ ತೋರುವ ಭಕ್ತಿ, ನೀಡುವ ಸಂಪತ್ತು ಮರಳಿ ಸಮಾಜಕ್ಕೆ ಸಲ್ಲುತ್ತದೆ. ಸುಖದ ಮೂಲ ಧರ್ಮ, ಧರ್ಮಕ್ಷೇತ್ರಗಳು ಚೆನ್ನಾಗಿದ್ದರೆ ಭಕ್ತರಿಗೆ ಸುಖ, ಶಾಂತಿ, ನೆಮ್ಮದಿ ಕೊಡುತ್ತವೆ. ಕೇವಲ ಪೆಂಡಾಲ್ ಕೆಳಗೆ ಕುಳಿತು ಹಿಂದು ಧರ್ಮದ ರಕ್ಷಣೆ ಬಗ್ಗೆ ಬೊಬ್ಬೆ ಎರದರೆ ಯಾವುದೇ ಪ್ರಯೋಜನವಿಲ್ಲ ಮಠಾಧೀಶರುಗಳು ಹಲವು ವಿಧದಲ್ಲಿ ಪ್ರವಚನದ ಮೂಲಕ ಧರ್ಮ ರಕ್ಷಣೆ ಮಾಡುತ್ತಾರೆ ಸಮಾಜದ ಬೆಳವಣೆಗೆ ಎಲ್ಲರು ಒಗ್ಗಟ್ಟಾಗಬೇಕು ಆಗ ಮಾತ್ರ ಇಂತಹ ಭವ್ಯ ಮಂದಿರ ನಿರ್ಮಾಣ ಸಾಧ್ಯ. ನಾವೆಲ್ಲಾ ಒಂದೇ ನಮ್ಮ ಗುರಿ ಒಂದೇ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಗಳು, ಮಠದ ಮಂಡ್ಯ, ಶಿವಮೊಗ್ಗಾ, ಉತ್ತರಕನ್ನಡದ ಮಠಾಧೀಶರೂ ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆರಂಭದಲ್ಲಿ ದಿಕ್ಸೂಚಿ ಮಾತನಾಡಿ ಸಂಘಟನೆ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಿದೆ. ರಾಜ್ಯದ ವಿವಿಧ ಭಾಗದಲ್ಲಿರುವ ಕೃಷಿ ಪ್ರಧಾನವಾಗಿಟ್ಟುಕೊಂಡ 124 ಒಕ್ಕಲಿಗ ಸಮಾಜಗಳು ಬೇರೆಬೇರೆ ಹೆಸರಿನಲ್ಲಿ ನೆಲೆಸಿವೆ. ಇವರೆಲ್ಲಾ ಒಟ್ಟಾಗಿ ಪ್ರತಿ ತಾಲೂಕಿಗೊಂದು ಸಮುದಾಯಭವನ ಮತ್ತು ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿಕೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದಾದರೆ ಮಠದ ಸಂಪೂರ್ಣ ಆಶೀರ್ವಾದ ಮತ್ತು ಸಹಕಾರವಿದೆ. ಮಠದ ಶಿಷ್ಯರಲ್ಲಿ ಬಹುಪಾಲು ಒಕ್ಕಲಿಗ ಸಮಾಜದವರಾದರೂ ಮಠದಲ್ಲಿ ಮತ್ತು ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಸಂಘಶಕ್ತಿ ಕಲೌಯುಗೇ ಎಂದು ಹೇಳಲಾಗಿದೆ, ಭಗವಾನ್ ಬುದ್ಧ ಸಂಘಂ ಶರಣಂ ಗಚ್ಛಾಮಿ ಎಂದು ಹೇಳಿದ್ದಾರೆ, ಆದ್ದರಿಂದ ಎಲ್ಲ ಸಮಾಜದವರು ಪರಸ್ಪರ ಸಂಘಟನೆಯಾಗಿ, ಅಭಿವೃದ್ಧಿಗೊಂಡು ಒಟ್ಟೂ ದೇಶಕ್ಕೆ ವಿವಿಧ ದೇಶದಲ್ಲಿ ಕೊಡುಗೆಯಾಗಬೇಕು ಎಂದರು. ಸಮುದಾಯದ ಕಾರ್ಯಕ್ರಮಕ್ಕೆ ಸಾವಿರಾರು ಸಮಖ್ಯೆಯ ಸಾರ್ವಜನಿಕರು ಸಾಕ್ಷಿಯಾದರು.

.
Leave a Comment