
ಹೊನ್ನಾವರ ತಾಲೂಕಿನ ಕೆಳಗಿನೂರು ನೂತನವಾಗಿ ನಿರ್ಮಾಣವಾಗಿರುವ ಒಕ್ಕಲಿಗರ ಸಮುದಾಯ ಭವನವನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ನೇರವೇರಿತು. ಎರಡು ಸಮುದಾಯದ ಸ್ವಾಮಿಗಳು, ಶಾಖಾ ಮಠದ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ಭವ್ಯ ಸಮುದಾಯ ಭವನ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಉಪಮುಖ್ಯಮಂತ್ರಿ ಸಿ ಅಶ್ವತನಾರಾಯಣ ಮಾತನಾಡಿ ವ್ಯಕ್ತಿಗತ ಭಿನ್ನವಾಗಿದ್ದ ಒಕ್ಕಲಿಗ ಸಮಾಜದ ಎಲ್ಲರೂ ಶ್ರೀಗಳ ಮಾರ್ಗದರ್ಶನದಲ್ಲಿ ಒಂದಾಗಿರುವುದು, ಅದ್ಭುತವಾದ ಸಮುದಾಯಭವನ ಕಟ್ಟಿರುವುದು ಹೆಮ್ಮೆಯ ಸಂಗತಿ. ಈ ಜಿಲ್ಲೆಯ ಸಮಸ್ಯೆ ನನಗೆ ಗೊತ್ತಿದೆ. ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ 400ಹಾಸಿಗೆಗಳ ಆಸ್ಪತ್ರೆಯನ್ನು ಕೊಟ್ಟಿದ್ದೇನೆ. ನನ್ನದಾದ ರೀತಿಯಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಹಾಯ ಮಾಡುತ್ತೇನೆ. ಸರ್ಕಾರದಿಂದ ಬರಬೇಕಾದ 50ಲಕ್ಷ ರೂಪಾಯಿಗಳನ್ನು ಕೊಡಿಸುತ್ತೆನೆ ವೈಯ್ಯಕ್ತಿಕವಾಗಿ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ನಾರಾಯಣ ಗೌಡ ಮಾತನಾಡಿ ಜಿಲ್ಲೆಯ ಒಕ್ಕಲಿಗ ಸಮಾಜ ಗುರುತಿಸಿಕೊಳ್ಳುವ ಮಟ್ಟಕ್ಕೆ ಬಂದಿದೆ. ಸಮಾದ ಏಳಿಗೆ ಹೆಚ್ಚೆಚ್ಚು ಆಗಬೇಕು ಎಂದರು. ರಾಜ್ಯದ ಒಕ್ಕಲಿಗರೆಲ್ಲಾ ಒಂದಾಗಬೇಕೆಂಬ ಆಸೆ ಇತ್ತು. ಅಂತೆಯೇ ಒಕ್ಕಲಿಗರೆಲ್ಲಾ ಒಕ್ಕಟ್ಟಾಗಿ ಪರಸ್ಪರ ಸಹಕರಿಸುತ್ತ ಅಭಿವೃದ್ಧಿ ಸಾಧಿಸಿದ್ದಾರೆ. ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಮಾತ್ರವಲ್ಲ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಅಭಿನಂದನೀಯ ಎಂದು ಹೇಳಿದರು.
ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಮಾತನಾಡಿ ಸಮುದಾಯ ಭವನ ಸುವರ್ಣಸೌಧವಾಗಿ ಕಂಗೊಳಿಸಿದೆ, ಇದಕ್ಕೆ ದುಡಿದವರು ಅಭಿನಂದನಾರ್ಹರು, ಸರ್ಕಾರದ 50ಲಕ್ಷ ನಿಧಿಯನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಭಟ್ಕಳ ಸಮುದಾಯಭವನಕ್ಕೆ 10ಲಕ್ಷ ಮೀಸಲಿಡುತ್ತೇನೆ ಎಂದು ಹೇಳಿದರು
ಮಾಜಿ ಶಾಸಕ ಮಂಕಾಳು ವೈದ್ಯ ಮಾತನಾಡಿ ಆದಿಚುಂಚನಗಿರಿ ಪೀಠ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಒಕ್ಕಲಿಗ ಸಮುದಾಯ ಭವನ ಶ್ರೀಗುರುಪೀಠದ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದೆ ಎಂದರು.ಪದ್ಮಶ್ರೀ ಪಡೆದ ಹಾಲಕ್ಕಿ ಶ್ರೀಮತಿ ತುಳಸಿ ಗೌಡ, ಸಮುದಾಯಭವನ ಎದ್ದುನಿಲ್ಲಲು ಬೆಂಬಲವಾಗಿ ನಿಂತು ಸರ್ಕಾರದ ಹಣ ಕೊಡಿಸಿದ್ದಲ್ಲದೇ ಸ್ವಂತ ಹಣವನ್ನು ನೀಡಿ ಪ್ರೋತ್ಸಾಹಿಸಿದ ಮಾಜಿ ಶಾಸಕ ಮಂಕಾಳು ವೈದ್ಯ, ಸ್ಥಳದಾನಿ ಮಾದೇವಿ ವಿಷ್ಣು ಗೌಡ ಮತ್ತು ಮಾಜಿ ಅಧ್ಯಕ್ಷರ ಪತ್ನಿ ರತ್ನಾ ಮಂಜ ಗೌಡ ಇವರನ್ನು ಗೌರವಿಸಲಾಯಿತು.
ಹೊನ್ನ ಹರಿವಾಣ ಎನ್ನುವ ಸ್ಮರಣ ಸಂಚಿಕೆಯನ್ನು ಶ್ರೀಗಳು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.
ಸಮುದಾಯ ಭವನದ ಕಾರ್ಯದರ್ಶಿ ಬಾಲಚಂದ್ರ ಗೌಡ ಪ್ರಾಸ್ತಾವಿಕ ಮಾತನಾಡಿದರು, ಪತ್ರಕರ್ತ ಲಕ್ಷ್ಮೀಕಾಂತ ಗೌಡ ಸ್ವಾಗತಿಸಿದರು. ಗಣ್ಯರೆಲ್ಲರನ್ನೂ, ಲಕ್ಷ ರೂಪಾಯಿಗಿಂತ ಹೆಚ್ಚು ದಾನಕೊಟ್ಟವರನ್ನು ಗೌರವಿಸಲಾಯಿತು. ಮಂಗಳೂರು ಶಾಖಾಮಠದ ಶ್ರೀಗಳು ಉಪಸ್ಥಿತರಿದ್ದರು. ವಕೀಲರಾದ ಕೆ.ಟಿ.ಗೌಡ, ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಪಂಚಾಯತ ಅಧ್ಯಕ್ಷೆ ದೇವಿ ಗೌಡ, ಜಿ.ಪಂ. ಸದಸ್ಯೆ ಸವಿತಾ ಗೌಡ, ನಿವೃತ್ತ ತಹಶೀಲ್ದಾರ ವಿ.ಆರ್. ಗೌಡ, ಅಭಿಯಂತ ಶಂಕರ ಗೌಡ ಉಪಸ್ಥಿತರಿದ್ದರು. ಹೊನ್ನಾವರ ಪೋಲಿಸ್ ಮೈದಾನದಿಂದ ಕೆಳಗಿನೂರಿನ ಸಬಾಭವನದವರೆಗೆ ಸ್ವಾಮಿಜಿಯವರನ್ನು ಬೈಕ್ ರ್ಯಾಲಿಯ ಮೂಲಕ ಸ್ವಾಗತಿಸಿದರು.
Leave a Comment