
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಕಾಲೇಜಿನ ಪರವಾಗಿ ಶಾಸಕ ದಿನಕರ ಶೆಟ್ಟಿ ಸನ್ಮಾನಿಸಿದರು.ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ,ಖಜಾಂಚಿ ಉಮೇಶ ನಾಯ್ಕ ಇದ್ದಾರೆ.
ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಗತ್ಯ ಕ್ರಮದ ಭರವಸೆ
ಹೊನ್ನಾವರ:’ಆರ್ಥಿಕ ಸಂಕಷ್ಟದ ಕಾರಣ ಹೊಸ ಕಾಲೇಜು ಸ್ಥಾಪನೆ ಅಥವಾ ಹೊಸ ಹುದ್ದೆ ಸೃಷ್ಟಿಗೆ ಅವಕಾಶ ನೀಡುವುದಿಲ್ಲವಾದರೂ ಸದ್ಯ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
ಬುಧವಾರ ಇಲ್ಲಿನ ಎಸ್.ಡಿ.ಎಂ. ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಸಮಾಜದ ಉಳಿದ ರಂಗಗಳಲ್ಲಿ ಬದಲಾವಣೆ ತರಲು ಸಾಧ್ಯ.ನೆರೆ ಮತ್ತಿತರ ಪ್ರಕೃತಿ ವಿಕೋಪಗಳಿಂದಾಗಿ ಸರ್ಕಾರ ತೊಂದರೆಯಲ್ಲಿದ್ದರೂ ಶಿಕ್ಷಣಕ್ಕೆ ನೀಡಬೇಕಾದ ಅನುದಾನ ಮುಂದುವರಿಸಲಾಗುವುದು.ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಸದ್ಯ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲವಾದರೂ ಇದ್ದ ವ್ಯವಸ್ಥೆಯನ್ನು ಉತ್ತಮಪಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ಎಂದು ಅವರು ಹೇಳಿದರು.
ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(ಸಿ.ಎಸ್.ಆರ್.) ಯೋಜನೆಯಡಿಯಲ್ಲಿ ಕಾಲೇಜಿನ ತಾತ್ಕಾಲಿಕ ಉಪನ್ಯಾಸಕರಿಗೆ ಸಂಬಳೂ ನೀಡುವುದು ಸೇರಿದಂತೆ ಇನ್ನುಳಿದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಸಂಪನ್ಮೂಲ ನೀಡಬಹುದಾಗಿದ್ದು ಸಂಸದರು ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬಹುದಾಗಿದೆ’ ಎಂದು ಅವರು ಹೇಳಿದರು.
ಎಸ್.ಡಿ.ಎಂ. ಕಾಲೇಜಿನಲ್ಲಿ ಖಾಲಿ ಇರುವ 9 ಶಿಕ್ಷಕ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಅವರು ನೀಡಿದ ಮನವಿಗೆ ಉತ್ತರಿಸಿದ ಸಚಿವರು ಹುದ್ದೆ ಭರ್ತಿಗೆ ಸರ್ಕಾರದಿಂದ ಒಪ್ಪಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಶಾಸಕ ದಿನಕರ ಕೆ.ಶೆಟ್ಟಿ,ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಎಂಪಿಇ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಭಟ್ಟ,ಖಜಾಂಚಿ ಉಮೇಶ ನಾಯ್ಕ,ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯ್ಕ,ಮುಖಂಡರಾದ ದೀಪಕ ಶೇಟ್,ಎಂ.ಎಸ್.ಹೆಗಡೆ,ಸುಬ್ರಹ್ಮಣ್ಯ ಶಾಸ್ತ್ರಿ,ಶ್ರೀಕಲಾ ಶಾಸ್ತ್ರಿ ಹಾಜರಿದ್ದರು.

Leave a Comment