ಹಳಿಯಾಳ:- ದೊಡಕೊಪ್ಪ ಗ್ರಾಮದ ಸಮೀಪ ಕಬ್ಬು ಬೆಳೆದ ಹೊಲಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 80ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿರುವ ದುರ್ಘಟನೆ ಭಾನುವಾರ ನಡೆದಿದೆ.
ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ 15 ವರ್ಷಗಳ ನಂತರ ವಿಜೃಂಭಣೆಯಿಂದ ಗ್ರಾಮಸ್ಥರು 11 ದಿನಗಳ ಕಾಲ ಜಾತ್ರೆ ಮಾಡಿದರು. ಈ ಪುಟ್ಟ ಗ್ರಾಮದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಗ್ರಾಮದೇವಿಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯ ಜಾತ್ರೋತ್ಸವ ಆಚರಿಸಲಾಗಿತ್ತು ಅಲ್ಲದೇ ದಿ.16 ಭಾನುವಾರದಂದು ದೇವಿ ಪುನರ್ ಪ್ರತಿಷ್ಠಾಪನೆ ಕಾರ್ಯವು ನಡೆದಿದೆ.
ಆದರೇ ಈ ನಡುವೆ ಗ್ರಾಮಕ್ಕೆ ಹೊಂದಿಕೊಂಡಿರುವ ಕಬ್ಬು ಬೆಳೆದಿರುವ ಹೊಲಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಅಲ್ಲದೇ ಜೋರಾಗಿ ಬಿಸುತ್ತಿದ್ದ ಗಾಳಿಯ ರಭಸಕ್ಕೆ ಮೊದಲೆ ಬಿರು ಬೇಸಿಗೆಯಿಂದ ಕಬ್ಬುಗಳ ಸಿಪ್ಪೆಗಳು ಒಣಗಿದ್ದರಿಂದ ಬೆಂಕಿಯು ತನ್ನ ಕೆನ್ನಾಲಿಗೆಯನ್ನು ಪಸರಿಸಿ ನೋಡ ನೊಡುತ್ತಿದ್ದಂತೆ ಹತ್ತಾರು ಎಕರೆಗೆ ವ್ಯಾಪಿಸಿದ್ದರಿಂದ ಸುತ್ತಮುತ್ತಲ ಸುಮಾರು 80 ಕ್ಕೂ ಹೆಚ್ಚು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ ಎಂದು ಗ್ರಾಮಸ್ಥರು ಮಾಧ್ಯಮದವರಿಗೆ ತಿಳಿಸಿದ್ದಾರೆ.

11 ದಿನಗಳ ಜಾತ್ರೆಯ ಸಡಗರ ಮುಗಿಯುವ ಹೊತ್ತಿನಲ್ಲೇ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಭಾನುವಾರ ಕರಾಳ ಹಾಗೂ ಎಂದು ಮರೆಯಲಾಗದ ದಿನವಾಗಿ ಕಪ್ಪು ಚುಕ್ಕೆಯೊಂದನ್ನು ಮೂಡಿಸಿದೆ.
ಗ್ರಾಮದ ರೈತರಾದ ಪಿತಾಂಬರ ಕರ್ಲಕೊಪ್ಪ, ಲೋಕುರಿ ಮಂಜನ್ನವರ, ಬಸವಾಣಿ ಕರ್ಲಕೊಪ್ಪ, ಶಾಂತಾರಾಮ ಠೋಸುರ, ದೇಮಣ್ಣಾ ಭಾವಕರ, ಕೃಷ್ಣಾ ಶಾಪೂಕರ, ಮಾರುತಿ ಭಾವಕರ ಸೇರಿದಂತೆ ಇನ್ನೂ ಹಲವು ರೈತರಿಗೆ ಸೇರಿದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿದೆ.
ಈ ಕುರಿತು ಮಾತನಾಡಿದ ಗ್ರಾಮದ ಕೇಶವ ಎನ್ನುವ ಯುವಕ ಬೆಂಕಿ ಹತ್ತಿ ಅಕ್ಕಪಕ್ಕದ ಹೊಲಗಳಿಗೆ ವೇಗವಾಗಿ ವ್ಯಾಪಿಸುತ್ತಿತ್ತು, ನೂರಾರು ಜನತೆ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದರು. ಈ ವೇಳೆ ಅಗ್ನಿಶಾಮಕ ದಳಕ್ಕೂ ಕರೆ ಮಾಡಲಾಯಿತು ಆದರೇ ಅಗ್ನಿ ಶಾಮಕ ವಾಹನ ಮಾತ್ರ ಸಮಯಕ್ಕೆ ಬಾರದೆ ಇರುವುದರಿಂದ ಹೆಚ್ಚಿನ ಅನಾಹುತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳಕ್ಕೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.
ಇನ್ನೂ ಈ ಬೆಂಕಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ತಾಗಿತೋ, ಯಾರಾದರೂ ಕಿಡಿಗೇಡಿಗಳು ಸಿಗರೆಟ್ ಸೇದಲು ತೆರಳಿ ಆಕಸ್ಮಿಕ ಅವಘಡ ಸಂಭವಿಸಿತೋ ಇತ್ಯಾದಿ ಪ್ರಶ್ನೇಗಳು ಮೂಡಿದ್ದು ಪೋಲಿಸರ ತನಿಖೆಯಿಂದ ಮಾತ್ರ ನಿಜಾಂಶ ಹೊರಬಿಳಲಿದೆ.
ಮೊದಲೆ ಬ್ಯಾಂಕ್, ಸ್ವಸಹಾಯ ಸಂಘ, ಸೊಸೈಟಿಗಳಲ್ಲಿ ಸಾಲ ಸೂಲ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೆ ಒಮ್ಮೆಲೆ ಎರಗಿದ ಈ ಆಘಾತದಿಂದ ರೈತ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು 8ಕ್ಕೂ ಹೆಚ್ಚು ರೈತರ ಕಬ್ಬು ಸಂಪೂರ್ಣ ಹಾನಿಯಾಗಿದ್ದು ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ ಎಂಬುದು ಜನರಿಂದ ಆಗ್ರಹಗಳು ಕೇಳಿ ಬಂದವು.


Leave a Comment