
ಹೊನ್ನಾವರ ಪಾರಂಪರಿಕ ತಾಲೂಕಾಗಿದ್ದು ಇಲ್ಲಿಯ ಔಷಧಿ ಸಸ್ಯ ಸೇರಿದಂತೆ ವಿವಿಧ ಬಗೆಯ ಅರಣ್ಯ ಪ್ರಬೇಧವನ್ನು ಸಂರಕ್ಷಿಸಬೇಕಾದ ಜವಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಶರ ಹೇಳಿದರು.
ಹೊನ್ನಾವರ ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ತಾ.ಪಂ. ಜೀವ ವೈವಿದ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ನೈಸರ್ಗಿಕ ಸಂಪತ್ತುಗಳನ್ನು ಬಳಸಿಕೊಂಡು ಕೆಲಸ ಮಾಡುವ ತಜ್ಞರು ಇಲ್ಲಿದ್ದಾರೆ. ತಾಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ತಾ.ಪಂ.ದಲ್ಲಿ ಜೀವ ವೈವಿದ್ಯ ಸಮಿತಿಗಳನ್ನು ರಚಿಸಲಾಗಿದೆ. ಜೀವ ವೈವಿದ್ಯ ಸಮಿತಿಗಳನ್ನು ರಚಿಸುವುದು, ಜೀವ ವೈವಿದ್ಯ ದಾಖಲಾತಿ ಇತ್ಯಾದಿ ಜವಾಬ್ದಾರಿಗಳನ್ನು ಜಿ.ಪಂ. ಸಾಮಾಜಿಕ ಅರಣ್ಯ ವಿಭಾಗಕ್ಕೆ ವಹಿಸಲಾಗಿದೆ. ಮಂಡಳಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ನಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ. ತಾಲೂಕಿನ ನಿಸರ್ಗ ಸಂಪತ್ತಿನ ಬಳಕೆಯ ಮೇಲೆ ಮಂಡಳಿಗೆ ಹಕ್ಕಿದೆ. ವಾಣಿಜ್ಯಿಕ ಬಳಕೆಯಾದಾಗ ಲಾಭಾಂಶ ಪಡೆಯಬಹುದಾಗಿದೆ. ಪರಿಸರಕ್ಕೆ ಧಕ್ಕೆಯಾಗುವಂಥ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರವಹಿಸಬೇಕಿದೆ. ಅರಣ್ಯ ಇಲಾಖೆಯೊಂದಿಗೆ ಸೇರಿ ಜೀವ ವೈವಿದ್ಯ ದಾಖಲಾತಿ ಪ್ರಕ್ರಿಯೆ ನಡೆದಿದೆ. ಹೊನ್ನಾವರ ತಾಲೂಕಿನಲ್ಲಿ ಎಷ್ಟು ಔಷಧೀಯ ಸಸ್ಯಗಳಿವೆ ಎಷ್ಟು ನಾಶವಾಗಿವೆ, ಎಷ್ಟು ಉಳಿದುಕೊಂಡಿವೆ ಎಂಬ ಅಧ್ಯಯನವನ್ನು ಅರಣ್ಯ ಇಲಾಖೆಯೊಂದಿಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಇರ್ಷಾದ್ ಸದಸ್ಯರಾದ ಲೋಕೇಶ ನಾಯ್ಕ, ತುಕಾರಾಮ ನಾಯ್ಕ, ಅಣ್ಣಯ್ಯ ನಾಯ್ಕ, ಲಕ್ಷ್ಮಿ ಗೊಂಡ, ಕಾರ್ಯ ನಿರ್ವಹಣಾಧಿಕಾರಿ ಕರೀಂ ಹಸದಿ, ಎಸಿಎಫ್ ಕೆ.ಟಿ. ಬೋರಯ್ಯ, ಪ್ರಕಾಶ ಮೇಸ್ತ, ಸುದೀಶ ನಾಯ್ಕ, ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಕಿರಣ ಕುಮಾರಎಂ.ಜಿ. , ವಿ.ಎ. ಪಟಗಾರ, ಸಾಧನ ಬರ್ಗಿ ಮತ್ತಿತರರು ಉಪಸ್ಥಿತರಿದ್ದರು.

Leave a Comment