
ಹೊನ್ನಾವರ : ಕಾಲೇಜು ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ಗೆ ಹೊಂದಿಕೊಂಡು ಒಳರಸ್ತೆಯಲ್ಲಿ ಸಂಕೇತ ಎಂಬ ಹೆಸರಿನಲ್ಲಿ ನ್ಯೂಟ್ರಿಶಿಯನ್ ಕೇಂದ್ರ ನಡೆಯುತ್ತಿದೆ. ಇದಕ್ಕೆ ಆರೋಗ್ಯ ಇಲಾಖೆಯ ಪರವಾನಿಗೆ ಇಲ್ಲ. ಈ ಕೇಂದ್ರದ ಏಳೆಂಟು ಜನ ಲೈಸನ್ಸ್ ಪಡೆಯಲು ತಾಲೂಕಾ ವೈದ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಬಳಿ ಹೋಗಿದ್ದರು ಮತ್ತು ಈ ಕೇಂದ್ರದ ಕುರಿತು ಹಲವರು ಆಕ್ಷೇಪ ವ್ಯಕ್ತಮಾಡಿದ್ದರು.
ಇಂದು ಆ ಕೇಂದ್ರಕ್ಕೆ ಅವರು ಭೇಟಿ ನೀಡಿದಾಗ ನಾವು ಅಧಿಕೃತ ಪರವಾನಿಗೆಯುಳ್ಳ ಪೋಷಕಾಂಶದ ಆಹಾರದ ಪ್ಯಾಕೇಟನ್ನು ಮಾತ್ರ ಕೊಡುತ್ತೇವೆ, ಇಲ್ಲಿ ಔಷಧ ಅಥವಾ ಆಹಾರ ಕೊಡುವುದಿಲ್ಲ, ನಮ್ಮ ಶಾಖೆಗಳು ಬಹಳ ಕಡೆ ಇದೆ ಎಂದು ಸಮಜಾಯಿಸಿ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವುದರಿಂದ ಜಿಲ್ಲೆಯ ಅಧಿಕಾರಿಗಳಿಂದ ಪರವಾನಿಗೆ ಪಡೆಯಲು ಹೇಳಿ ಬಂದಿರುವುದಾಗಿ ಡಾ. ಉಷಾ ಹೇಳುತ್ತಾರೆ. ನಾವು ಕೊಡುವ ಔಷಧ ತೂಕ ಇಳಿಸಬಹುದು ಅಥವಾ ಏರಿಸಬಹುದು, ಒಂದೇ ಔಷಧ ಎಂದು ಪತ್ರಕರ್ತರಿಗೂ ವಿವರಣೆ ನೀಡುತ್ತಾರೆ. ಆಹಾರ, ನೀರು ಪಥ್ಯದ ಕುರಿತು ಬೋಧನೆ ಮಾಡುತ್ತೇವೆ ಅನ್ನುತ್ತಾರೆ.
ನಿತ್ಯ ನೂರಾರು ಜನ ಇಲ್ಲಿಗೆ ಹೋಗಿ ಬರುವುದನ್ನು ಕಂಡು ಪಕ್ಕದಲ್ಲಿ ನಿಂತಿರುವ ರಿಕ್ಷಾ ಚಾಲಕರು ಈ ಕುರಿತು ಪತ್ರಕರ್ತರ ಗಮನ ಸೆಳೆದರು. ಇಲ್ಲಿಯ ಏಜೆಂಟ ಒಬ್ಬರು ನಾವು ಅಲ್ಲಿ ಎರಡುಮೂರು ದಿನ ಉಚಿತ ಕುಡಿಯಲು ಪಾನೀಯ ನೀಡುತ್ತೇವೆ, ನಂತರ 200ರೂಪಾಯಿ ಕೊಡಬೇಕು ಎಂದು ಹೇಳಿದ್ದರು. ವಿವರವಾಗಿ ತನಿಖೆ ಮಾಡಿದಾಗ ಇಲ್ಲಿ ತೂಕ ಏರಿಸುವ, ಇಳಿಸುವ, ರೋಗ ನಿವಾರಿಸುವ ಪ್ಯಾಕೆಟ್ ಕೊಡುವುದು ಖಚಿತವಾಗಿದೆ. ನನ್ನ ತೂಕ 9ದಿನದಲ್ಲಿ 8ಕೆಜಿ ಇಳಿದಿದೆ, ಮೂರು ತಿಂಗಳಲ್ಲಿ 33ಕೆಜಿ ತೂಕ ಕಡಿಮೆಯಾಗಿದೆ ಎಂದು ಮಹೇಶ ಎಂಬವರು ಹೇಳಿದ್ದರೆ, ನಾಗರಾಜ ಎಂಬವರು ತನ್ನ ತೂಕ 12ಕೆಜಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಔಷಧ ಶಾಸ್ತ್ರ ಓದಿದ ಸರ್ಕಾರಿ ಆಸ್ಪತ್ರೆಯ ಡಾ. ಪ್ರಕಾಶ ನಾಯ್ಕ ಇವರನ್ನು ಕೇಳಿದಾಗ ವ್ಯಾಯಾಮ ಮತ್ತು ಪಥ್ಯದಿಂದ ತೂಕ ನಿಧಾನವಾಗಿ ಕಡಿಮೆಯಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಬೇರೆ ತೊಂದರೆ ಇದ್ದಾಗ ಔಷಧ ಕೊಟ್ಟರೂ ವಾರಕ್ಕೆ 0.5 ಕೆಜಿಯಷ್ಟು ಅಂದರೆ ತಿಂಗಳಿಗೆ 2ಕೆಜಿಯಷ್ಟು ಕಡಿಮೆಮಾಡಬಹುದು ಇದಕ್ಕಿಂತ ಹೆಚ್ಚು ಕಡಿಮೆಮಾಡಲು ಸಾಧ್ಯವಿಲ್ಲ ಎಂದರು. ಇಗ್ನೇಷಿಯಸ್ ಆಸ್ಪತ್ರೆಯ ಔಷಧ ತಜ್ಞ ಡಾ. ಆಶಿಕ್ ಹೆಗಡೆಯವರನ್ನು ಕೇಳಿದಾಗ ನಾವು 9ದಿನದಲ್ಲಿ 8ಕೆಜಿ, 3ತಿಂಗಳಿಗೆ 33ಕೆಜಿ ತೂಕ ಇಳಿಸುವುದನ್ನು ಕೇಳಿಲ್ಲ. ಆಹಾರ ನಿಯಂತ್ರಣ ಕಲಿಸಲು ನ್ಯೂಟ್ರಿಶಿಯನ್ ಪದವಿ ಪಡೆದವರು ಬೇಕು. ಬಾಯಿಮಾತಿನ ಪ್ರಚಾರದಿಂದ ಅವರಿವರನ್ನು ನೋಡಿ ಅನಧಿಕೃತ ಆಹಾರ ಅಥವಾ ಔಷಧ ಸೇವಿಸಿದರೆ ಪರಿಣಾಮಕ್ಕೆ ಅವರೇ ಜವಾಬ್ಧಾರರಾಗುತ್ತಾರೆ ಎಂದು ಹೇಳಿದ್ದಾರೆ. ಈ ಕೇಂದ್ರದ ವ್ಯವಹಾರದ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Comment