ಆತ ಮೂರನೇ ತರಗತಿಯ ವಿದ್ಯಾರ್ಥಿ, ಚಿತ್ರ ಬಿಡಿಸುವುದು ಎಂದರೆ ಆತನಿಗೆ ಪಂಚಪ್ರಾಣ. ಆ ವಯಸ್ಸಿನಲ್ಲಿಯೇ ಆತ ಪೆನ್ಸಿಲ್ ಹಿಡಿದು ಚಿತ್ರ ಬಿಡಿಸುತ್ತ ಕುಳಿತನೆಂದರೆ ಬೇರೇನೂ ಬೇಡ ಎಂಬಂತೆ ಕುಳಿತಿರುತ್ತಿದ್ದ. ಆದರೆ ಅವನು ಓದೋದು ಬರೆಯೋದು ಬಿಟ್ಟು ಚಿತ್ರ ಬಿಡಿಸ್ತಾ ಕುಳಿತಿರ್ತಾನೆ ಅನ್ನೋದು ಮೊದಲಿಂದಲೂ ಆ ಹುಡುಗನ ಪಾಲಕರಿಂದ ಬರುತ್ತಿದ್ದ ಮಾತು. ಆತ ಚಿತ್ರ ಬಿಡಿಸದಂತೆ ಮನೆಯಲ್ಲಿ ಕೆಲವು ಬಾರಿ ತಾಕೀತು ಮಾಡಿದ್ದೂ ಇದೆ ಎಂಬುದು ಹುಡುಗನಿಂದ ನನಗೆ ತಿಳಿದಿತ್ತು. ಆದರೆ ಏನು ಮಾಡೋದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಕ್ಕೇ ಮಹತ್ವ ಹೆಚ್ಚು ಎಂಬುದು ಸರ್ವವಿಧಿತ. ಆ ಹುಡುಗ ಒಮ್ಮೆ ಪರೀಕ್ಷೆ ಬರೆಯುತ್ತಿದ್ದ. ಪರೀಕ್ಷೆ ಬರೆಯುತ್ತಿದ್ದ ಆತ ಅದೆಷ್ಟು ವೇಗದಲ್ಲಿ ಉತ್ತರಗಳನ್ನು ಬರೆದಿದ್ದನೆಂದರೆ ಎಲ್ಲರಿಗೂ ಅದು ಪರಮಾಶ್ಚರ್ಯ. ಪರೀಕ್ಷೆ ಮುಗಿಸಿದ ಹುಡುಗ ಶಿಕ್ಷಕರಿಗೆ ಬರವಣಿಗೆ ಪೂರ್ಣವಾದ ಬಗ್ಗೆ ತಿಳಿಸಿ, ಪೆನ್ಸಿಲ್ ಹಾಗೂ ಒಂದು ಖಾಲೀ ಕಾಗದ ಪಡೆದ. ಎಲ್ಲರೂ ಪರೀಕ್ಷೆ ಮುಗಿಸುವಷ್ಟರಲ್ಲಿ ಆತ ಬಿಡಿಸಿದ ಚಿತ್ರ ಮಾತ್ರ ಮನೋಜ್ಞವಾಗಿತ್ತು. ಎಂದಿಗಿಂತ ಹೆಚ್ಚು ಚಂದದ ಚಿತ್ರ ಅದಾಗಿತ್ತು. ಆ ಚಿತ್ರ ಶಾಲೆಯ ಸೂಚನಾ ಫಲಕ ಸೇರಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದೂ ಸತ್ಯ. ಇದು ಕೇವಲ ಕಟ್ಟು ಕಥೆಯಲ್ಲ. ನನಗೆ ನನ್ನ ಸ್ನೇಹಿತ ಹೇಳಿದ ನಿಜ ಘಟನೆ. ಈಗ ಆ ಹುಡುಗ 7ನೇ ತರಗತಿ ಓದುತ್ತಿದ್ದಾನಂತೆ. ಅವನ ಆಸಕ್ತಿ ನೋಡಿ ಆತನನ್ನು ಒಳ್ಳೆಯ ಚಿತ್ರಕಲಾ ಶಿಕ್ಷಕರ ಹತ್ತಿರ ಈಗ ಕಳಿಸಿಕೊಡಲಾಗುತ್ತಿದೆ ಎನ್ನುತ್ತಾರೆ ಅವರ ಪಾಲಕರು. ಆದರೆ ಮೊದಲು ಅವನ ಆಸಕ್ತಿ ಅರಿಯದೆ ಅವನಿಗೆ ಅದೆಷ್ಟು ಮಾತುಗಳನ್ನು ಹೇಳಿದ್ದೆವೋ ಎಂದು ಕೆಲವೊಮ್ಮೆ ಮರುಗಿದ್ದೂ ಉಂಟಂತೆ.

ನಾವೂ ಅನೇಕ ಸಂದರ್ಭಗಳಲ್ಲಿ ಮಕ್ಕಳ ಆಸಕ್ತಿ ಅರಿಯದೆ, ಅವರ ಭಾವನೆಗಳಿಗೆ ಬೆಲೆ ಕೊಡದೆ ಅವರನ್ನು ಹೀಯಾಳಿಸುವುದು ಅಥವಾ ಗದರುವ ಕೆಲಸ ಮಾಡಿಬಿಡುತ್ತೇವೆ. ಮಗುವಿಗೆ ಅವರ ಅಭಿರುಚಿಗೆ ತಕ್ಕಂತೆ ಬೆಳೆಯಲೂ ಬಿಡುವುದಿಲ್ಲ. ಪ್ರತಿಭಾವಂತರ ಮನಸ್ಸು ಕದಡಿಬಿಡುವ ಹಾಗೂ ನಂತರ ಆ ಬಗ್ಗೆ ಪಶ್ಚಾತ್ತಾಪ ಪಡುವ ಕಾರ್ಯ ನಡೆಯುತ್ತದೆ. ಹೀಗಾಗುವ ಮುನ್ನವೇ ಕೊಂಚ ಯೋಚಿಸೋಣ ಎಂಬುದೇ ಈ ಲೇಖನದ ಉದ್ದೇಶ.
‘ಮಕ್ಕಳೆಂದರೆ ಪ್ರತಿಭೆಯ ಕಣಜ’. ವಾಸ್ತವವಾಗಿ ಹೇಳಬೇಕು ಎಂದರೆ ಎಲ್ಲ ಮಕ್ಕಳು ಮೂಲತಃ ಬುದ್ಧಿವಂತರೇ ಆಗಿರುತ್ತಾರೆ. ಬುದ್ಧಿವಂತಿಕೆ ಅಂದ್ರೆ ಬರೀ ಓದುವುದು ಎಂದರ್ಥವಲ್ಲ. ಪಾಲಕರು ಹಾಗೂ ಶಿಕ್ಷಕರು ಇದನ್ನು ಗಮನಿಸಬೇಕು. ಬುದ್ಧಿವಂತಿಕೆ ಅದು ಎಲ್ಲ ರೀತಿಯ ಕೌಶಲಗಳನ್ನು ಒಳಗೊಂಡಿರುತ್ತದೆ. ಓಡುವುದು, ಕುಣಿಯುವುದು, ಆಟವಾಡುವುದು, ಹಾಡುವುದು, ಚಿತ್ರ ಬಿಡಿಸುವುದು, ಮಾತುಗಾರಿಕೆ ಹೀಗೆ ಮಗು ಈ ಎಲ್ಲದರದಲ್ಲಿ ಅಥವಾ ಈ ಪೈಕಿ ಯಾವುದಾದರೂ ಒಂದು ವಿಷಯದಲ್ಲಿ ಪ್ರತಿಭೆಯನ್ನು ಹೊಂದಿರುತ್ತದೆ. ಪಠ್ಯ ಮತ್ತು ಪಠ್ಯೇತರ ಎರಡೂ ವಿಷಯದಲ್ಲಿ ಮಗು ಏಕಕಾಲಕ್ಕೆ ಪ್ರತಿಭೆಯ ಹೂರಣವಾಗಿರುತ್ತದೆ. ಇದನ್ನು ಪಾಲಕರು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಸಾಣೆ ಹಿಡಿದು, ಪ್ರೋತ್ಸಾಹಿಸಬೇಕು. ಈ ಸಮಯದಲ್ಲಿಯೇ ಮಗುವಿಗೆ ಬೆಂಬಲ ನೀಡಬೇಕು. ಇದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಪದ್ಧತಿ ಕೂಡ ಮನೋವೈಜ್ಞಾನಿಕವಾಗಿರಬೇಕು. ಆದರೆ, ಸದ್ಯ ನಮ್ಮಲ್ಲಿ ಸಾಮುದಾಯಿಕವಾಗಿ ಇಂಥ ವಾತಾವರಣ ಇಲ್ಲ ಎಂದೇ ಹೇಳಬೇಕು. ಎಚ್ಚೆತ್ತ ಕೆಲವು ಪಾಲಕರು ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುತ್ತಿರುವುದನ್ನು ನಾವು ಗಮನಿಸಬೇಕು. ಅಂತಹ ಪಾಲಕರು ಇತರರಿಗೆ ಮಾದರಿಯಾಗಬೇಕು.

ಮಕ್ಕಳನ್ನು ಹೇಗೆ ಬೆಳಸಬೇಕು? ಎಂಬ ಪ್ರಶ್ನೆ ಎದುರಾದಾಗಲೆಲ್ಲಾ, ನನಗೆ ನೆನಪಿಗೆ ಬರುವುದು ಒಂದು ಗಿಡದ ಉದಾಹರಣೆ. ಚಿಕ್ಕದೊಂದು ಬೀಜ ಮೊಳೆತು ಪುಟ್ಟ ಗಿಡವಾಗಿ ಬೆಳೆಯುವಾಗ ಅಗತ್ಯ ನೀರನ್ನು ಒದಗಿಸಬೇಕು. ನೀರು ಹೆಚ್ಚಾದರೂ ಬೀಜ ಕೊಳೆಯುತ್ತದೆ. ಹಾಗೆಯೇ ನೀರೇ ಇಲ್ಲದಿದ್ದರೂ ಬೀಜ ಒಣಗುತ್ತದೆ. ಅದೇ ಗಿಡ ಬೆಳೆಯುವಾಗ ಗಿಡವನ್ನು ಬಿಸಿಲಿಗೆ (ತಾಪಕ್ಕೆ) ಒಡ್ಡುತ್ತಲೇ, ಅದಕ್ಕೆ ಸರಿಯಾದ ಪ್ರಮಾಣದ ನೀರು, ಗೊಬ್ಬರ ಹಾಕಿದರೆ ಮಾತ್ರ ಚೆಂದದ ಹೂವುಗಳನ್ನು ಪಡೆಯಲು ಸಾಧ್ಯ. ಅಂದರೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಅರಳಿಸುವುದು, ಮುದುಡಿಸುವುದು ನಮ್ಮ ಕೈಯಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪ್ರತಿಭೆಗೂ ಅಗತ್ಯವಾದ ಪೋಷಣೆ ಬೇಕು. ನೀರೆರೆವ ಜನರು ಇರಬೇಕು. ಮೆಚ್ಚಿ ಪ್ರೋತ್ಸಾಹಿಸುವ, ಬೆಂಬಲ ನೀಡುವವರ ಸಾಮಿಪ್ಯ ಬೇಕು.
ಜಪಾನ್ನಲ್ಲಿ ಎಲ್ಲ ಮನೆಯ ಮಕ್ಕಳು ಸಾಮಾನ್ಯವಾಗಿ ಯಾವುದಾದರೊಂದು ಪಠ್ಯೇತರ ಚಟುವಟಿಕೆಯಲ್ಲಿ ಶಕ್ತಿಯುತವಾಗಿರುತ್ತಾರಂತೆ. ಅಲ್ಲಿ 6ನೇ ತರಗತಿವರೆಗೆ ಮಕ್ಕಳಿಗೆ ಪರೀಕ್ಷೆಯೇ ನಡೆಯುವುದಿಲ್ಲವಂತೆ. ಪರೀಕ್ಷೆ ಇಲ್ಲದೇ ಮಕ್ಕಳಿಗೆ ಪ್ರೇರಣೆ ನೀಡುವುದು ಹೇಗೆ? ಅವರು ಗುರಿ ತಲುಪುವುದು ಹೇಗೆ? ಈ ಪ್ರಶ್ನೆಗೆ ಅಲ್ಲಿನ ಭಾರತೀಯ ಸಂಜಾತೆ ತಾಯಿಯೊಬ್ಬಳು ಹೇಳಿದ ಮಾತುಗಳು “ನಾವು ಮಕ್ಕಳನ್ನು ದೇಶಕ್ಕಾಗಿ ಬೆಳಸುತ್ತೇವೆ ನಿನ್ನ ಮನೆ, ನಿಮ್ಮ ಪರೀಕ್ಷೆ, ನಿಮ್ಮ ಅಪ್ಪನ ಆಸೆ ಈ ಎಲ್ಲವನ್ನೂ ಮೀರಿ ದೇಶಕ್ಕಾಗಿ ಓದಬೇಕು, ದೇಶಕ್ಕಾಗಿ ಹಾಡಬೇಕು, ದೇಶಕ್ಕಾಗಿ ಆಟವಾಡು, ದೇಶಕ್ಕಾಗಿ ಕುಣಿ. ನೀನು ಮುಂದೆ ಒಳ್ಳೆಯ ರೈತ, ಉತ್ತಮ ಕಲಾವಿದ, ಯಶಸ್ವಿ ಉದ್ಯಮಿ, ಸ್ವಚ್ಛ ರಾಜಕಾರಣಿಯಾಗಬೇಕು ಎಂಬ ಭಾವನೆಯನ್ನು ಬೆಳಸುತ್ತೇವೆ'' ಎಂದಳು. ಅಮೇರಿಕಾದಲ್ಲಿ ತರಗತಿಗೆ ವಾರದ ಸಿಲೇಬಸ್ ಮಾಡಲಾಗುತ್ತದಂತೆ, ಅದರ ಮೂಲಕವೇ ಶಿಕ್ಷಣ ಸಾಗುವುದು. ಅಲ್ಲಿ ತರಗತಿಗೆ ಎರಡು ಪಠ್ಯೇತರ ಚಟುವಟಿಕೆ ಸಿಲೇಬಸ್ ಒಳಗೇ ಸೇರಿಬಿಡುತ್ತದಂತೆ. ಬರವಣಿಗೆ, ಓಟ, ಆಟ, ಹಾಡುವಿಕೆ ಇವೆಲ್ಲವೂ ಅಲ್ಲಿಯ ಶಿಕ್ಷಣದ ಭಾಗಗಳು. ಆದರೆ ನಾವು ನಮ್ಮ ಮಕ್ಕಳಲ್ಲಿ ಇರುವ ಪ್ರತಿಭೆಯನ್ನೂ ಬೆಳೆಯಲು ಬಿಡದೆ ಅಷ್ಟು ಕ್ರೂರವಾಗಿ ವರ್ತಿಸುತ್ತೇವೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಲ್ಲವೇ?
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಪಠ್ಯೇತರ ವಿಷಯಗಳು, ಸಹಜ ಜೀವನ ಕೌಶಲ್ಯಗಳು, ಪರಿಶ್ರಮ, ವಿವೇಕಯುತ ಸ್ಪರ್ಧೆ, ಬೆಳವಣಿಗೆಗೆ ಬೇಕಾದ ಅವಮಾನ ಎಲ್ಲವೂ ಸೇರಬೇಕು. ಈ ಎಲ್ಲವೂ ಒಂದು ರೀತಿಯಲ್ಲಿ ಹೂವು ಅರಳಲು ಬೇಕಾದ ತಾಪವಿದ್ದಂತೆ. ನಾವು ಮಕ್ಕಳನ್ನು ಬೆಳಸಬೇಕಿರುವ ಪರಿ ಇದು. ಆದರೆ, ನಮ್ಮ ದೇಶದಲ್ಲಿ ಕಲಿಕೆಯ ಜೊತೆಗೆ ಇರಬೇಕಾದ ಅಂಶಗಳೇ ಕಾಣುತ್ತಿಲ್ಲ. ಇಲ್ಲಿ ಸ್ಪರ್ಧೆ ಎಂಬುದು ಮಾನಸಿಕ ಒತ್ತಡವನ್ನು ಉಂಟು ಮಾಡುವ ಕ್ಷೋಭೆಯಾಗಿದೆ. ನಮ್ಮ ಕಲಿಕೆಯಲ್ಲಿ ಸಹಜ ಸ್ಪರ್ಧೆಗಳಿಲ್ಲ, ಜೀವನಕ್ಕೆ ಅಗತ್ಯವಾದ ಅಂಶಗಳ ಬಗ್ಗೆ ನಾವುಗಳೂ ಗಮನ ನೀಡುತ್ತಿಲ್ಲ. ನಮ್ಮಲ್ಲಿ ಮಕ್ಕಳ ಶಿಕ್ಷಣ ಹಾಗೂ ನಮಗೆ ಕಣ್ಣಿಗೆ ಕಾಣುವ ಮಕ್ಕಳ ಸ್ಪರ್ಧೆ, ಅಳು, ನಗು, ಅವಮಾನ, ಸಂತಸ, ಸಂಭ್ರಮ ಎಲ್ಲವೂ ನೈಜತೆಯಿಂದ ಕೂಡಿರುವುದಿಲ್ಲ. ಆ ಎಲ್ಲ ಭಾವನೆಗಳ ಹಿಂದೆ ನಾಟಕೀಯತೆ ಇರುತ್ತದೆ ಹಾಗೂ ಅದರ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಹಾಗಾಗಿ ನಾವು ರಿಯಾಲಿಟಿ ಶೋಗಳಂತಾಗಿರುವ ನಮ್ಮ ಬದುಕನ್ನು ಹಾಗೂ ಮಕ್ಕಳ ಜೀವನವನ್ನು ಸರಿಯಾಗಿ ಅರ್ಥಮಾಡಿಸಿಕೊಡಬೇಕು. ಸೂಕ್ತವಾಗಿ ಅದನ್ನು ನಾವೂ ಅರಿತುಕೊಂಡು ಇತರರಿಗೂ ಹೇಳುವ ಅಗತ್ಯತೆ ಹೆಚ್ಚಿದೆ.
ಎಲ್ಲ ಮಕ್ಕಳು ಕೂಡ ಅವರವರ ಪಾಲಕರಿಗೆ ಬಾಲ್ಯದಲ್ಲಿಯೇ ಒಂದು ಸಂಭ್ರಮ, ಸಾಂತ್ವನ ನೀಡಿರುತ್ತವೆ. ಮೊದಲ ಮೂರ್ನಾಲ್ಕು ವರ್ಷಗಳ ಕಾಲ ಮಗುವಿನಿಂದ ಪಾಲಕರಿಗೆ ಸಿಗುವ ಅನುಭೂತಿ, ಮತ್ತೆ ಯಾವತ್ತೂ ಸಿಗುವುದಿಲ್ಲ. ಇದೇ ಕಾರಣಕ್ಕೆ ಪಾಲಕರು ಮಕ್ಕಳ ಮೇಲೆ ಭಾರ ಹಾಕುವುದನ್ನು ನಿಲ್ಲಿಸಬೇಕು. ಎಲ್ಲ ಶಿಕ್ಷಣ ತಜ್ಞರು ಹೇಳುವಂತೆ, ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತೆ. ಅದನ್ನು ಸರಿಯಾಗಿ ಗುರುತಿಸಿ, ಅದಕ್ಕೆ ಪಾಲಕರು ನೀರೆರೆಯಬೇಕು. ಈಗಿನ ತಲೆಮಾರಿನ ಮಕ್ಕಳಂತೂ, ನಾನಾ ಕಾರಣಗಳಿಂದಾಗಿ ಬಹಳ ಬುದ್ಧಿವಂತರೇ ಆಗಿರುತ್ತಾರೆ. ಅವರ ಐಕ್ಯೂ ಕೂಡ ಹೆಚ್ಚಿದೆ. ಮಕ್ಕಳಲ್ಲಿ ಮೂರ್ನಾಲ್ಕು ರೀತಿಯ ಪ್ರತಿಭೆ ಮೇಳೈಸಿರಬಹುದು. ಇದನ್ನು ಸರಿಯಾಗಿ ಸಾಣೆ ಹಿಡಿದು, ಅವುಗಳನ್ನು ಬೆಳಸುವ ಜವಾಬ್ದಾರಿ ಪಾಲಕರದ್ದೇ..! ಮುಂದೊಮ್ಮೆ ಅಯ್ಯೋ..! ಹೀಗೆ ಮಾಡಿರದಿದ್ದರೆ ನಮ್ಮ ಮಕ್ಕಳು ಪ್ರತಿಭಾವಂತರೇ ಆಗಿರುತ್ತಿದ್ದರು ಎಂದು ಕೊರಗುವ ಕಾಲ ಬರುವ ಮುನ್ನ ಈ ಬಗ್ಗೆ ಚಿಂತಿಸಬೇಕಲ್ಲವೇ?
Leave a Comment