
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಅದು ಕರೋನ . ಯಾವುದೇ ವಾರ್ತಾ ಚಾನೆಲ್ ಹಚ್ಚಿದರೂ ಕಾಣಸಿಗುವ ಮೊದಲ ಅಂಶವೇ ಕರೋನ . ಸುಮಾರು ಎರಡು ತಿಂಗಳಿನಿಂದಲೂ ಈ ಒಂದು ಶಬ್ದ ಕಿವಿ ಮೇಲೆ ಬೀಳುತ್ತಿತ್ತಾದರೂ ಅದರ ತೀವ್ರತೆ ಅಷ್ಟೊಂದು ಆಗಿರಲಿಲ್ಲ. ಕಾರಣ ಇಷ್ಟೇ,ಆಗ ಅದು ಬರಿ ಸುದ್ದಿ ಮಾಡಿದ್ದು ಚೀನಾದಲ್ಲಿ ಮಾತ್ರ. ನಾವೆಲ್ಲಾ ಹಾಗೆ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆಯೇ ಗುಂಡಿ ತೊಡುವವರು. ಹಾಗಾಗಿ ಆಗ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ದೇಶದ ಮೂಲೆ ಮೂಲೆಯಲ್ಲೂ ಈ ಕರೋನ ಎಂಬ ಮಾಧ್ಯಮ ಘೋಷಿತ ಮಹಾಮಾರಿಯದೆ ಮಾತು. ಹಾಗಾದರೆ ಏನಿದು ಕರೋನ ,ಯಾಕಿಷ್ಟು ಚಿಂತೆ,ಯಾಕಿಷ್ಟು ಗಲಭೆ ಬನ್ನಿ ಸಣ್ಣದಾಗಿ ನೋಡಿ ಬರೋಣ.
COVID -19 ಅಥವಾ ಕೊರೊನ ವೈರಲ್ ಡಿಸೀಸ್ ೨೦೧೯ ಇದು ಇತ್ತೀಚಿಗಿನ ರೋಗವೇನು ಅಲ್ಲದಿದ್ದರೂ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು ಈಗಲೇ. ಚೀನಾದ ವುಹಾನ್ ನ ಒಂದು ಮಾಂಸದ ಮಾರುಕಟ್ಟೆಯಿಂದ ಸುದ್ದಿ ಪಡೆದುಕೊಂಡ ಈ ಕರೋನ 2003 ರ ಆಸುಪಾಸಿನಲ್ಲೆ ಒಮ್ಮೆ ಹವಾ ಎಬ್ಬಿಸಿ ಹೋಗಿತ್ತು. ಆಗ ಹೆಸರು ಕೊರೊನ ಆಗಿರದೆ ಸಾರ್ಸ್ ಎಂಬುದಾಗಿ ಇತ್ತು ಅಷ್ಟೇ. ಅದೇ ರೀತಿಯ ವೈರಾಣುವಿನಿಂದ ಹರಡುವ ಇನ್ನೊಂದು ರೋಗಕ್ಕಿರುವ ಹೆಸರು ಕರೋನ . ಈ ಕರೋನ ಪ್ರಕರಣ ಮೊದಲು ಅಧಿಕೃತವಾಗಿ ಘೋಷಣೆಯಾಗಿದ್ದು ೩೧ ನೇ ಡಿಸೇಂಬರ್ ೨೦೧೯ ರಂದು . ಮೊದಲ ಪ್ರಕರಣ ದಾಖಲಿಸಿದ್ದು ಚೀನಾದ ವುಹಾನ್ ಸರ್ಕಾರ. ನಂತರ ಇದು ಚೀನಾದ ತುಂಬೆಲ್ಲ ಹರಡಿ ಭಾರಿ ಸದ್ದನ್ನೇ ಉಂಟುಮಾಡಿತ್ತು. ಆದರೂ ಇದು ಅಂತಹ ಮಾರಣಾಂತಿಕ ರೋಗವಲ್ಲ. ಈ ಕೋರೋಣ ಪ್ರಕರಣದಿಂದ ಮೃತಪಟ್ಟ ಮೊದಲ ದಾಖಲೆ ಆಗಿರುವುದು ೧೧ ಜನವರಿ ೨೦೨೦ ರಂದು,ಅದು ಚೀನಾದಲ್ಲೇ. ೬೧ ವರ್ಷದ ಮುದುಕ ಈ ರೋಗಬಂದು ಸಾವನ್ನಪ್ಪಿದ್ದ ಎಂದು ಅಲ್ಲಿನ ಆರೋಗ್ಯ ಇಲಾಖೆ ವರದಿ ಮಾಡಿತ್ತು. ಆದರೆ ಆತ ಕೇವಲ ಕೊರೊನ ದಿಂದ ಮಾತ್ರ ಸಾವನ್ನಪ್ಪಿಲ್ಲ ಎಂದು ಆತನ ಕುರಿತಾದ ಎಲ್ಲ ದಾಖಲೆಗಳು ಹೇಳುತ್ತದೆ. ನಂತರ ಇದು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಹರಡುತ್ತಾ ಹೋಯಿತು. ಇಟಲಿ,ಯುರೋಪಿಯನ್ ರಾಷ್ಟ್ರಗಳು, ಕೊನೆಗೆ ಭಾರತಕ್ಕೂ ಇದು ಕಾಲಿಟ್ಟಿತು.

ಈ ಕೊರೊನ ವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಅದು ಹಾಗೆ ಘೋಷಿಸುವುದಕ್ಕೂ ಈರದು ಕಾರಣಗಳನ್ನು ನೀಡಿದೆ. ಮೊದಲನೆಯದು ಅದು ಹರಡುತ್ತಿರುವ ಪ್ರಮಾಣ ಹಾಗೂ ಎರಡನೆಯದು ಅದು ಹರಡುತ್ತಿರುವ ವೇಗ. ವಿಶ್ವ ಆರೋಗ್ಯ ಸಂಸ್ಥೆ WHO ದ ಪ್ರಕಾರ ಇಲ್ಲಿಯವರೆಗೂ ೧೧೮ ದೇಶಗಳಿಂದ ಸುಮಾರು ೧೨೫೦೦೦ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಕಳೆದ ಎರಡು ವಾರಗಳಲ್ಲಿ ಈ ವೈರಸ್ ನ ಹರಡುವಿಕೆಯ ಪ್ರಮಾಣ ಅದೆಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಚೀನಾವನ್ನು ಹೊರತುಪಡಿಸಿಯೇ ರೋಗ ಪೀಡಿತರ ಸಂಖ್ಯೆ ೧೩ ಪಟ್ಟು ಹೆಚ್ಚಲಾಗಿದೆ. ಪೀಡಿತ ದೇಶಗಳ ಸಂಖ್ಯೆಯೂ ೩ ಪಟ್ಟು ಹೆಚ್ಚಾಗಿದೆ .ಆದರೆ ಇನ್ನು ವರೆಗೂ ೭೭ ದೇಶಗಳು ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಿಲ್ಲ . ಅಲ್ಲದೆ ಪೀಡಿತ ೧೧೮ ದೇಶಗಳಲ್ಲಿ ೫೫ ರಾಷ್ಟ್ರಗಳಲ್ಲಿ ೧೦ ಕ್ಕಿಂತಲೂ ಕಡಿಮೆ ಪ್ರಕರಣವನ್ನು ದಾಖಲಿಸಿವೆ. ಇವೆಲ್ಲವೂ ೧೩ ಮಾರ್ಚ ಸಂಜೆ ೫.ಗಂಟೆಯ ವರದಿಗಳ ಪ್ರಕಾರ. ಇದರ ಸಂಖ್ಯೆ ಇನ್ನಷ್ಟು ಹೆಚ್ಚಲೂ ಬಹುದು ,ಹೆಚ್ಚಿರಲೂಬಹುದು. ಅಲ್ಲದೆ ವಿಶ್ವಸಂಸ್ಥೆ ಕೆಲವು ದೇಶಗಳು ಇನ್ನೂ ಎಚ್ಚೆತ್ತುಕೊಳ್ಳದಿರುವುದು ಕಳವಳಕಾರಿ ಸಂಗತಿ ಎಂದು ಅಸಮಾಧಾನವನ್ನು ಹೊರಹಾಕಿದೆ.ರೋಗ ಪೀಡಿತವಾದ ೫೭ ದೇಶಗಳಿಗೆ ವಿಶ್ವಸಂಸ್ಥೆಯೇ ರಕ್ಷಣಾ ಸಾಧನವನ್ನು ಸರಬರಾಜು ಮಾಡಿದೆ. ಮತ್ತೂ ೨೮ ದೇಶಗಳಿಗೆ ಕಳುಹಿಸಲು ತಯ್ಯಾರಿ ನಡೆಸುತ್ತಿದೆ.
ಕೋರೋನ ಎಂದರೆ ಕೀರೀಟ ಎಂದರ್ಥ. ಅದರ ಮೈಮೇಲೆಲ್ಲ ಇರುವ ಮುಳ್ಳಿನಾಕಾರದ ರಚನೆಗಳಿಂದ ಅದು ನೋಡಲು ಕೀರೀಟದಂತೆಯೇ ಕಾಣುತ್ತದೆ. ಅಲ್ಲದೆ ಇದೊಂದು ಸಾಮಾನ್ಯ ಜ್ವರದಿಂದ ಪ್ರಾರಂಭವಾಗುವ ರೋಗ. ಜ್ವರ,ಕೆಮ್ಮು,ಗಂಟಲು ನೋವು ಇದರ ಲಕ್ಷಣಗಳು. ಒಬ್ಬರಿಂದ ಒಬ್ಬರಿಗೆ ಇದು ಸುಲಭವಾಗಿ ಹರಡುತ್ತದೆ. ಕೆಮ್ಮು,ಕಫ,ಸೀನುಗಳಿಂದ ಸಾಮಾನ್ಯವಾಗಿ ಇದು ಬಹಳ ಬೇಗನೆ ಇನ್ನೊಬ್ಬರನ್ನು ತಲುಪುತ್ತದೆ. ಸೋಂಕಿತ ವ್ಯಕ್ತಿಗಳೊಂದಿಗೆ ಯಾವುದೇ ಬಾಹ್ಯ ಸಂಪರ್ಕ ಹೊಂದಿದ್ದರೂ ಇದು ಹರಡುವ ಸಾಧ್ಯತೆಗಳಿವೆ. ಹಾಗಾಗಿ ವ್ಯಕ್ತಿಗಳೊಂದಿಗೆ ಕನಿಷ್ಠ ೬ ಅಡಿ ದೂರ ಕಾಯ್ದುಕೊಳ್ಳುವುದು ಆರೋಗ್ಯಕರ . ಇದು ಒಬ್ಬ ವ್ಯಕ್ತಿಯಲ್ಲಿ ತನ್ನ ಕಾರ್ಯ ಆರಂಭಿಸಲು ಕನಿಷ್ಠ ೧೪ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿಯೇ ಭಾರತ ಸರ್ಕಾರ ವಿದೇಶದಿಂದ ಬಂಡ ವ್ಯಕ್ತಿಗಳನ್ನು ೧೪ ದಿನಗಳ ಕಾಲ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿ ಇರದಂತೆ ,ಅಂತರ ಕಾಯ್ದುಕೊಳ್ಳಲು ವಿನಂತಿಸಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯು ದೂರವಿರಲು ಕೆಲವು ವಿಧಾನಗಳನ್ನು ಸೂಚಿಸಿದೆ. ಅವುಗಳೆಂದರೆ ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವುದು ,ಸಾಮಾಜಿಕವಾಗಿ ವ್ಯಕ್ತಿಗಳೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು. ಕಣ್ಣು ಮೂಗು,ಬಾಯಿಯನ್ನು ಪದೇ ಪದೇ ಸ್ವಚ್ಛಗೊಳಿಸಿಕೊಳ್ಳುವುದು. ಉಸಿರಾಟದ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು . (ಸೀನುವ ವ್ಯಕ್ತಿಗಳ ಬಳಿ ಉಸಿರಾಟ ಮಾಡದಿರುವುದು). ಅಲ್ಲದೆ ಬಹಳಷ್ಟು ರಾಷ್ರ್ಟಗಳು ಶುಭಾಷಯ ಕೋರಲು ಭಾರತೀಯ ಪದ್ಧತಿಯಾದ ನಮಸ್ಕಾರವನ್ನು ಉತ್ತೇಜಿಸುತ್ತಿವೆ.
ಭಾರತ ಸರ್ಕಾರವೂ ಕೂಡ ಈ ಕುರಿತಂತೆ ಸಾಕಷ್ಟು ಎಚ್ಚರಿಕೆ ವಹಿಸಿದೆ. ಭಾರತ ಸರ್ಕಾರವು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಅನುಸರಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ. ಪ್ರಧಾನಿಯವರೂ ಈ ಕುರಿತು ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಸಾರ್ಕ್ ರಾಷ್ಟ್ರಗಳ ರಕ್ಷಣೆಗೂ ಭಾರತ ಸಿದ್ಧವಾಗಿದೆ ಎಂದಿದ್ದಾರೆ. ಜನವರಿಯಲ್ಲೇ ವುಹಾನನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಂಡಿತ್ತು. ಇದುವರೆಗೂ ಭಾರತದಲ್ಲಿ ೧೩ ಮಾರ್ಚ ಅಂತ್ಯಕ್ಕೆ ವಿಮಾನ ನಿಲ್ದಾಣಗಳಲ್ಲಿ ಸುಮಾರು ೧೧,೭೧,೦೬೧ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೧೩ ಮಾರ್ಚ ೨೦೨೦ರ ಸಂಜೆ ೫ ಗಂಟೆಯವರೆಗಿನ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ೮೧. ಅದರಲ್ಲಿ ಅತ್ಯಂತ ಹೆಚ್ಚು ಭಾದಿತವಾದ ರಾಜ್ಯ ಕೇರಳ . ದೇಶದಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ಕೇವಲ ಒಂದು ಮಾತ್ರ . ಅದೂ ಕರ್ನಾಟಕದಲ್ಲಿ ಒಬ್ಬ ವಯಸ್ಕ.ಅದಲ್ಲದೆ ಹರ್ಯಾಣದಲ್ಲಿ ಮಾರ್ಚ್ ಮೂವತ್ತೊಂದರ ವರೆಗೆ ಎಲ್ಲ ಶಾಲಾ ಕಾಲೇಜುಗಳಿಗೆ ಅಲ್ಲಿನ ಸರ್ಕಾರ ರಜೆ ಘೋಷಿಸಿದೆ. ಇದರಿಂದಾಗಿ ಭಾರತದ ಅಷ್ಟೇ ಏಕೆ ಇಡೀ ವಿಶ್ವದ ಶೇರು ಮಾರುಕಟ್ಟೆ ಕುಸಿದು ಪಾತಾಳಕ್ಕೆ ಹೋಗಿ ಕುಳಿತಿದೆ. ಮಾಂಸದ ವ್ಯಾಪಾರ ಶೇಕಡಾ ೭೦ ರಷ್ಟು ಕಡಿಮೆ ಯಾಗಿದೆ. ಜನರು ಪಾಸ್ಟ್ ಫುಡ್ ತಿನ್ನುವುದನ್ನೂ ಕಡಿಮೆ ಮಾಡಿದ್ದಾರೆ. ಎಲ್ಲ ಕಡೆಗಳಲ್ಲೂ ಜನ ಮಾಸ್ಕ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಾಸ್ಕನ್ನು ಅತಿಯಾಗಿ ಬಳಸದಂತೆಯೂ ವಿನಂತಿಸಿದೆ. ಏಕೆಂದರೆ ಈಗಾಗಲೇ ೮೯ ಮಿಲಿಯನ್ ಮಾಸ್ಕಗಳು ಮಾರಾಟವಾಗಿವೆ, ಕೊನೆಯಲ್ಲಿ ಅದು ನಿಜವಾಗಿ ಅವಶ್ಯಕತೆ ಇರುವವರಿಗೆ ಸಿಗದೇ ಇರಬಹುದು ಎಂದೂ ಎಚ್ಚರಿಸಿದೆ. ಈ ರೋಗ ಪೀಡಿತರಲ್ಲಿ ಸುಮಾರು ೮೦ ಪ್ರತಿಶತ ಜನ ಯಾವುದೇ ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ ಎಂದೂ ತಿಳಿಸಿದೆ. ಆದರೆ ಸಮಸ್ಯೆ ಇರುವುದು ಇದರ ಹರಡುವಿಕೆಯ ವೇಗದಲ್ಲಿ . ಹಾಗಾಗಿ ಆದಷ್ಟು ಮನೆಯಲ್ಲೇ ಇರುವಂತೆ,ಮನೆಯಿಂದಲೇ ಕೆಲಸ ಮಾಡುವಂತೆ ಕೇಳಿಕೊಂಡಿದೆ.
ಕರ್ನಾಟಕ ಸರ್ಕಾರವೂ ಈ ಕುರಿತಾಗಿ ಕಾಳಜಿಯ ಹೆಜ್ಜೆಗಳನ್ನು ಇಡುತ್ತಿದೆ. ಕಳೆದ ವಾರ ಈ ಕುರಿತಾಗಿ ಹೊಸ ನೀತಿ ನಿಯಮಾವಳಿಗಳನ್ನು ರೂಪಿಸಿದೆ. ಅಷ್ಟೇ ಅಲ್ಲದೆ ಮಾರ್ಚ್ ೧೩ ರಂದು ೧೫ ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಿಸಿದೆ. ಯಾವುದೇ ಸಾರ್ವಜನಿಕ ಸಭೆ ಸಮಾರಂಭ ನಡೆಸದಂತೆ ಕೇಳಿಕೊಂಡಿದೆ. ಕಲಬುರಗಿಯ ಜಾತ್ರೆಯನ್ನೂ ಮುಂದೂಡಿದೆ. ಎಲ್ಲ ಮಾಲ್ ,ಪಬ್ ,ಹಾಗೂ ಥಿಯೇಟರ್ ಗಳನ್ನೂ ಒಂದು ವಾರಗಳ ಕಾಲ ಮುಚ್ಚುವಂತೆ ಆದೇಶ ಹೊರಡಿಸಿದೆ. ೧ ರಿಂದ ೬ ನೇ ತರಗತಿಯ ಮಕ್ಕಳಿಗೆ ಬೇಸಿಗೆ ರಜೆಯನ್ನೂ ಈಗಲೇ ನೀಡಿದೆ.ಇನ್ಫೋಸಿಸ್ ನ ಸುಧಾ ಮೂರ್ತಿಯವರು ಈ ರೋಗದ ಚಿಕಿತ್ಸೆಗಾಗಿ ತಮಗೆ ಒಂದು ಆಸ್ಪತ್ರೆಯನ್ನು ಬಿಟ್ಟು ಕೊಡುವಂತೆ ಮನವಿಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದು ಡೆಂಗ್ಯೂ,ಮಂಗನ ಕಾಯಿಲೆಯಂತಹ ಮಾರಣಾಂತಿಕ ರೋಗವಲ್ಲದಿದ್ದರೂ ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಇಲ್ಲಿಯವರೆಗೂ ನಡೆದ ಸಾವಿನ ಪ್ರಮ್ಮಣ ಕೇವಲ ೩. ೪ ಅಷ್ಟೇ. ಇದು ಹೆಚ್ಚಲಾಗದಿರಲೆಂದು ಆಶಿಸೋಣ.Prevention is better than cure . ಹಾಗಾಗಿ ಆದಷ್ಟು ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ . ಸ್ವಚ್ಛತೆಯನ್ನು ಕಾಯ್ದುಕೊಳ್ಳೋಣ .ಕಾಯ್ದುಕೊಳ್ಳೋಣ .
Leave a Comment