
ಕುಮಟಾ : ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿರುವ ಹಾಗೂ ಜನಮನ್ನಣೆಗಳಿಸಿರುವ ಸತ್ವಾಧಾರ ಫೌಂಡೇಶನ್(ರಿ) ನಿಂದ ಭಾರತದಲ್ಲಿ ಕರೋನಾ ಮುನ್ನೆಚ್ಚರಿಕೆಯಿಂದ ಕರೆ ನೀಡಲಾದ ಲಾಕ್ ಡೌನ್ ಸಮಯದ ಸದುಪಯೋಗ ಹಾಗೂ ಸುಮನಸುಗಳು ಒಂದೆಡೆಗೆ ಸೇರುವ ದಿಶೆಯಲ್ಲಿ ಆನ್ ಲೈನ್ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಕುಮಟಾ, ಹೊನ್ನಾವರ,ಅಂಕೋಲಾದ ಸುಮಾರು ೧೩ಕವಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಿದರು. ಝೂಮ್ ಅಪ್ಲಿಕೇಶನ್ ಮೂಲಕ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಕವಿಗೋಷ್ಠಿ ನಡೆದು ಎಲ್ಲರೂ ವಿಡಿಯೋದಲ್ಲಿ ಕವನ ವಾಚನ ಮಾಡಿದರು.
ಕಾರ್ಯಕ್ರಮವನ್ನು ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ಟರವರು ಉದ್ಘಾಟಿಸಿದರು. ಲಾಕ್ ಡೌನ್ ಸಮಯದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಸತ್ವಾಧಾರ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ. ವಿಶ್ವ ಇಂದು ವೇಗದ ಬದುಕಿನತ್ತ ಸಾಗುತ್ತಿತ್ತು. ಆದರೆ ಕರೋನಾ ಮಹಾಮಾರಿಯ ಕರಿನೆರಳಲ್ಲಿ ಎಲ್ಲರೂ ಮನೆಗಳಲ್ಲಿ ಉಳಿಯುವಂತಾಯಿತು. ಇಂತಹ ಸಂದರ್ಭದಲ್ಲಿಯೂ ಎಲ್ಲರೂ ಅವರವರ ಮನೆಗಳಲ್ಲಿಯೇ ಇದ್ದು ಕವಿಗೋಷ್ಠಿ ನಡೆಸುವ ಯೋಜನೆ ಹಾಗೂ ಯೋಚನೆ ನಿಜಕ್ಕೂ ಮೆಚ್ಚುವಂತಹುದು. ಇಂತಹ ನಾವಿನ್ಯ ಚಟುವಟಿಕೆ ಬದುಕಿಗೆ ಹೊಸ ಚೈತನ್ಯ ನೀಡುವುದು. ನಮಗೂ ಇದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಇಂತಹ ಕಾರ್ಯಗಳು ಹೆಚ್ಚಿದಾಗ ಸಾಹಿತ್ಯ ಕ್ಷೇತ್ರ ಬೆಳೆಯುವುದು ಹಾಗೂ ಉಳಿಯುವುದು. ಇಂತಹ ಸುಂದರ ಕಾರ್ಯಕ್ರಮದ ರುವಾರಿಗಳಾದ ಸತ್ವಾಧಾರ ಫೌಂಡೇಶನ್ ನ ಎಲ್ಲ ಸದಸ್ಯರಿಗೆ ಅಭಿನಂದನೆ ಎಂದು ಅವರು ಶುಭ ನುಡಿಯನ್ನು ಆಡಿದರು.
ಕಳೆದ ಮೂರು ವರ್ಷಗಳಿಂದ ಸತ್ವಾಧಾರ ಫೌಂಡೇಶನ್ ವಿನೂತನ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಂಡು ಜನತೆಯ ಮನ ಗೆದ್ದಿದೆ. ಮನ-ವಿಕಸನ ಶಿಬಿರಗಳು,ಭಾಷಾಂತರಂಗವೆಂಬ ಭಾಷೆಯ ಬಾಂಧವ್ಯವನ್ನು ಬೆಳೆಸುವ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ, ಭಾಷೆ, ಸಾಮಾಜಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಜನತೆಗೆ ನೀಡಿದ ಹೆಮ್ಮೆ ನಮಗಿದೆ ಎಂದು ಸತ್ವಾಧಾರ ಫೌಂಡೇಶನ್ ನ ಜಿಲ್ಲಾ ಸಮನ್ವಯ ಅಧಿಕಾರಿಗಳಾಗ ಡಾ.ರವೀಂದ್ರ ಭಟ್ಟ ಸೂರಿಯವರು ನುಡಿದರು.
ಹಿರಿಯ ಕವಿಗಳು ಹಾಗೂ ಸಾಹಿತಿಗಳಾದ ಶ್ರೀ ಗಣಪತಿ ಹೆಗಡೆ ಕೊಂಡದಕುಳಿ, ಶ್ರೀ ಪಿ.ಆರ್ ನಾಯ್ಕ, ಡಾ. ಶ್ರೀಧರ ಗೌಡ ಉಪ್ಪಿನಗಣಪತಿ, ಶ್ರೀ ಸಂದೀಪ ಭಟ್ಟ, ಶ್ರೀಮತಿ ಕಮಲಾ ಕೊಂಡದಕುಳಿ,ಶ್ರೀ ಪ್ರಶಾಂತ ಮೂಡಲಮನೆ, ಶ್ರೀ ಮಂಜುನಾಥ ನಾಯ್ಕ, ಶ್ರೀ ಚಿದಾನಂದ ಭಂಡಾರಿ, ಶ್ರೀಮತಿ ಮಂಗಲಾ ಬ್ಯಾಡಗಿ, ಶ್ರೀ ರವೀಂದ್ರ ಭಟ್ಟ ಸೂರಿ, ಶ್ರೀ ಗಣೇಶ ಜೋಶಿ, ಶ್ರೀ ಉದಯ ಮಡಿವಾಳ, ಶ್ರೀಮತಿ ವೀಣಾ ಅಂಕೋಲಾ ಇವರೆಲ್ಲರೂ ಕವಿತಾವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ರಂಗು ತಂದರು.
ಸಂಸ್ಥೆಯ ಸಂಘಟನಾ ಅಧಿಕಾರಿ ಜಯದೇವ ಬಳಗಂಡಿ ಪ್ರಾರ್ಥಿಸಿ ಎಲ್ಲರನ್ನೂ ಸ್ವಾಗತಿಸಿದರು. ಸತ್ವಾಧಾರ ಫೌಂಡೇಶನ್ ನ ಸಂಸ್ಥಾಪಕರಾದ ಗಣೇಶ ಜೋಶಿ ಸಂಕೊಳ್ಳಿ ಮುಂದಿನ ಕಾರ್ಯಕ್ರಮದ ಕಿರು ಪರಿಚಯವನ್ನು ಮಾಡುತ್ತಾ ಎಲ್ಲರನ್ನೂ ವಂದಿಸಿ ಸಮಾರೋಪದ ನುಡಿಗಳನ್ನು ಆಡಿದರು. ವಿದ್ಯಾರ್ಥಿಗಳಿಗೆ ಆನ್ ಲೈನ್ ಕಥಾ ಸ್ಪರ್ಧೆಯನ್ನು ಏರ್ಪಡಿಸಲು ಎಲ್ಲರ ಸಹಕಾರ ಕೋರಿದರು.
Leave a Comment