
ಹೊನ್ನಾವರ : ಮೋದಿ ಮಾತಿನಂತೆ ನಡೆಯುತ್ತಿಲ್ಲ. ದಿನ ನಿತ್ಯ ಪೆಟ್ರೋಲ್-ಡಿಸೆಲ್ ಬೆಲೆ ಗಗನಕ್ಕೆರುತ್ತಿದ್ದರೂ, ನಮ್ಮನ್ನಾಳುವ ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿರುವುದನ್ನು ವಿರೋಧಿಸಿ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿ ಸೈಕಲ್ ತುಳಿದು, ಬೈಕಗಳನ್ನು ತಳ್ಳಿಕೊಂಡು, ತಹಶೀಲ್ದಾರ ಕಚೇರಿಗೆ ತೆರಳಿ ಧಾರಾಕಾರ ಮಳೆಯಲ್ಲಿಯೇ ವಿನೂತನ ಮಾದರಿಯಲ್ಲಿ ಪ್ರತಿಭಟಿಸಿದರು.
ತಹಶೀಲ್ದಾರ ಕಚೇರಿಗೆ ತೆರಳುವ ಮುನ್ನ ನಗರದ ಶರಾವತಿ ಸರ್ಕಲ್ ಬಳಿ ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ದೇಶದ ಪ್ರಧಾನಿ ಮೋದಿ ಸುಳ್ಳಿನ ಮೂಲಕ ಆಧಿಕಾರ ನಡೆಸುತ್ತಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಮನಮೋಹನ ಸಿಂಗ್ ಆಡಳಿತವನ್ನು ಕಟುವಾಗಿ ಟೀಕಿಸುತ್ತಿದ್ದ ಅವರು, ತಾನು ಅಧಿಕಾರಕ್ಕೆ ಬಂದ ಮಾರನೇ ದಿನವೇ ಪೆಟ್ರೋಲ್-ಡಿಸೆಲ್ ಬೆಲೆಯನ್ನು 30-40 ರೂಪಾಯಿಗೆ ನಿಗದಿಪಡಿಸಲಾರುವುದು ಅನ್ನುತ್ತಿದ್ದವರು, ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು. ಇಂದು ದೇಶದ ಜನತೆ ಕೊರೊನಾ ಎಂಬ ಹೆಮ್ಮಾರಿಯ ಅವತಾರಕ್ಕೆ ತ್ತತ್ತರಿಸಿದ್ದು, ಜನ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಇಂತಹ ಕಷ್ಟಕರ ದಿನದಲ್ಲಿ ಮೋದಿ ಸಾಹೇಬರು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಶರಾವತಿ ಸರ್ಕಲ್ನಿಂದ ನೂರಾರು ಕಾರ್ಯಕರ್ತರು ಕೇಂದ್ರ ಸರಕಾರ ಮತ್ತು ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಸೈಕಲ್ ಮೇಲೆ ತಹಶೀಲ್ದಾರ ಕಛೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ದೇಶದ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ತಹಶೀಲ್ದಾರ ವಿವೇಕ ಶೆಣೈಯವರಿಗೆ ನೀಡಿದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಂಕಿ ಅಂಶಗಳ ಸಮೇತ ರಾಷ್ಟ್ರಪತಿಗಳಿಗೆ ಪತ್ರ ಬರೆದಿದು,್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ವಸ್ತುಗಳ ಬೆಲೆ ಕುಸಿದಿದ್ದರು, ಮೋದಿ ಸರಕಾರ ಯಾವ ಪುರುಷಾರ್ಥಕ್ಕಾಗಿ ಬೆಲೆ ಏರಿಸಿದೆ ಎಂದು ಪ್ರಶ್ನಿಸಿದೆ. ಒಂದು ವೇಳೆ ಏರಿಸಿದ ಬೆಲೆಯನ್ನು ಇಳಿಸದಿದ್ದರೆ ಈ ಹೋರಾಟ ಕಾಂಗ್ರೆಸ್ ಪಕ್ಷ ಜನಾಂದೋಲನವಾಗಿ ಮಾರ್ಪಡಿಸಲಿದೆ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಾ ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಶಕ್ತಿ ವಿಭಾಗದ ಬಾಲಚಂದ್ರ ನಾಯ್ಕ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ ಸಾಬ್, ಸೇವಾದಳದ ಅಧ್ಯಕ್ಷ ಸಂತೋಷ ಮೇಸ್ತ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಹೆಗಡೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಯುವ ಕಾಂಗ್ರೆಸ್ನ ಸಂದೇಶ ಶೆಟ್ಟಿ, ಕಾರ್ತಿಕ್ ನಾಯ್ಕ, ಪಕ್ಷದ ಮುಖಂಡರಾದ ದಾಮೋದರ ನಾಯ್ಕ, ಸುರೇಶ ಮೇಸ್ತ, ಮೂಸಾ ಅಣ್ಣಗೇರಿ, ಮಾದು ನಾಯ್ಕ, ಕರ್ಕಿ, ಸಾಲ್ವೋದರ ಪರ್ನಾಂಡೀಸ್, ಬ್ರಾಜಿಲ್ ಪಿಂಟೋ, ನೆಲ್ಸನ್ ರೊಡ್ರಗೀಸ್, ಹನೀಫ್ ಶೇಖ್, ಇನ್ನೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



Leave a Comment