ಹಳಿಯಾಳ :- ಶನಿವಾರದಿಂದ ಸೋಮವಾರದವರೆಗೆ 3 ದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಹಳ್ಳಿಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳ ಗೊಡೆಗಳು ಕುಸಿದುಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಶನಿವಾರದಿಂದ ಆರಂಭವಾಗಿ ಸೋಮವಾರ ಬೆಳಿಗ್ಗೆಯವರೆಗೆ ಬಿಡುವು ನೀಡದೆ ಸುರಿದಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸಾಯಂಕಾಲದ ವರೆಗೂ ಕೊಂಚ ಬಿಡುವು ನೀಡಿತ್ತು. ಆದರೇ ಮಂಗಳವಾರ ಸಾಯಂಕಾಲದಿಂದ ಮತ್ತೇ ತಾಲೂಕಿನಲ್ಲಿ ಮಳೆ ಆರಂಭವಾಗಿದೆ.

ಶನಿವಾರ, ಭಾನುವಾರ ಮತ್ತು ಸೋಮವಾರದ ವರೆಗೆ 3 ದಿನಗಳ ವರೆಗೆ ಸುರಿದ ಭಾರಿ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ 71 ಮನೆಗಳ ಗೊಡೆಗಳು ಕುಸಿದು ಬಿದ್ದಿವೆ. ಕೆಲವೆಡೆ ಸಣ್ಣಪುಟ್ಟ ಹಾನಿಯಾಗಿದ್ದರೇ ಇನ್ನು ಹಲವು ಕಡೆಗಳಲ್ಲಿ ಗೊಡೆಯೊಂದಿಗೆ ಮನೆಯ ಛಾವಣಿಗಳು ಕುಸಿದು ಬಿದ್ದು ಮನೆಯಲ್ಲಿಯ ಬೆಲೆಬಾಳುವ ವಸ್ತುಗಳಿಗೆ ಹಾನಿಯಾಗಿದೆ.
ಕಂದಾಯ ಇಲಾಖೆಯ ಮಾಹಿತಿಯಂತೆ ಹಳಿಯಾಳ ಹೊಬಳಿಯಲ್ಲಿ 28, ಸಾಂಬ್ರಾಣಿ ಹೊಬಳಿಯಲ್ಲಿ 9 ಹಾಗೂ ಮುರ್ಕವಾಡ ಹೊಬಳಿಯಲ್ಲಿ 34 ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಅಂದಾಜು 10 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣಗಳನ್ನು ಹೊರತು ಪಡಿಸಿದರೇ ಮಳೆಗೆ ಮನೆಗೆ ಹಾನಿ ಸಂಭವಿಸಿರುವ ಶೇ.15 ರಷ್ಟು ಹಾನಿ ಸಂಭವಿಸಿದ್ದರೇ ಅವರಿಗೆ ಪರಿಹಾರ ದೊರೆಯುವುದು ಕಷ್ಟಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಶೇ.25 ರಿಂದ 75% ಪ್ರತಿಶತ ಹಾನಿಯಾಗಿದ್ದರೇ 50 ಸಾವಿರ ರೂ, 75% ರಿಂದ 100% ಮನೆ ಬಿದ್ದಿದ್ದರೇ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವ ಸರ್ಕಾರದ ಆದೇಶವಿದ್ದು ಈ ಪೈಕಿ ಒಟ್ಟೂ 32 ಪ್ರಕರಣಗಳು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಈಗಾಗಲೇ ಹಾನಿಯ ಬಗ್ಗೆ ವರದಿ ಸಲ್ಲಿಸಲಾಗಿದೆ. ಸಂತ್ರಸ್ಥರ ದಾಖಲಾತಿಗಳನ್ನು ಪರಿಶೀಲಿಸಿ ನೇರವಾಗಿ ಅವರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.


Leave a Comment