ಹೊನ್ನಾವರ – ಒಂದು ವರ್ಷದ ಹಿಂದಿನ ವರೆಗೂ ಭರದಿಂದ ಸಾಗುತ್ತಿದ್ದ ರಾಷ್ಟಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಒಮ್ಮೆಲೇ ಕುಂಠಿತಗೊoಡಿದೆ. ತಾಲೂಕಿನ ಕರ್ಕಿ ಹಳದಿಪುರ, ಅನಂತವಾಡಿ ಮುಂತಾದ ಕಡೆ ಜಾಗದ ಹಕ್ಕುದಾರರನ್ನು ಗುರುತಿಸಿ ಪರಿಹಾರ ವಿತರಿಸಲು ವಿಫಲವಾಗಿರುವ ಐ.ಆರ್.ಬಿ ಕೆಲಸವನ್ನು ಸ್ಥಗಿತಗೊಳಿಸಿ ಮುಂದಿನ ಬೆಳವಣಿಗೆಯನ್ನು ಎದುರು ನೋಡುತ್ತಿದೆ.
ರಸ್ತೆ ಕೆಲಸ ಶೇ.೮೦ರಷ್ಟು ಪೂರ್ಣವಾಗುವ ವರೆಗೆ ಟೋಲ್ ಸಂಗ್ರಹ ಸಾಧ್ಯವಿರಲಿಲ್ಲವಾದ ಕಾರಣ ತರಾತುರಿಯಲ್ಲಿ ಕಾಮಗಾರಿ ನಡೆಸಿದ ಕಂಪನಿಯವರ ಕಾಮಗಾರಿ ವೇಗ ಟೋಲ್ ಗೇಟ್ ಆರಂಭವಾದ ನಂತರ ಕುಸಿತವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬಹಳಷ್ಟುಕಡೆ ರಸ್ತೆ ಚತುಷ್ಪಥವಾಗುವ ಬದಲು ದ್ವಿಪಥದಲ್ಲಿಯೇ ಮುಂದುವರಿದಿದೆ. ಇದು ಹೆದ್ದಾರಿ ಅಪಘಾತಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.


ಪರಿಹಾರ ಯಾರಿಗೆ..?
ಅಗಲೀಕರಣಕ್ಕೆ ತೊಡಕಾಗಿರುವ ಹೆಚ್ಚಿನ ಪ್ರಕರಣಗಳಲ್ಲಿ ಜಮೀನು ಕರ್ನಾಟಕ ಸರ್ಕಾರದ ಹೆಸರಿನಲ್ಲಿದೆ. ಆರ್.ಟಿ.ಸಿ.ಯಲ್ಲಿ ಹೆಸರಿರುವವರಾಗಲೀ ಅವರ ಕುಟುಂಬಸ್ಥರಾಗಲೀ ಯಾರೂ ಸ್ಥಳೀಯವಾಗಿ ವಾಸ್ಥವ್ಯ ಮಾಡುತ್ತಿಲ್ಲ. ಅವರೆಲ್ಲಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಿಲ್ಲ. ಇಂತಹ ಜಾಗದಲ್ಲಿ ಮನೆ ಕಟ್ಟಿಕೊಂಡು ಅದಿಭೊಗದಾರರಾಗಿರುವವರ ಹತ್ತಿರ ಕಂದಾಯ ದಾಖಲೆ ಯಾವುದೂ ಇಲ್ಲ. ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ಟ್ಯಾಕ್ಸ ಕಟ್ಟಿದ ರಶೀದಿ ಇದೆಯಾದರೂ ಕಂದಾಯ ದಾಖಲೆಗಳಿಲ್ಲದೇ ಪರಿಹಾರ ವಿತರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳ ಅಂಬೋಣ.


ವಾಸ್ಥವ್ಯ ಇರುವವರಿಗೆ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ತಾವೇ ಕಟ್ಟಿದ ವಾಸ್ಥವ್ಯ ಇರುವ ಮನೆಗೆ ಪರಿಹಾರ ಪಡೆದುಕೊಳ್ಳುವುದೂ ಸಾಧ್ಯವಿಲ್ಲ. ಪರಿಹಾರ ಸಿಗದೇ ಮನೆಯನ್ನು ಹೆದ್ದಾರಿ ಅಗಲಕರಣಕ್ಕೆ ಬಿಟ್ಟುಕೊಡಲು ಮನೆಯ ಮಾಲಿಕರು ತಯಾರಿಲ್ಲ. ಇದರಿಂದ ಈ ಭಾಗದಲ್ಲಿ ಹೆದ್ದಾರಿ ಅಗಲೀಕರಣ ಕಾರ್ಯ ಸ್ಥಗಿತವಾಗಿದೆ ಎನ್ನುವುದು ಸ್ಥಳಿಯರನ್ನು ವಿಚಾರಿಸಿದಾಗ ತಿಳಿದುಬರುವ ಸಂಗತಿ.
ಜಿಲ್ಲೆಯಲ್ಲಿ ಅತಿಕ್ರಮಣ ಜಾಗದಲ್ಲಿ ಅಂಗಡಿ, ಮನೆ ಕಟ್ಟಿಕೊಂಡಿದ್ದವರಿಗೆ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಪರಿಹಾರ ವಿತರಿಸಲಾಗಿದೆ. ಅದೇ ರೀತಿ ಕರ್ನಾಟಕ ಸರ್ಕಾರದ ಜಾಗದಲ್ಲಿ ಮನೆಕಟ್ಟಿಕೊಂಡವರಿಗೆ ಜಮೀನಿನ ಮೂಲ ದಾಖಲೆ ಇಲ್ಲದಿದ್ದರೂ ಮನೆ ಟ್ಯಾಕ್ಸ, ವಿದ್ಯುತ್ ಬಿಲ್, ನೀರಿನ ಕರಗಳಲ್ಲಿರುವ ದಾಖಲೆಯನ್ನು ಪರಿಶೀಲಿಸಿ ಮನೆಯ ಮೌಲ್ಯವನ್ನಾದರೂ ಪರಿಹಾರವನ್ನಾಗಿ ನೀಡಬೇಕು ಎನ್ನುವ ಒತ್ತಾಯ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಉನ್ನತ ಅಧಿಕಾರಿಗಳು ಜನಸಾಮನ್ಯರ ನೆರವಿಗೆ ದಾವಿಸಬೇಕಿದೆ.
Leave a Comment