ಭಾರತ ಸ್ವತಂತ್ರ ದೇಶವಾಗಿ 74 ವರ್ಷಗಳೇ ಸಂದುಹೋಗಿವೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಜೀವಗಳು ಅದೆಷ್ಟೋ….ಈ ಹೋರಾಟದ ಹಾದಿಯುದ್ದಕ್ಕೂ ತಮ್ಮ ಮಾಂಗಲ್ಯವನ್ನು ಕಳೆದುಕೊಂಡ ಮುತ್ತೈದೆಯರದೆಷ್ಟೊ….. ಮಗನನ್ನು ಕಳೆದುಕೊಂಡ ತಂದೆ ತಾಯಿಯರು ಇನ್ನದೆಷ್ಟೊ…. ಅಣ್ಣ ತಮ್ಮನನ್ನು ಕಳೆದುಕೊಂಡ ಸಹೋದರರು ಮತ್ತದೆಷ್ಟೊ…..ಆದರೆ ಭಾರತ ಮಾತ್ರ ಕೆಲವೇ ಕೆಲವು ವ್ಯಕ್ತಿಗಳನ್ನು ತನ್ನ ನೆನಪಿನಲ್ಲಿಟ್ಟುಕೊಂಡಿದೆ…..ಉಳಿದ 6 ಲಕ್ಷಕ್ಕೂ ಮೀರಿದ ವೀರ ಸೇನಾನಿಗಳು ಭಾರತೀಯರೆದೆಯಿಂದ ಜಾರಿದ್ದಾರೆ….ಅಂತಹ ಅದಮ್ಯ ಚೇತನಗಳನ್ನು ನೆನೆಯುವ ಹಾಗೂ ನೆನಪಿಸಿಕೊಡುವ ಪುಟ್ಟ ಪ್ರಯತ್ನವೇ….

“ಮರೆಯಲಾಗದ ಮಹಾನ್ ಮಾಣಿಕ್ಯಗಳು”
ನಮ್ಮ ಇಂದಿನ ಮಾಣಿಕ್ಯ ತನ್ನ ೨೭ ನೇ ವಯಸ್ಸಿಗೇ ಸ್ವಾತಂತ್ರ್ಯದ ಸಂಗ್ರಾಮಕ್ಕಾಗಿ ಜೀವವನ್ನರ್ಪಿಸಿ ನಡೆದ ಅಲ್ಲೂರಿ ಸೀತಾರಾಮರಾಜು.
ಅಲ್ಲೂರಿ ಸೀತಾರಾಮರಾಜು ಹುಟ್ಟಿದ್ದು 1897ರ ಜುಲೈ 4 ರಂದು. ಹುಟ್ಟೂರು ಆಂದ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪಂಡುರಂಗಿ ಗ್ರಾಮ. ಇವರ ತಂದೆ ವೆಂಕಟರಮಣ ರಾಜು, ತಾಯಿ ಸೂರ್ಯನಾರಾಯಣಮ್ಮ. ಇವರ ತಂದೆ ರಾಜಮಂಡ್ರಿ ಸೆರೆಮನೆಯಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ತಂದೆಯಿಂದಲೇ ಇವರು ಪರೋಪಕಾರ,ಆತ್ಮಗೌರವಾದಂತಹ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಒಮ್ಮೆ ಇವರು ಆಂಗ್ಲ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದಕ್ಕಾಗಿ ತಂದೆಯಿಂದ ಪೆಟ್ಟು ತಿಂದಿದ್ದರಂತೆ. ಜೊತೆಗೆ ಅಂದು ತಂದೆ ಹೇಳಿದ ” ದೇಶವನ್ನು ಆಕ್ರಮಿಸಿ ಆಡಳಿತ ನಡೆಸುತ್ತಿರುವ ಆಂಗ್ಲರು ನಮ್ಮ ಶತ್ರುಗಳು ” ಎಂಬ ಮಾತು ಅವರ ಕಿವಿಯಲ್ಲಿ ಸದಾ ಗುನುಗುನಿಸುತ್ತಿತ್ತಂತೆ. ಇದರಿಂದಲೇ ಅವರು ಬ್ರಿಟಿಷರ ವಿರುದ್ಧ ಮುಂದೆ ಹೋರಾಡಲು ಸಾಧ್ಯವಾಗಿದ್ದು. ನಂತರ ಇವರು ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡು ಚಿಕ್ಕಪ್ಪನಾದ ರಾಮಚಂದ್ರರಾಜು ಇವರ ಅಡಿಯಲ್ಲಿಯೇ ಬೆಳೆಯಬೇಕಾಯಿತು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿಶಾಖಪಟ್ಟಣಂ ಗೆ ನಡೆದರು. ಅಲ್ಲಿ 1912-13 ರ ಸುಮಾರಿನಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸದ ಸಮಯದಲ್ಲಿ ಕ್ರಾಂತಿಕಾರಿ ಸಂಘಟನೆಗಳಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು.
ಅಲ್ಲೂರಿ ಸೀತಾರಾಮರಾಜು ಹೆಸರುವಾಸಿಯಾಗಿದ್ದು ರಂಪ ದಂಗೆಯಿಂದ. ಬ್ರಿಟೀಷರು ‘1882 ರ ಅರಣ್ಯ ಕಾಯ್ದೆ’ಯನ್ನು ಜಾರಿಗೊಳಿಸಲು ಮುಂದಾದರು. ಈ ಕಾಯ್ದೆಯ ಪ್ರಕಾರ ಕಾಡಿನಲ್ಲಿ, ಗುಡ್ಡಗಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಹಳ್ಳಿಗಳನ್ನು ಬಿಟ್ಟು ಬೇರೆಡೆಗೆ ಹೋಗುವಂತಿರಲಿಲ್ಲ. ಆದರೆ ಇದು ಆದಿವಾಸಿಗಳ ಸಹಜ ಬದುಕಿಗೆ ವಿರುದ್ಧವಾಗಿತ್ತು. ಕಾಡಿನ ಸುತ್ತಮುತ್ತ ವಾಸಿಸುವ ಅನೇಕ ಬುಡಕಟ್ಟು ಜನಾಂಗದವರು ಪ್ರತಿವರ್ಷ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದರು. ಇಂಥ ಸಮಯದಲ್ಲಿಯೇ ಸೀತಾರಾಮರಾಜು ನಾಯಕರಾಗಿ ಬಂದು ಈ ಬುಡಕಟ್ಟು ಜನಾಂಗದವರ ಪರವಾಗಿ ದ್ವನಿಯಾಗಿ ನಿಂತರು. ಅಕ್ಷರಲೋಕದಿಂದ ವಂಚಿತರಾಗಿದ್ದ, ನಾಗರೀಕತೆಯಿಂದ ದೂರ ಉಳಿದಿದ್ದ ಮುಗ್ಧ ‘ಚಿಂಚೂ’ ಸಮುದಾಯದವರ ಪರ ಹೋರಾಟ ಮಾಡಿದರು. ಈ ಆದಿವಾಸಿ ಜನಾಂಗಗಳ ಮೇಲೆ ಆಂಗ್ಲ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆಯನ್ನು ತಡೆಯಲು ಕಾಡಿಗೆ ಬಂದ ಅಧಿಕಾರಿಗಳನ್ನು ಮತ್ತೆ ಮರಳದಂತೆ ಮಾಡಿದರು. ಪೊಲೀಸ್ ಠಾಣೆಗಳನ್ನು ಸುಟ್ಟು ಹಾಕಿದರು. ಇದರಿಂದ ಬ್ರಿಟಿಷರಿಗೆ ಸ್ಪಷ್ಟ ಸಂದೇಶವನ್ನಷ್ಟೇ ನೀಡದೆ ಆ ಅಧಿಕಾರಿಗಳ, ಪೊಲೀಸ್ ಠಾಣೆಗಳಲ್ಲಿದ್ದ ಆಯುಧಗಳನ್ನೂ ಸಂಗ್ರಹಿಸತೊಡಗಿದರು. ಅವರ ಪರವಾಗಿ ಆಂಗ್ಲರ ವಿರುದ್ಧ ಸೊಲ್ಲನೆತ್ತಿದ್ದಷ್ಟೇ ಅಲ್ಲದೆ ಆ ಜನಾಂಗದಲ್ಲಿದ್ದ ನರಬಲಿಯಂತಹ ಅನಿಷ್ಟ ಪದ್ದತಿಗಳನ್ನು ಹೊಡೆದು ಹಾಕಿದರು. ಜೊತೆಗೆ ಅವರಲ್ಲಿದ್ದ ಮದ್ಯದ ಅಮಲನ್ನೂ ಇಳಿಸಿದರು. ಇದು ಕಂಪನಿ ಸರ್ಕಾರಕ್ಕೆ ಮತ್ತಷ್ಟು ತಲೆ ನೋವಾಯಿತು. ಹೀಗಾಗಿಯೇ ಸೀತಾರಾಮರಾಜು ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದು.
ಇವರನ್ನು ಸೆರೆಹಿಡಿಯಲು ಬ್ರಿಟಿಷ್ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡಿತು. 1922 ರಲ್ಲಿ ಅರಣ್ಯ ಪ್ರದೇಶದಲ್ಲಿ ವಿಶಿಷ್ಟ ಅನುಭವವಿದ್ದ ಅಸ್ಸಾಂ ರೈಫಲ್ಸ್ ಸೇನೆಯನ್ನು ಇವರನ್ನು ಹುಡುಕಲು ಕರೆಸಿಕೊಂಡಿತು. ಸತತ 2 ವರ್ಷಗಳ ನಿರಂತರ ಕಾರ್ಯಾಚರಣೆಯ ಬಳಿಕ 1924 ರಲ್ಲಿ ಆಂಗ್ಲರ ನಸೀಬಿನಿಂದಾಗಿ ಸೀತಾರಾಮರಾಜು ಸೆರೆಸಿಕ್ಕರು. ಆಂದ್ರಪ್ರದೇಶದ ಚಿಂತಪಲ್ಲಿ ಎಂಬ ಅರಣ್ಯದಲ್ಲಿ ಇವರನ್ನು ಹಿಡಿದು ಅಲ್ಲಿಯೇ ಇದ್ದ ದೊಡ್ಡ ಮರವೊಂದಕ್ಕೆ ಕಟ್ಟಿಹಾಕಿ ದರೋಡೆಕೋರನೆಂಬಂತೆ ಬಿಂಬಿಸಲಾಯಿತು. ಇದಕ್ಕೆ ಪ್ರತಿಯಾಗಿ ಸೀತಾರಾಮರಾಜು “ದೇಶವನ್ನು ಕೊಳ್ಳೆಹೊಡೆಯುತ್ತಿರುವ ನೀವುಗಳು ದರೋಡೆಕೋರರು” ಎಂದು ಘರ್ಜಿಸಿದರು. ಇದರಿಂದ ಕೋಪಗೊಂಡ ಬ್ರಿಟಿಷ್ ಮೇಜರ್ ಒಬ್ಬರು ಇವರನ್ನು ಕೊಲ್ಲಲು ಬಂದಾಗ “ ನೀವು ನನ್ನೊಬ್ಬನನ್ನು ಕೊಳ್ಳಬಹುದು, ಆದರೆ ಭಾರತಾಂಬೆ ಬಂಜೆಯಲ್ಲ, ನನ್ನಂತಹ ನೂರು ಸೀತಾರಾಮರಾಜುಗಳು ಅವಳ ಗರ್ಭದಲ್ಲಿ ಜನಿಸುತ್ತಾರೆ” ಎಂದು ಬೊಬ್ಬಿರಿದರು. ಕೊನೆಗೂ ಕಾಡಿನ ಮುಗ್ಧ ಜನರ ಪ್ರತಿಧ್ವನಿಯಾಗಿದ್ದ ಸೀತಾರಾಮರಾಜುವನ್ನು 1924 ರ ಮೇ 7 ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು. ತಾಯಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಎಂಬ ಯಜ್ಞಕ್ಕೆ ಸೀತಾರಾಮರಾಜು ಎಂಬ ಸಮಿತ್ತು ಅರ್ಪಿತವಾಯಿತು. ಇವರು ಅದೆಷ್ಟರ ಮಟ್ಟಿಗಿನ ಅಪ್ರತಿಮ ಹೋರಾಟಗಾರರಾಗಿದ್ದರೆಂದರೆ ಒಮ್ಮೆ ಸುಭಾಷ್ ಚಂದ್ರ ಬೋಸ್ ರು ಇವರ ಕುರಿತಾಗಿ “ ಸೀತಾರಾಮರಾಜು ಭಾರತದಲ್ಲಲ್ಲದೆ ಬೇರೆ ಇನ್ನಾವ ದೇಶದಲ್ಲಿ ಹುಟ್ಟಿದ್ದರೂ ಇನ್ನೂ ಹೆಚ್ಚಿನ ಮಾನ ಸಮ್ಮಾನ ಗಳಿಸುತ್ತಿದ್ದರು” ಎಂದು ಉದ್ಘರಿಸಿದ್ದರಂತೆ. ಇದು ರಾಜುವಿನ ಘನತೆಯನ್ನು ತೋರಿಸುತ್ತದೆ. ಆದರೆ ತೆಲಂಗಾಣ, ಒರಿಸ್ಸಾದ ಕಾಡು ಜನಗಳ ಬಾಯಲ್ಲಿ ‘ಮಾನ್ಯಮ್ ವೀರುಡು’ ಎಂದೇ ಕರೆಸಿಕೊಳ್ಳುತ್ತಿದ್ದ ರಾಜು ನಮ್ಮೆದೆಯಿಂದ ಮಾಯವಾಗಿದ್ದಾನೆ.
ಸ್ನೇಹಿತರೇ ನಮಗೆ ಇಂತವರ ಹೆಸರುಗಳೇ ಗೊತ್ತಿಲ್ಲ. ಅವರ ಮಹಾನ್ ತ್ಯಾಗಕ್ಕೆ ಕನಿಷ್ಠ ಅವರ ಹೆಸರನ್ನಾದರೂ ನೆನಪಿಸಿಕೊಳ್ಳಬೇಡವೇ?!…. ಬನ್ನಿ ಇಂತಹ ಮಹಾನ್ ಮಾಣಿಕ್ಯಕ್ಕೊಮ್ಮೆ ಗೌರವದಿಂದ ತಲೆಬಾಗೋಣ… ಭಾರತ ಬದಲಾಗಲಿ…. ಭಾರತ ವಿಶ್ವಗುರುವಾಗಲಿ…. ಬನ್ನಿ ಬದಲಾಗೋಣ…. ಬದಲಾಯಿಸೋಣ…..
Leave a Comment