ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು ಎನ್ನುವ ಸಿನೆಮಾ ಹಾಡು ಕಳೆದು ಹೋದ ಮರಳಿ ಬಾರದ ಬದುಕಿನ ಸುಂದರ ಕ್ಷಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಸಾವಿರ ಶಬ್ಧಗಳಲ್ಲಿ ಕಟ್ಟಿಕೊಡಲಾಗದ್ದನ್ನು ಒಂದು ಪೋಟೋ ಹೇಳಿಬಿಡುತ್ತದೆ ಪೋಟೋಗಳಿಗೆ ಅಂತದ್ದೊಂದು ಶಕ್ತಿಯಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.
ಇತ್ತೀಚೆಗೆ ಎರಡುಮೂರು ದಶಕಗಳ ಹಿಂದಿನ ಬದುಕಿನ ಕ್ಷಣಗಳನ್ನು ನೆಪಿಸುವ ಹಳೆಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಪ್ರತ್ಯಕ್ಷವಾಗತೊಡಗಿದೆ ಮಾತ್ರವಲ್ಲ ಕ್ಷಣ ಮಾತ್ರದಲ್ಲಿ ನೂರಾರು ಶೇರ್ ಸಾವಿರಾರು ಲೈಕ್ಗಳೂ ಸಿಗುತ್ತಿವೆ. ಚೆಸ್ ಆಡಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದು ಕೊಂಡ ಪಾಲಕರಿಗೆ ನಮ್ಮ ಮಕ್ಕಳಿಗೆ ಚಿನ್ನಿದಾಂಡು ಗೊತ್ತೇ ಇಲ್ಲವಲ್ಲ ಎನ್ನುವ ಆತಂಕ ಕಾಡತೊಡಗಿದೆಯೇನೋ ಅನ್ನಿಸತೊಡಗಿದೆ.

ಅಟ್ಟದಲ್ಲಿರುವ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಎಂದಿಗೂ ಕೈಕೊಡದ ಹಳೆ ಶೆಲ್ಲಿನ ಬ್ಯಾಟರಿಗಳನ್ನು ಕಂಡಾಗ ಯಾವಾಗ ಬೇಕಾದರೂ ಕೈ ಕೊಡುವ ಇಂದಿನ ವಿದ್ಯುತ್ ಚಾರ್ಜಿಂಗ್ ಚೈನಾ ಬ್ಯಾಟರಿಗಳಿಗಿಂತ ಖುಷಿ ಎನಿಸುತ್ತದೆ. ಗಾಜಿನ ಕವಚ ತೊಟ್ಟು ಗಾಳಿಗೆ ಬೆದರದೇ ಉರಿದು ಮನೆ ಬೆಳಗುತ್ತಿದ್ದ ಲಾಟೀನುಗಳು, ಬೆಕ್ಕಿನ ಬಾಯಿಗೆ ಸಿಗದಂತೆ ಸಿಕ್ಕದಮೇಲೆ ಜೋಪಾನವಾಗಿಡುತ್ತಿದ್ದ ಹಾಲಿನ ಪಾತ್ರೆಗಳು, ಹಾಡು ಗುನುಗುತ್ತಿದ್ದ ರೀಲಿನ ಕ್ಯಾಸೆಟ್ಗಳು ಒಂದದಾಮೇಲೊಂದರಂತೆ ಮನಸ್ಸಿನ ದಡಕ್ಕೆ ಅಪ್ಪಳಿಸುವ ನೆನಪಿನಲೆಗಳಂತೆ ಇಂಟರ್ನೆಟ್ ಜಮಾನಾದವರಿಗೆ ಕಾಣಿಸುತ್ತಿರುವುದು ನಿಜಕ್ಕೂ ಸೋಜಿಗ.



Leave a Comment