ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು ಎನ್ನುವುದಕ್ಕಿಂತ ಮನುಷ್ಯ ತಾನು ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆ ಕಳೆದುಕೊಂಡಿದ್ದಾನೆ ಎನ್ನುವುದೇ ಸೂಕ್ತ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಸಾಕ್ಷೀಕರಿಸುವಂತೆ ಮನುಷ್ಯರ ಅತಿರೇಕದ ವರ್ತನೆಗಳು ಬೆಳಕಿಗೆ ಬರುತ್ತಲೇ ಇದೆ. ಆಕಳ ಕೆಚ್ಚಲಿನ ಹಾಲು ಅದರ ಕರುವಿಗೆಂದೇ ಇರುವುದಾದರೂ ಕರು ಹಾಲು ಕುಡಿಯುತ್ತದೆ ಎನ್ನವ ಕಾಣ ಕೋಲುಗಳನ್ನು ಬಾಯಿಗೆ ಕಟ್ಟಿ ಕರು ಹಾಲು ಕುಡಿಯಲು ಮುಂದಾದರೆ ತಾಯಿಗೆ ತಿವಿಯುವಂತೆ ಮಾಡುವ ಹಲವು ಪ್ರಯೋಗ ಪ್ರಯತ್ನಗಳನ್ನು ಕಂಡಿದ್ದೇವೆ. ಇಲ್ಲೊಬ್ಬರು ಮಹಾನುಭಾವ ಸಣ್ಣ ಕರುವೊಂದರ ಕುತ್ತಿಗೆಗೆ ಅಡಿಕೆ ಮರದ ದಬ್ಬೆಯನ್ನು ಎಕ್ಸ್ ಆಕಾರದಲ್ಲಿ ಕಟ್ಟಿದ್ದಾರೆ.

ಕರು ಬೇಲಿ ಹಾರಬಾರದು ದಣಪೆ ದಾಟಿ ಹೊಲಕ್ಕೆ ಹೋಗಬಾರದು ಎನ್ನುವುದು ಮಾಲಿಕನ ಉದ್ದೇಶವಾಗಿರಬಹುದು. ಆದರೂ ಗುಡ್ಡದಲ್ಲಿನ ಮೇವನ್ನು ತಿನ್ನಲೂ ತೊಂದರೆಯಾಗುವ ರೀತಿಯಲ್ಲಿ, ಎಲ್ಲಿಯಾದರೂ ಗಿಡ ಗಂಟಿಗಳ ನಡುವೆ ಸಿಕ್ಕಿಕೊಂಡರೆ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಕರು ನರಳಿ ನರಳಿ ಪ್ರಾಣ ಬಿಡಬೇಕಾದ ಸ್ಥಿತಿ ಬಂದರೂ ಬರಬಹುದಾದ ಶಿಕ್ಷಾ ಕ್ರಮಗಳು ಸಹ್ಯವೇ ಎನ್ನುವುದು ಹಲವರನ್ನು ಕಾಡುತ್ತಿರುವ ಪ್ರಶ್ನೆ.
Leave a Comment