“ಡಾಕ್ಟ್ರೇ..ನಿಮ್ಮ ಕೈಗುಣ ಅದ್ಭುತ !!. ನೀವು ನಮ್ಮ ಪಾಲಿಗೆ ದೇವರು.. ನೀವು ಮುಟ್ಟಿದರೆ ಸಾಕು. ನಮ್ಮ ದನದ ರೋಗ ಗುಣವಾಗುತ್ತೆ. ನೀವು ಹೇಳಿದ್ರೆ ವಿಷಾನಾದ್ರೂ ಕೊಡ್ತೀವಿ… ಬಹಳ ದಿನ ಆಯ್ತು.. ಎಮ್ಮೆ ಮೇವು ತಿಂತಾನೇ ಇಲ್ಲ. ನೀವು ಒಂದ್ಸಲ ಬಂದು ದನ ಮುಟ್ಟಿ ಹೋಗಿ.. ಕಡಿಮೆ ಆಗೇ ಆಗುತ್ತೆ.!!. ಇದು ನಾನು ನಿಯಮಿತವಾಗಿ ಜಾನುವಾರು ಚಿಕಿತ್ಸೆ ಮಾಡುವ ಒಬ್ಬ ೮೦ ವರ್ಷ ವಯಸ್ಸಿನ ಯಜಮಾನರು ಹೇಳಿದ ಮಾತು. ಅನೇಕ ಜನ ಪಶುಪಾಲಕರು ಇದೇ ರೀತಿ ಹೇಳುತ್ತಾರೆ. ನಾನು ಅನೇಕ ಸಲ ಈ ರೀತಿಯ ಕಟ್ಟು ಪಾಡಿಗೆ ಒಳಪಟ್ಟು ದನ “ಮುಟ್ಟಿ” ನೋಡಿ ಆದ ಮೇಲೆ ಅದಕ್ಕೆ ರೋಗ ಕಡಿಮೆಯಾದದ್ದೂ ಇದೆ. ಉತ್ಪ್ರೇಕ್ಷೆ ಮತ್ತು ಅತಿರಂಜಿತ ಅನಿಸಿದರೂ ವೈದ್ಯ ಮತ್ತು ಪಶುವೈದ್ಯ ವೃತ್ತಿಯಲ್ಲಿ ಅಲ್ಪ ಸ್ವಲ್ಪ ಶ್ರದ್ಧೆಯಿಂದ ಚಿಕಿತ್ಸೆ ಮಾಡುವ ನನ್ನಂತ ಅನೇಕರ ಅನುಭವ.

ನಾನು ಪತ್ರಿಕೆಗಳಲ್ಲಿ ನಿಯಮಿತವಾಗಿ ಜಾನುವಾರುಗಳಿಗೆ ಅನುಕೂಲವಾಗುವ ಅನೇಕ ಲೇಖನಗಳನ್ನು ಅಂಕಣಗಳನ್ನು ಬರೆಯುತ್ನಾನು ಪತ್ರಿಕೆಗಳಲ್ಲಿ ನಿಯಮಿತವಾಗಿ ಜಾನುವಾರುಗಳಿಗೆ ಅನುಕೂಲವಾಗುವ ಅನೇಕ ಲೇಖನಗಳನ್ನು ಅಂಕಣಗಳನ್ನು ಬರೆಯುತ್ತಿರುವುದರಿಂದ ಗೋಪಾಲಕರು ದೂರವಾಣಿಯಲ್ಲಿ ಕೆಲವರು ಪ್ರಾಣಿ ಚಿಕಿತ್ಸೆಗಾಗಿ ಕೋರಿದಾಗ ಅವರೇ ಮಾಡಿಕೊಳ್ಳಬಹುದಾದ ಸುಲಭ ಪ್ರಥಮ ಚಿಕಿತ್ಸೆಯನ್ನು ಹೇಳಿ ನಂತರ ಅದನ್ನು ಮರೆತು ಬಿಡುವುದು ಸಾಮಾನ್ಯ. ಆದರೆ ಕೆಲ ದಿನಗಳ ನಂತರ ಅವರು ಪುನ: ಕರೆ ಮಾಡಿ , ಸಾರ್.. ನೀವು ಹೇಳಿದ ಔಷಧಿ ಮಾಡಿದೆ. ಕಡಿಮೆಯಾಯ್ತು. ಏನು ನಿಮ್ಮ “ಬಾಯಿ ಗುಣ” ಅಂತ ಪ್ರಶಂಶೆ ಮಾಡಿದಾಗ, ಇದು ನಿಜನಾ? ಅಥವಾ ಓ..ಭ್ರಮೆನಾ!?. ಅಂತ ಅನಿಸುವುದೂ ಇದೆ.
ನಾವೆಲ್ಲ ಬಿವಿಎಸ್ಸಿ ವಿದ್ಯ್ಯಾಭ್ಯಾಸ ಮಾಡುತ್ತಿದ್ದಾಗ ನಮ್ಮ ಶಿಕ್ಷಕರು “ ಪ್ರಾಣಿಯ ಚಿಕಿತ್ಸೆಗಿಂತ ಮೊದಲು ಅದರ ಮಾಲಕನ ಚಿಕಿತ್ಸೆ ಮಾಡು” ಎಂದು ಹೇಳಿದ್ದು ನನಗೆ ಇಂದಿಗೂ ನೆನಪಿದೆ. ಇದು ಬಹಳ ನಿಜ. ಅದರಲ್ಲೂ ಶ್ವಾನ ಪಾಲಕರು ಬಹಳ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಬ್ಬ ಮಧ್ಯವಯಸ್ಕ ಮಹಿಳೆ ಶ್ವಾನವನ್ನೊಂದನ್ನು ತಂದು “ ನೋಡಿ ಡಾಕ್ಟ್ರೇ… ಇವನು ೮ ದಿನದಿಂದ ಏನೂ ತಿಂದಿಲ್ಲ..ತಿಂದದ್ದನ್ನು ವಾಂತಿ ಮಾಡಿ ಬಿಡ್ತಾನೆ… ಎಲ್ಲಾ ಚಿಕಿತ್ಸೆ ಮಾಡ್ಸಿದೆ.. ಕಾಲೇಜಿಗೆ ತೋರ್ಸಿ ಅಂತ ನಮ್ ಡಾಕ್ಟ್ರು ಹೇಳಿದ್ರು.. ಎಲ್ಲಾ ಪರೀಕ್ಷೆ ಮಾಡಿ ಅಂದರು. ಎಲ್ಲಾ ತಪಾಸಣೆ ಮುಗಿದ ನಂತರ ಆ ಮಹಿಳೆಗೆ “ ನೋಡಿ ಮೇಡಂ, ಇದರ ಎರಡೂ ಕಿಡ್ನಿ ಶೇ ೭೦ ರಷ್ಟು ಹಾಳಾಗಿವೆ. ಇದಕ್ಕೆ ಸಾವಿರ ಕಾರಣಗಳಿರಬಹುದು. ಇದರ ಚಿಕಿತ್ಸೆ ಕಷ್ಟ. ಮಾಡಿದ್ರೂ ಅದು ತಾತ್ಕಾಲಿಕ” ಅಂದೆ. ಮ್ಲಾನ ವದನಳಾದ ಮಹಿಳೆ “ಏನಾದ್ರೂ ಮಾಡಿ ಉಳ್ಸಿ ಇವನ್ನ.. ಅವನಿಲ್ಲದೇ ಬದ್ಕಾಕೆ ಆಗಲ್ಲ.. ಅಂತ ಅಳಲಿಕ್ಕೆ ಪ್ರಾರಂಭಿಸಿದರು. ಮೇಡಂ, ಅಳಬೇಡಿ.. ಈ ಶ್ವಾನಕ್ಕೆ ಇರುವ ಜೀವಾವಧಿ ೧೦-೧೫ ವರ್ಷ. ಅದರ ಹೆಚ್ಚಿನ ಬಾಳನ್ನೆಲ್ಲಾ ಆರೋಗ್ಯದಿಂದಲೇ ಕಳೆದಿದೆ. ೨-೩ ದಿನಕ್ಕೊಮ್ಮೆ ಚಿಕಿತ್ಸೆ ಮಾಡಿ ಅದರ ಬದುಕನ್ನ ಮುಂದಕ್ಕೆ ಹಾಕುವುದೊಂದೇ ದಾರಿ ಅಂದೆ. ಮನುಷ್ಯರಲ್ಲಿ ಈ ರೀತಿ ಕಿಡ್ನಿ ಹಾಳಾದರೆ ಡಯಾಲಿಸಿಸ್ ಮಾಡ್ತಾರೆ.. ಇಲ್ಲವೇ ಕಿಡ್ನಿ ವರ್ಗಾವಣೆ ಮಾಡ್ತಾರೆ. ಆದರೆ ಪ್ರಾಣಿಗಳಲ್ಲಿ ಇವೆರಡು ಕಷ್ಠ ಅಂದೆ. ಅದಕ್ಕೆ ಗ್ಲುಕೋಸ್ ಡ್ರಿಪ್, ವಿಟಾಮಿನ್ಗಳ ಚುಚ್ಚು ಮದ್ದು ಇತ್ಯಾದಿ ನೀಡಿ ಕಳಿಸಿದೆ. ಎರಡು ದಿನದ ನಂತರ ಮಹಿಳೆ ಬಂದು “ಕಾಯಿಲೆಯ ಬಗ್ಗೆ ಗೂಗಲಿಸಿದೆ. ಕಿಡ್ನಿ ವರ್ಗಾವಣೆ ಮಾಡಬಹುದಂತೆ. ನನ್ನ ಕಿಡ್ನಿನೇ ಅದಕ್ಕೆ ದಾನ ನೀಡುತ್ತೇನೆ ಎಂದರು. ಹಾಗೆಲ್ಲಾ ಮನುಷ್ಯರ ಕಿಡ್ನಿಯನ್ನು ಪ್ರಾಣಿಗಳಿಗೆ ನೀಡಲಾಗುವುದಿಲ್ಲ ಎಂದು ಅವರಿಗೆ ಮನವರಿಕೆ ಮಾಡುವಲ್ಲಿ ಸಾಕು ಸಾಕಾಗಿ ಹೋಯಿತು. ಮನುಷ್ಯರಾದರೆ ಸಿಟ್ಟು ಸೆಡವು ತೋರುತ್ತಾರೆ. ಆದರೆ ಪ್ರಾಣಿಗಳು ಪ್ರೀತಿ.. ಬರಿ ಪ್ರೀತಿ ತೋರುವುದರಿಂದ ಹೀಗಿರುತ್ತೆ ಮನುಷ್ಯರ ಭಾವನೆ.

ಈಗೊಂದೆರಡು ವರ್ಷದಿಂದಲೂ ನಾನು ಬಹಳ ದಿನಗಳಿಂದ ಹಲವಾರು ಕಾರಣಗಳಿಂದ ಗರ್ಭಧರಿಸದೇ ರೈತರಿಗೆ ಹೊರೆಯಾದ ಜಾನುವಾರುಗಳನ್ನು “ ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ” ಬದಲಾಯಿಸುವ ಒಂದು ಯೋಜನೆ ನಡೆಸುತ್ತಿದ್ದೇನೆ. ಇದರಲ್ಲಿ ಅನೇಕ ಜಾನುವಾರುಗಳು ಚಿಕಿತ್ಸೆಗೆ ಬರುತ್ತವೆ. ಶೇ:೯೦ ರಷ್ಟು ಸಮತೋಲ ಪೌಷ್ಜ್ಟಿಕಾಂಶ ಅಹಾರ ನೀಡದೇ ಬರಡಾಗಿ ರೈತರೇ ಬದಲಾಯಿಸಿದವುಗಳು. ಹೀಗೆಯೇ ಅವುಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾಗ ಒಬ್ಬ ತಾತ ಬಂದ.. “ಸ್ವಾಮಿ.. ನನ್ ಹಸಾ ಗಬ್ಬಾಗ್ದೇ ೬ ವರ್ಷ ಕಳಿದ್ವು.. ಎಲ್ಲಾ ಟ್ರಿಕ್ಸ್ ಮೆಂಟ್ ಮುಗಿದ್ವು. ಎಲ್ಲಾ ಡಾಕಟ್ರು ನೋಡಿದ್ರು.. ಸಾವಿರ ರೂಪಾಯಿಯ ಹಾರ್ಮೋನಿಯಂ (ಹಾರ್ಮೋನ್) ಇಂಜೆಕ್ಷನ್ ಮಾಡ್ಸಿ ಕಡ್ಡಿ ಹಾಕಿಸ್ದೆ. ಹೋರೀನೂ ಬಿಡ್ಸಿದ್ದೆ.. ಆದ್ರೂ ಕಟ್ಲಿಲ್ಲ. ಈಗ ಹಾಲೂ ಬತ್ಸಿಕೊಂಡಿದೆ. ಮನೇಲಿ ಹುಟ್ಟಿದ ಹಸಾ. ಕೊಡಾಕೆ ಮನ್ಸಿಲ್ಲಾ. ಏನಾದ್ರೂ ಮಡಿ ಗಬ್ಬ ಆಗುವ ಹಾಗೇ ಇಂಜೆಕ್ಷನ್ ಕೊಡಿ ಸ್ವಾಮಿ… ಎಂದು ಮುಖ ಕೆಳಗಿ ಹಾಕಿ ನಿಂತ. ಹಸುವಿನ ತಪಾಸಣೆ ನಡೆಸಿದೆ. ಎರಡೂ ಅಂಡಾಶಯದಲ್ಲಿ ದೊಡ್ಡ ಗಾತ್ರದ ಸಿಸ್ಟ್ ಗಳು ಇದ್ದವು. ಪದೇ ಪದೇ ಕೃತಕ ಗರ್ಭಧಾರಣೆ ಮಾಡಿದಾಗ ಆದ ಧಕ್ಕೆಯಿಂದೇನೋ ಗರ್ಭಕೋಶದ ಕಂಠದಲ್ಲಿ ಉರಿಯೂತವಿತ್ತು. ಇದನ್ನು ಗರ್ಭಧರಿಸುವಂತೆ ಮಾಡುವುದು ಬಹಳ ಕಷ್ಠವೆಂದು ಗೊತ್ತಾಯಿತು.
ಆದರೂ ತಾತನ ಜೀವನೋತ್ಸಾಹಕ್ಕೆ ಬೆರಗಾಗಿ “ತಾತ.. ನಾನಿದ್ದೇನೆ. ಈಗ ವಿಜ್ಞಾನ ಮುಂದುವರೆದಿದೆ. ನೀನು ದನಾನ ೫ ಸಲ ಆಸ್ಪತ್ರೆಗೆ ತರಬೇಕು. ಅದೂ ಬೆಳಿಗ್ಗೆ ೯ ಗಂಟೆ ೩೫ ನಿಮಿಷಕ್ಕೆ ಇಂಜೆಕ್ಷನ್ ಮಾಡಿಸಬೇಕು. ಒಂದಿಷ್ಟು ಔಷಧಿ ಬರೆದು ಕೊಡ್ತೇನೆ. ತಂದು ಡಾಕ್ಟರ್ ಕೈಗೆ ಕೊಟ್ಟು ಇಂಜೆಕ್ಷನ್ ಹಾಕಿಸಬೇಕು… ಹಾಗೆಯೇ ಐದು ಕೆಜಿ ಟಾನಿಕ್ ಪುಡಿ ತರಬೇಕು. ದಿನಾ ಬೆಳಿಗ್ಗೆ ಮತ್ತು ರಾತ್ರಿ ೩೦ ಗ್ರಾಂ ಹಾಕಬೇಕು. ಬೆಳಿಗ್ಗೆ ಸಂಜೆ ೧ ಕೆಜಿ ಹಿಂಡಿ ಕೊಡ್ಲೇ ಬೇಕು. ಔಷಧಿಗೆ ೨೫೦೦ ರೂಪಾಯಿ ಖರ್ಚಾಗುತ್ತೆ. ಇಷ್ಟೆಲ್ಲಾ ತಪಸ್ಸಿನಂತೆ ಮಾಡಬೇಕು. ಮನೆ ದೇವರು ಯಾವುದು? ದೇವರ ಪೂಜೆಯಂತೆ ಮಾಡ್ತಿಯಾ !? ಅಂದೆ. ಗಬ್ಬ ನೂರಕ್ಕೆ ನೂರು ಕಟ್ಟಿರುತ್ತೆ!! ಡಾಕ್ಟ್ರ ಮನೆಗೆ ದಿನಾ ಒಂದು ಲೀಟರ್ ಹಾಲು ಕೊಡಬೇಕು.. ಅಂದೆ. ಸರಿ.. ಸ್ವಾಮಿ… ಮಾಡ್ತಿನಿ… ಅಂತ ಚೀಟಿ ಬರೆಸಿ ಕೊಂಡು ಹೋದ ತಾತ. ಹೀಗೆಯೇ ನಾನು ಅನೇಕ ಜನರಿಗೆ ಧೈರ್ಯ ನೀಡಿ ಮಾನಸಿಕ ಸ್ಥೈರ್ಯ ಹೆಚ್ಚಿಸಿದ್ದು ಇದೆ.

ಬಹಳಷ್ಟು ಜನರಿಗೆ ಇದೇ ರೀತಿ ನಾನು ಹೇಳುವುದಿದೆ. ಬಹಳ ಜನ ಹಸು ಸಾಕುವವರು ಉಚಿತವಾದ ಸೇವೆ, ಔಷಧಿ, ಚಿಕಿತ್ಸೆ, ಸಿಕ್ಕರೆ ಹಿಂಡಿ, ಹುಲ್ಲು ಎಲ್ಲಾ ನಿರೀಕ್ಷೆ ಮಾಡುವುದು ಸಹಜ. ಆದರೆ ಹಾಲು ಮಾರಾಟದ ಹಣ ನನ್ನದು. ಹಾಲನ್ನು ಕರಾರುವಾಕ್ಕಾಗಿ ಅಳೆದು ಮಾರುತ್ತಾರೆ. ಆದರೆ ಹಿಂಡಿಯನ್ನು ಮಾತ್ರ “ಅಂದಾಜಿ”ಗೆ ಹಾಕಿ ಹಿಂಡಿಯ ಬಿಲ್ಲು ಕೊಡುವಾಗ “ಹಾಳಾದ ದನ.. ಬಕಾಸುರನ ಹಾಗೆ ತಿನ್ನುತ್ತೆ” ಅಂದುಕೊಂಡು ಹಿಂಡಿಯ ಬಿಲ್ಲನ್ನು ಕೊಡುವವರೇ ಬಹಳ. ಉಚಿತ ಸಿಕ್ಕರೆ ಯಾರು ಬಿಡುತ್ತಾರೆ. ಡಿಸ್ಕೌಂಟ್ ಅಂದ್ರೆ ನಾವೇ ಮೇಲೆ ಬಿದ್ದು ಖರೀದಿಸಿ ಅವಶ್ಯಕತೆ ಇಲ್ಲದಿದ್ದರೂ ಕೊಂಡು “ಕೊಳ್ಳುಬಾಕ” ರಾಗುವದಿಲ್ವೇ? ಅನಾಧಿ ಕಾಲದಿಂದಲೂ ಸಹ ಪಶು ಆಸ್ಪತ್ರೆಗೆ ಬರುವ ಔಷಧಿ ಜಾನುವಾರು ಸಂಖ್ಯೆ ಮತ್ತು ಕಾಯಿಲೆಗಳಿಗೆ ಹೋಲಿಸಿದರೆ ಬಹಳ ಕಡಿಮೆ. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಅದರಲ್ಲೂ ಆಸ್ಪತ್ರೆಗೆ ತಂದ ಜಾನುವಾರುಗಳಲ್ಲಿ “ಅತೀ ಬಡವರಿಗೆ” ಮೊದಲ ಆಧ್ಯತೆ ನೀಡಿ ಸ್ವಲ್ಪ ಕೊಳ್ಳಲು ತಾಕತ್ತು ಇರುವವರಿಗೆ ಔಷಧ “ಬರೆದು”ಕೊಟ್ಟು ಚಿಕಿತ್ಸೆ ಮಾಡಬೇಕೆಂಬ ನಿಯಮವಿದೆ. ಆದರೆ ಎಲ್ಲರ ಆದಾಯ ಪ್ರಮಾಣ ಪತ್ರ ಪಡೆದು ನೋಡಲು ಸಾಧ್ಯವೇ?. ಪಶುವೈದ್ಯರು ಅವರ ವಿವೇಚನೆ ಬಳಸಿ ಚಿಕಿತ್ಸೆ ಮಾಡಬೇಕು.
ಹಾಲು ಮಾರಾಟ ಮಾತ್ರ ತಮ್ಮದು. ಜಾನುವಾರು ಚಿಕಿತ್ಸೆ, ಉಚಿತ ಔಷಧಿಯಿಂದ ಆಗಬೇಕು ಅನ್ನುವ ಈ ಕಾಲದಲ್ಲಿ ಎಲ್ಲೋ ಒಂದಿಬ್ಬರು ಔಷಧ ಅಂಗಡಿಗೆ ಹೋಗಿ ಅರ್ಧ ಮರ್ಧ ಔಷಧಿ ತಂದು ಚಿಕಿತ್ಸೆ ಮಾಡಿಸಿ ನಂತರ ನಮ್ಮನ್ನು ಬೈಕೊಂಡು ಹೋಗುವ ಕಾಲ ಇದು. ಅದುದರಿಂದ ಈ ಘಟನೆ ನನ್ನ ಮನ:ಪಟಲದಿಂದ ಮಾಯವಾಯಿತು.
ಮೂರು ತಿಂಗಳಿನ ನಂತರ ಆ ಗ್ರಾಮಕ್ಕೆ ಹೋಗಿ ನಾವು ತಪಾಸಣೆ ಮಾಡಿದ ಜಾನುವಾರುಗಳನ್ನೆಲ್ಲಾ ಗರ್ಭ ತಪಾಸಣೆ ಮಾಡುತ್ತಾ ನಿಂತಿದ್ದೆ. ಅಷ್ಟೊತ್ತಿಗೆ “ಸ್ವಾಮಿ.. ನನ್ ದನಾನೂ ಪರೀಕ್ಷೆ ಮಾಡಿ. ಪ್ಯಾಟೆಗೆ ಆಧಾರ್ ಕಾರ್ಡ್ ಮಾಡಿಸ್ಲು ಹೋಗ್ಬೇಕು ಅಂತ ಧ್ವನಿ ಬಂತು. ತಿರುಗಿ ನೋಡಿದೆ. ಬಿಳಿಯ ಗಡ್ಡ ಮೀಸೆಯ, ಮಾಸಲು ಬಣ್ಣದ ಹರಿದ ಶರಟು ಹಾಕಿದ ಅದೇ ಮುಖ. ನನಗೋ ಗಾಬರಿ.. ಈ ದನಕ್ಕೆ ಸಿಸ್ಟ್ ಇತ್ತು. ನಿಜವಾಗಿಯೂ ಕಟ್ಟಿದೆಯೇ? ಎಂದು ಧಾವಂತ ಮನೆ ಮಾಡಿತು. ಸ್ಥಳಿಯ ಪಶುವೈದ್ಯರನ್ನು “ಡಾಕ್ಟ್ರೇ… ಈ ಯಪ್ಪ ಎಲ್ಲಾ ಔಷಧಿ ಚಿಕಿತ್ಸೆ ಮಾಡಿಸಿದಾನೇನ್ರಿ? ಅಂತ ಕೇಳಿದೆ. ಓ .. ಸ್ವಾಮಿ.. ಎಲ್ಲಾ ಔಷಧಿ ತಂದು ಡಾಕ್ಟ್ರ ಹತ್ತಿರವೇ ಇಂಜೆಕ್ಷನ್ ಮಾಡ್ಸಿದ್ದೀನಿ. ಕೇಳಿ ಬೇಕಾದ್ರೆ .. ಅಂದ ತಾತ. ಅಲ್ಲ.. ಈ ಬಡ ತಾತನ ಹತ್ತಿರ ಇಷ್ಟೆಲ್ಲಾ ಖರ್ಚು ಮಾಡಿಸಿದ್ದೆನೆಲ್ಲಾ !! ದನ ಗರ್ಭ ಧರಿಸಿದರೆ ಒಳಿತು. ಇಲ್ಲದಿದ್ದರೆ ಆತನ ಹತ್ತಿರ ಸುಮ್ಮನೆ ಖರ್ಚು ಮಾಡಿಸಿದ “ಪಾಪ” ಬರುತ್ತದಲ್ಲಾ ಅಂದುಕೊಳ್ಳುತ್ತಾ ದನದ ಗರ್ಭ ಪರೀಕ್ಷೆ ಮಾಡಿದೆ. ಏನಾಶ್ಚರ್ಯ!!. ದನ ಗರ್ಭ ಧರಿಸಿದೆ. ತಾತನ ಖುಷಿಗೆ ಪಾರವೇ ಇಲ್ಲ. ಖುಷಿಯಾಗಿ ಕುಣಿದು ಕುಪ್ಪಳಿಸಿದ. ಸಾರ್ .. ನಿಮ್ ಕೈಗುಣ ಭಾರಿ ದೊಡ್ಡದು.. ಎಲ್ಲಾ ಹೇಳಿದ್ರೂ ನಿಮ್ ಹತ್ರಾನೇ ತೋರಿಸ್ರಿ ಅಂತ.. ನನ್ ಹಸಕ್ಕೆ “ಗೊಡ್ಡಿ” ಅನ್ನಂಗಿಲ್ಲಾ… ಅದು ಕರು ಹಾಕುತ್ತೆ.. ಡಾಕ್ಟ್ರ ಮನೆಗೆ ಒಂದು ಲೀಟರ್ ಹಾಲು ಕೊಡ್ತೀನಿ.. ಬೀರಪ್ಪಂಗೆ ಕಾಯ್ ಒಡೆಸ್ತೀನಿ …. ಎಂದು ಏನೇನೋ ಕನವರಿಸುತ್ತಲೇ ಇದ್ದ ತಾತ. ಏನಪ್ಪಾ… ಈ ಜನರ ನಂಬಿಕೆ ಅಂತ ನಂಗೂ ಆಶ್ಚರ್ಯವಾಯ್ತು.
ಏನಿದು ಕೈಗುಣ? ನಿಜವೇ ಅಂತ ಯೋಚಿಸಿದಾಗ ಒಂದು ವಿಷಯ ಸ್ಪಷ್ಠವಾಯಿತು. ಪಶುವೈದ್ಯರು ಶ್ರದ್ಧೆಯಿಂದ ಕೆಲಸ ಮಾಡಿದರೆ ಎಲ್ಲ ರೋಗಗಳು ಪತ್ತೆಯಾಗದಿದ್ದರೂ ಸಹ ಅದರಲ್ಲಿರುವ ವಿಜ್ಞಾನ ಗೊತ್ತಾಗಿ ರೋಗ ಪತ್ತೆಗೆ ಸಹಕರವಾಗುತ್ತದೆ. ಈ ರೀತಿ ರೋಗ ಪತ್ತೆ ಮಾಡಿ ಚಿಕಿತ್ಸೆ ಮಾಡಿದರೆ ಗುಣವಾಗೇ ಆಗುತ್ತದೆ. ಇಲ್ಲದಿದ್ದರೂ ಇದು ಇದೇ ರೀತಿಯ ಕಾಯಿಲೆ ಎಂದು ತಿಳಿಸಿ ಅದರ ಅಗುಹೋಗುಗಳನ್ನು ಸ್ವಲ್ಪ ಸಮಾಧಾನದಿಂದ ಮನವರಿಕೆ ಮಾಡಿದರೆ ರೈತರು ಬೇಸರ ಗೊಳ್ಳಲಾರರು. ಡಾಕ್ಟ್ರು ಪ್ರಯತ್ನ ಮಾಡಿದ್ದಾರೆ.. ನಮ್ಮ ನಸೀಬೇ ಅಷ್ಟು !! ಎಂದು ಸುಮ್ಮನಾಗುತ್ತಾರೆ.
ಕಾರಣ “ನಿಮ್ಮ ಜೊತೆ ನಾನಿದ್ದೇನೆ” ಎಂಬ ಮಾತು ಬಹಳ ಆತ್ಮಸ್ಥೈರ್ಯ ನೀಡುತ್ತದೆ.
ಯಾಕೋ ಮೊನ್ನೆ ಯಾರೋ ರೈತರು “ನಿಮ್ಮ ಕೈಗುಣ ಚೆನ್ನಾಗಿದೆ” ಅಂದಾಗ ಇದು ನೆನಪಾಯಿತು. ಹಂಚಿಕೊಳ್ಳೋಣವೆನಿಸಿತು.
Leave a Comment