ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಂತೆ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಸೌಂಡು ಮಾಡುತ್ತಿರುವುದು ಮಾದಕ ಲೋಕದ ಬೆಚ್ಚಿಬೀಳಿಸುವ ಸುದ್ದಿ. ದಿನಬೆಳಗಾದರೆ ಬೇರೆ ಬೇರೆ ತಾಲೂಕುಗಳ ಗಾಂಜಾ ಸುದ್ದಿಗಳು ತಲ್ಲಣ ಮೂಡಿಸುತ್ತಿದ್ದರೆ ಹೊನ್ನಾವರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ತಣ್ಣಗಿದೆ. ಹಾಗಾದರೆ ಹೊನ್ನಾವರಕ್ಕೆ ಮಾದಕ ಲೋಕದ ನಂಟಿಲ್ಲವೇ ಎಂದು ಕೆಳಿದರೆ ಇಲ್ಲ ಎಂದು ಗಟ್ಟಿಯಾಗಿ ಹೇಳುವುದಕ್ಕೆ ಯಾರೂ ಸಿದ್ಧರಿಲ್ಲ.


ಪಟ್ಟಣ ವ್ಯಾಪ್ತಿಯ ವ್ಯೂ ಪಾಯಿಂಟ್, ಪ್ರಭಾತವನ, ಮೂಡಗಣಪತಿ ದೇವಸ್ಥಾನದ ಹಿಂಬದಿ, ಕರ್ನಲ್ ಹಿಲ್ ಮುಂತಾದ ಕಡೆ ನಿರಂತರವಾಗಿ ವಿದ್ಯಾರ್ಥಿಗಳು, ಯುವಕರು ಮಾದಕ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆನ್ನುವ ಆರೋಪ ಕಳೆದ ಮೂರು ವರ್ಷಗಳಿಂದಲೂ ಇದೆ. ಆದರೆ 2018 ರಿಂದ ಇಲ್ಲಿಯವರೆಗೂ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಅಥವಾ ಮಾರಾಟದ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗದಿರುವುದು ಅಚ್ಚರಿಗೆ ಕಾರಣವಾಗಿದೆ.
ನಮಗ್ಯಾಕೆ ಉಸಾಬರಿ ಎನ್ನುವ ಮನಸ್ಥಿತಿಯೇ ಇದಕ್ಕೆಲ್ಲಾ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಕಣ್ಣೆದುರು ಅನಾಹುತ ನಡೆಯುತ್ತಿದ್ದರೂ ನಮಗ್ಯಾಕೆ ಎಂದು ಬದಿಗೆ ಸರಿದು ಹೋಗುವ ಮನಸ್ಥಿತಿಯೇ ತಾಲೂಕಿನಲ್ಲಿ ಮಾದಕ ಲೋಕ ಆಳವಾಗಿ ಬೇರೂರುವುದಕ್ಕೆ ಕಾರಣವಾಗಬಹುದು ಎನ್ನುವ ಆತಂಕ ಕಾಡುತ್ತಿದೆ. ಇನ್ನು ಮುಂದಾದರೂ ಜನ ದೂರು ನೀಡಲು ಮುಂದೆ ಬರಬಹುದಾ ಎನ್ನುವುದು ಕಾಡುತ್ತಿರುವ ಪ್ರಶ್ನೆ.
Leave a Comment