ಕಾರವಾರ: ಜಿಲ್ಲಾಸ್ಪತ್ರೆಯಲ್ಲಿ ಸಾವನಪ್ಪಿದ್ದ ಬಾಣಂತಿ ಗೀತಾ ಭಾನಾವಳಿಕರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ. ಶಿವಾನಂದ ಕುಡ್ತಳಕರ್ ಅಮಾನತು ಆಗದಿದ್ದರೆ ಆಸ್ಪತ್ರೆ ಎದುರು ಉಪವಾಸ ಸತ್ಯಾಗೃಹ ನಡೆಸುವುದಾಗಿ ಮೀನುಗಾರ ಮುಖಂಡ ರಾಜು ತಾಂಡೇಲ್ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೀತಾ ಭಾನಾವಳಿಕರ್ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ. ಡಾ. ಶಿವಾನಂದ ಕುಡ್ತಳಕರ್ ಹಣದ ಆಸೆಗೆ ಗೀತಾ ಭಾನಾವಳಿಕರ್ ಅವರ ಶಸ್ತ್ರ ಚಿಕಿತ್ಸೆಗೆ ಒತ್ತಾಯಿಸಿದ್ದು ಚಿಕಿತ್ಸೆ ವೇಳೆ ಆಕೆ ಸಾವನಪ್ಪಿದ್ದಾರೆ. ಇದಾದ ನಂತರವೂ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಲಿದ್ದು ಅಲ್ಲಿ ಸಾಕ್ಷ್ಯ ನಾಶ ಮಾಡುವ ಸಾದ್ಯತೆ ಹೆಚ್ಚಿದೆ. ಹೀಗಾಗಿ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಬಾಣಂತಿ ಸಾವಿನ ಪ್ರಕರಣದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಯುವತಿ ಹರ್ಷಿತಾ ಎಂಬಾತರನ್ನು ಸಿಲುಕಿಸಲು ಹುನ್ನಾರ ನಡೆದಿದೆ. ಆಸ್ಪತ್ರೆಯವರು ಅಮಾಯಕ ಯುವತಿಗೆ ಒತ್ತಡ ಹಾಕಿದ್ದು ಆಕೆ ಆತ್ಮಹತ್ಯೆ ಯೋಚನೆಯಲ್ಲಿರುವಾಗ ಮೀನುಗಾರರು ತಪ್ಪಿಸಿದ್ದಾರೆ. ಮಾಡದ ತಪ್ಪನ್ನು ಆಕೆ ಮಾಡಿದೆನೆಂದು ಒಪ್ಪಿಕೊಳ್ಳದ ಕಾರಣ ಅವಳನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆದಿದೆ ಎಂದು ದೂರಿದರು.
ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ನಾವು ಹೋರಾಟ ಮಾಡುತ್ತಿಲ್ಲ. ಅವರು ಕೊಡುವ ಪರಿಹಾರದಿಂದ ಸಾವನಪ್ಪಿದವರನ್ನು ಬದುಕಿಸಲು ಸಾಧ್ಯವಿಲ್ಲ. ಈ ಹಿಂದೆ ಕೂಡ ಸಾಕಷ್ಟು ಸಾವು ಸಂಭವಿಸಿದ್ದು, ಹಣ ಕೊಟ್ಟು ರಾಜಿ ಮಾಡಲಾಗಿದೆ. ಈ ಸಾವಿಗೆ ನ್ಯಾಯ ದೊರಕಿಸಿಕೊಡಲು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
- ತನಿಖಾ ತಂಡದ ಬಗ್ಗೆ ಅನುಮಾನ
ಮೀನುಗಾರರ ಪರ ನ್ಯಾಯವಾದಿ ಗಜಾನನ ತಾರಿಕರ್ ಮಾತನಾಡಿ, ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ. ಅದಾದ ನಂತರ ಜಿಲ್ಲಾಧಿಕಾರಿ ತನಿಖಾ ತಂಡವೊಂದನ್ನು ರಚನೆ ಮಾಡಿದ್ದಾರೆ. ಈ ತನಿಖಾ ತಂಡದಲ್ಲಿ ಆರೋಪಿ ವೈದ್ಯರ ಸಂಬಂಧಿಕರು ಹಾಗೂ ಜಿಲ್ಲೆಯ ಅಧಿಕಾರಿಗಳೇ ಇದ್ದಾರೆ. ಹೀಗಾಗಿ ಈ ತನಿಖಾ ತಂಡದ ಮೇಲೆಯೂ ಅನುಮಾನವಿದೆ ಎಂದು ಹೇಳಿದರು. ಗೀತಾ ಭಾನಾವಳಿಕರ್ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ವಿನಾಯಕ ಹರಿಕಂತ್ರ, ಚೇತನ ಹರಿಕಂತ್ರ ಇದ್ದರು.
Leave a Comment