ಹೊನ್ನಾವರ – ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವುದು.. ಕಲ್ಪನೆಗಳಿಗೆ ಕುಂಚ ಹಿಡಿಯುವುದು ಎಂದಿಗೂ ಸುಲಭ ಸಾಧ್ಯವಲ್ಲ. ಆದರೆ ಪ್ರತಿಭೆಯ ಜೊತೆ ಆಸಕ್ತಿ, ಪ್ರಯತ್ನ, ತರಬೇತಿಗಳು ಮೇಳೈಸಿದಾಗ ಕಲಾವಿದ ಮತ್ತು ಆತನ ಕಲೆ ಸುತ್ತಲ ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ತಾನೇ ತಾನಾಗಿ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ ಶರಾವತಿಯ ಮಡಿಲ ಮಗು ಲೋಕೇಶ ಗೌಡ.
ತಾಲೂಕಿನ ಮಾವಿನಕುರ್ವಾದ ತಿಮ್ಮಪ್ಪ ಹಾಗೂ ಕೇಶಿ ಇವರ ಮಗನಾಗಿ ಕೃಷಿ ಕುಟುಂಬದಲ್ಲಿ ಜನಿಸಿ ಪ್ರೌಢ ಶಿಕ್ಷಣದವರೆಗೆ ಶರಾವತಿ ಪ್ರೌಢಶಾಲೆ ಹೊಸಾಡದಲ್ಲಿ ಓದಿ ಕಲೆಯ ಬಗೆಗಿನ ತೀವೃವಾದ ಸೆಳೆತದಿಂದ ಗದಗ ಜಿಲ್ಲೆಯಲ್ಲಿರುವ ವಿಜಯ ಕಾಲೇಜ್ ಆಪ್ ಫೈನ್ ಆಟ್ಸ್ ಗೆ ಪ್ರವೇಶ ಪಡೆದು ಸತತ ಐದು ವರ್ಷ ತನ್ನನ್ನು ಚಿತ್ರಕಲಾ ಅಭ್ಯಾಸಕ್ಕೆ ಸಮರ್ಪಿಸಿಕೊಂಡು 2014 ರಲ್ಲಿ ಉನ್ನತ ಶ್ರೇಣಿಯಲ್ಲಿ ಬಿ.ಎಪ್.ಎ ಪದವಿಯನ್ನು ಪೂರೈಸಿದ್ದಾನೆ.

ಬಿ.ಎಪ್.ಎ ಪದವಿಯ ನಂತರ ರಾಜಧಾನಿ ಬೆಂಗಳೂರಿನತ್ತ ಮುಖಮಾಡಿರುವ ಪ್ರತಿಭೆ ತಾನಿಚ್ಚಿಸಿದ ಬಣ್ಣದ ಲೋಕದಲ್ಲಿಯೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅದ್ಭುತ ಎನಿಸುವ ವರ್ಣ ಸಂಯೋಜನೆಯೊಂದಿಗೆ ಕುಂಚದ ಲಾಲಿತ್ಯದಲ್ಲಿ ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಅರಳಿದ ಒಂದೊಂದು ಚಿತ್ರವೂ ನೋಡುಗರ ಚಿತ್ತವನ್ನು ಅಪಹರಿಸುತ್ತದೆ ಎನ್ನುವುದು ಚಿತ್ರಕಲಾ ಪ್ರದರ್ಶನಗಳಲ್ಲಿ ವ್ಯಕ್ತವಾಗಿರುವ ಮೆಚ್ಚುಗೆಯ ಮಾತುಗಳು.


ಕ್ಯಾನ್ವಾಸ್ ಇರಲಿ ನುಣುಪಾದ ಮನೆಯ ಗೋಡೆಯೇ ಆಗಿರಲಿ ಥೈಲ ವರ್ಣ, ಜಲ ವರ್ಣ ಯಾವುದಾದರೂ ಸೈ ಅಮೂರ್ತ ಅಥವಾ ಮೂರ್ತ ಜಗತ್ತನ್ನು ಬಣ್ಣಗಳಲ್ಲಿ ಕಟ್ಟಿಕೊಡಬಲ್ಲೆ ಎನ್ನುವ ತುಂಬು ಆತ್ಮವಿಶ್ವಾಸವನ್ನು ಹೊಂದಿರುವ ಲೋಕೇಶನ ಕೈಯಲ್ಲರಳಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ, ನಾಗಾ ಸಾದು, ತುಂಟ ನಗುವಿನೊಂದಿಗೆ ಇಣುಕಿ ನೋಡುವ ಪುಟ್ಟ ಮಗು, ವಾರೆ ನೋಟದಲ್ಲಿ ಕೆಣಕುವ ಸುಂದರಿ, ಕಸೂತಿಯ ಮಹಿಳೆ, ಸಾಂಪ್ರದಾಯಿಕ ನೃತ್ಯವನ್ನು ಪ್ರತಿನಿಧಿಸುವ ಲಮಾಣಿ ಮಹಿಳೆ, ನಿಸರ್ಗದ ಸುಂದರ ದೃಶ್ಯಗಳು ವಿಶ್ಲೇಷಣೆಗಾಗಲೀ ವರ್ಣನೆಗಾಗಲೀ ನಿಲುಕುವಂತದ್ದಲ್ಲ. ಕಣ್ಣಿಂದ ಆಸ್ವಾದಿಸಿಯೇ ಅನುಭವಿಸಬೇಕು.
ಡಿಸೈನಿಂಗ್, ಆ್ಯನಿಮೇಷನ್, ಮಲ್ಟಿಮೀಡಿಯಾ, ಸ್ಪಾಟ್ ಪೇಯ್ಟಿಂಗ್‍ನಲ್ಲಿ ಆಸಕ್ತಿಯನ್ನು ಹೊಂದಿರುವ ಲೋಕೇಶ ಮುಂದಿನ ದಿನಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತನಗೆ ತಿಳಿದಿರುವುದನ್ನು ಹೇಳಿಕೊಡಲು ಉತ್ಸುಕನಾಗಿದ್ದೇನೆ ಎನ್ನುತ್ತಾನೆ. ಲೋಕೇಶನ ಕುಂಚದಲ್ಲಿ ಅರಳಿದ ಕಲೆಯನ್ನು ಕಣ್ತುಂಬಿಕೊಳ್ಳಲು ಈ ಇನ್ಸ್ಟಾಗ್ರಾಂ ಲಿಂಕ್ ಸೇರಿಕೊಳ್ಳಬಹುದು. . Lokesh_art
2012, 13, 14 ಸತತ ಮೂರು ವರ್ಷ ಹಂಪಿ ಆರ್ಟ್ ಕ್ಯಾಂಪ್, 2014 ರಲ್ಲಿ ಗದಗದಲ್ಲಿ ನಡೆದ ಶಿಲ್ಪಕಲಾ ಶಿಬಿರ, ಹುಲಕೋಟಿ ಬಿತ್ತಿಚಿತ್ರ ಶಿಬಿರ, 2016 ಬೆಂಗಳೂರಿನ ಇನ್ಸ್ಟಾಲೇಶನ್ ಕ್ಯಾಂಪ್‍ನಲ್ಲಿ ಭಾಗವಹಿಸುವಿಕೆ.
2013ರಲ್ಲಿ ಬೆಂಗಳೂರಿನಲ್ಲಿ ನಡೆದ ಕಲರ್ ಮೇಕಿಂಗ್ ಚಿತ್ರಕಲಾ ಪ್ರದರ್ಶನ, ಹೊನ್ನಾವರದಲ್ಲಿ 2014 ರ ಕಲರ್ ಸ್ಟ್ರೋಕ್ ಮತ್ತು 2015 ರಲ್ಲಿ ಆರ್ಟ್ ಆಪ್ ಕಲರ್ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ.
[ ಕಲಾ ಜಗತ್ತಿನ ಪಯಣ ಜೀವನದ ಗುರಿಯು ಹೌದು ನನ್ನ ಪಾಲಿನ ಖುಷಿಯೂ ಹೌದು. ಸರ್ಕಾರಿ ಉದ್ಯೋಗದ ಸಾಧ್ಯತೆ ಕಡಿಮೆಯಾದರೂ ಕಲೆಯಲ್ಲಿ ನೈಪುಣ್ಯತೆ ಸಾಧಿಸಿದರೆ ಯಾವತ್ತೂ ಬೆಲೆ ಇದ್ದೇ ಇದೆ. ಹೊನ್ನಾವರದಲ್ಲಿ ಚಿತ್ರಕಲಾ ತರಬೇತಿ ಶಾಲೆಯನ್ನು ತೆರೆಯುವ ಮಹತ್ವಾಕಾಂಕ್ಷೆಯಿದೆ. – ಲೋಕೇಶ ಗೌಡ,ಆರ್ಟಿಸ್ಟ್]
Leave a Comment