ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾಗಿರುವ ಆರ್ ವಿ ದೇಶಪಾಂಡೆ ಅವರ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವುದು ಹಾಗೂ ವಿನಾಕಾರಣ ಟಿಕೆ ಮಾಡುವ ಪ್ರವೃತ್ತಿಯನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನಿಲ್ಲಿಸಲಿ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಶಾಸಕ ದೇಶಪಾಂಡೆ ಅವರು ಮೂರು ತಿಂಗಳಿಗೊಮ್ಮೆ ಬಂದು ಕೆಡಿಪಿ ಸಭೆ ನಡೆಸುತ್ತಾರೆ ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ, ಜನರಿಗೆ ಸಹಾಯ ಮಾಡಲಿಲ್ಲ ಎಂದು ಟಿಕೆ ಮಾಡಿರುವುದನ್ನು ಖಂಡಿಸುವುದಾಗಿ ಹೇಳಿದ ಅವರು ಶಾಸಕರು ಕಳೆದ ನಾಲ್ಕೂ ತಿಂಗಳಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ಕುರಿತು ದಾಖಲೆ ಸಮೇತ ಮಾಧ್ಯಮಕ್ಕೆ ವಿವರಿಸಿದರು.
ದೇಶಪಾಂಡೆ ಅವರು ಎಪ್ರಿಲ್ನಿಂದ ಸಪ್ಟೆಂಬರ್ ತಿಂಗಳ ಈವರೆಗೆ ಕೊವಿಡ್ ನಿಯಂತ್ರಣಕ್ಕಾಗಿ ತಮ್ಮ ಕ್ಷೇತ್ರದ ಎಲ್ಲ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಅಲ್ಲದೇ ಮೇಲಿಂದ ಮೇಲೆ ಸಭೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಕ್ಷೇತ್ರದ ವಿವಿಧ ಗ್ರಾಮಗಳ ರೈತರನ್ನು ಭೇಟಿಯಾಗಿ ಅವರಿಗೆ ಇಂಡೋ ಅಮೇರಿಕನ್ ಕಂಪೆನಿಯ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ನರೇಗಾ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಅವರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಹೇಳಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ್ದಾರೆ. ರೇಶನಕಿಟ್, ಮಾಸ್ಕ್, ಸ್ಯಾನಿಟೈಸರ್, ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದಾರೆ. ಕೊರೊನಾ ವಾರಿಯರ್ಸಗಳಾದ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರಿಗೆ, ಪೋಲಿಸ್, ಕಂದಾಯ ಇಲಾಖೆ, ಪೌರಕಾರ್ಮಿಕರಿಗೆ ಆರೋಗ್ಯ ಕಿಟ್ ನೀಡಿದ್ದು ಅಲ್ಲದೇ ಊಟ-ಉಪಹಾರದ ವ್ಯವಸ್ಥೆ ಮಾಡಿದ್ದಾರೆ ಎಂದ ಸುಭಾಷ ಕೊರ್ವೆಕರ ಸಂಕಷ್ಟದ ಸ್ಥಿತಿಯಲ್ಲಿ ಗೃಹರಕ್ಷಕ ದಳದವರಿಗೆ, ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯರಿಗೆ, ಅಗಸರಿಗೆ, ಆಟೊ-ಟ್ಯಾಕ್ಸಿ ಚಾಲಕರಿಗೆ, ಸವಿತಾ ಸಮಾಜ, ದರ್ಜಿಗಳಿಗೆ ಇತರ ಹಲವರಿಗೆ ಧನ ಸಹಾಯ ಮಾಡಿದ್ದಾರೆ ಆದರೇ ಇದ್ಯಾವುದರ ಬಗ್ಗೆ ಮಾಜಿ ಶಾಸಕರು ಮಾತನಾಡುವುದಿಲ್ಲ ಬದಲಿಗೆ ಸುಳ್ಳು ಆರೋಪಗಳನ್ನು ಮಾಡುವುದರಲ್ಲೇ ಕಾಲಹರಣ ಮಾಡುತ್ತಾರೆ ಎಂದು ಆರೋಪಿಸಿದರು.
ಅತಿವೃಷ್ಠಿಯಿಂದ ಬೆಳೆಹಾನಿಯಾಗಿದೆ ಅಲ್ಲದೇ ಪರಿಹಾರ ಪಿಡಿತ ತಾಲೂಕುಗಳ ಪಟ್ಟಿಯಿಂದ ಹಳಿಯಾಳ ತಾಲೂಕು ಕೈ ಬಿಡಲಾಗಿದ್ದು ಈ ಬಗ್ಗೆ ಶಾಸಕ ದೇಶಪಾಂಡೆ ಅವರು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಆದರೇ ಮಾಜಿ ಶಾಸಕರು ಮಾತ್ರ ರೈತರಿಗೆ, ಕ್ಷೇತ್ರದ ಜನರಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಇದರಿಂದ ಬಿಜೆಪಿ ಸರ್ಕಾರ ಹಾಗೂ ಮಾಜಿ ಶಾಸಕರ ವಿಫಲತೆಗಳನ್ನು ಅವರೇ ಒಪ್ಪಿಕೊಂಡಂತಾಗುವುದಿಲ್ಲವೇ ಎಂದು ಕೊರ್ವೆಕರ ಹೇಳಿದರು.
ಯುವ ಕಾಂಗ್ರೇಸ್ ಅಧ್ಯಕ್ಷ ರವಿ ತೊರಣಗಟ್ಟಿ ಮಾತನಾಡಿ ಲಾಕ್ಡೌನ್ ಸಂದರ್ಭದಲ್ಲಿ ಹಳಿಯಾಳ-ದಾಂಡೇಲಿಯಲ್ಲಿ ಇದ್ದಂತಹ ರಾಜಸ್ಥಾನ, ಗುಜರಾತ್, ಬಿಹಾರ ರಾಜ್ಯಗಳ ಕಾರ್ಮಿಕರು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪುವ ವ್ಯವಸ್ಥೆಯನ್ನು ದೇಶಪಾಂಡೆ ಅವರು ಮಾಡಿದ್ದರು ಎಂದರು.
ಸುದ್ದಿಗೊಷ್ಠಿಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ತಾಲೂಕಿನ ಮಂಗಳವಾಡ ಗ್ರಾಮದವರಾದ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಸುಶೀಲಾ ಪಾಟೀಲ್ ಮತ್ತು ಭಟ್ಕಳದವರಾದ ಜಿಪಂ ಮಾಜಿ ಸದಸ್ಯ ಶ್ರೀಪಾದ ಕಾಮತ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.
ಸುದ್ದಿಗೊಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಪ್ರಮುಖರಾದ ಮಾಲಾ ಬ್ರಗಾಂಜಾ, ಸಂಜು ಮಿಶ್ಯಾಳೆ, ಸಂದೇಶ ಪಾಟೀಲ್, ರವಿ ಕಂಕಾಳಿ ಇದ್ದರು.
Leave a Comment