ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ವಿಶೇಷ ತರಬೇತಿ ಕಾರ್ಯಕ್ರಮ ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ಶನಿವಾರ ನಡೆಯಿತು .

ತಾಲೂಕ ದಂಡಾಧಿಕಾರಿ ವಿವೇಕ ಶೇಣ್ವಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಈ ತರಬೇತಿ ಮೂಲ ಉದ್ದೇಶವು ಮಾನವ ನಿರ್ಮಿತ ಮತ್ತು ನೈಸರ್ಗಿಕವಾಗಿ ಸಂಭವಿಸಬಹುದಾದದ ವಿಕೋಪಗಳನ್ನು ನಿರ್ವಹಿಸುವುದಾಗಿದೆ. ಸ್ಥಳಿಯವಾಗಿ ಅನುಭವಿರುವದರಿಂದ ಪ್ರವಾಹಭೀತಿಯಿಂದ ಹಾನಿ ಸಂಭವಿಸುದನ್ನು ತಡೆಯಬಹುದು. ಸೂಕ್ತ ತರಬೇತಿಯಿಂದ ಸ್ವಯಂ ಸೇವಕರು ಸಂಕಷ್ಟದ ಸಂದರ್ಭಗಳಲ್ಲಿ ಉತ್ತಮ ರೀತಿಯ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಕೊಡುಗೆ ಮತ್ತು ಸಹಕಾರ ಅಪಾರ ಎಂದು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ ವಿನ್ಸೆಂಟ್ ಪಾಯಸ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ 55 ಸೂಕ್ಷ್ಮ ಪ್ರದೇಶಗಳಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ತರಬೇತಿ ನೀಡಲು ಮುಂದಾಗಿದ್ದೇವೆ. ಈಗಾಗಲೇ 11 ಘಟಕ ಸ್ಥಾಪಿಸಿ 1100 ಕಾರ್ಯಕರ್ತರನ್ನು ಸೇರಿಸಲಾಗಿದೆ. 2.50 ಲಕ್ಷ ವೆಚ್ಚದಲ್ಲಿ ವೆಪನ್ಸ್ಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ಬಳಸಿ ರಕ್ಷಣಾ ಕಾರ್ಯವನ್ನು ಮಾಡಲು ತರಬೇತಿಯನ್ನು ನೀಡಲಾಗುತ್ತದೆ. ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು. ಪ್ರಜ್ಞಾವಂತರಾಗಿ ತಾವೂ ಬದುಕಿ, ಇತರರೂ ಬದುಕಲು ನೆರವಾಗುವುದು ಮಾನವ ಧರ್ಮವಾಗಿದೆ. ಆಪತ್ತು ನಿರ್ವಹಣೆ ಮಾಡಲು ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ವಿಪತ್ತು ನಿರ್ವಹಣೆ ಸ್ವಯಂ ಸೇವಕರಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯವಾಗಿದೆ. ರಕ್ಷಣಾ ಪರಿಕರಗಳ ಸಮರ್ಪಕ ಬಳಕೆ ಬಗ್ಗೆಯೂ ಅವರಿಗೆ ಮಾಹಿತಿ ನೀಡಲಾಗುವುದು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸತೀಶ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಪ್ರವಾಹ ಬಂದಾಗ ಕಾರ್ಯನಿರ್ವಹಿಸಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಯಿತು.
ವೇದಿಕೆಯಲ್ಲಿ ಸಿಪಿಐ ವಸಂತ ಆಚಾರಿ, ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೆಶಕ ವಸಂತ ಸಾಲಿಯಾನ, ಜಿಲ್ಲಾ ನಿರ್ದೇಶಕರಾದ ಶಂಕರ ಶೆಟ್ಟಿ, ಯೋಜನಾಧಿಕಾರಿ ಎಂ.ಎಸ್.ಈಶ್ವರ, ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವರಾಜ ಮೇಸ್ತ, ವಾಮನ ನಾಯ್ಕ, ರಾಮಚಂದ್ರ ನಾಯ್ಕ, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು
.
Leave a Comment