ಹೊನ್ನಾವರ: ಭಾರಿ ಮಳೆ-ಗಾಳಿಗೆ ಬಡ ಕೂಲಿ ಕಾರ್ಮಿಕರೊಬ್ಬರ ಮಣ್ಣಿನ ಮನೆ ಕುಸಿದುಬಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರು ಹಳ್ಳುಮೂಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಶಿರೂರು ಹಳ್ಳಿಮೂಲೆ ನಿವಾಸಿ ಮಂಜುನಾಥ ಗಣಪತಿ ನಾಯ್ಕ ಎಂಬುವರಿಗೆ ಸೇರಿದ ಮನೆಯಾಗಿದ್ದು, ಶುಕ್ರವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿದ ಕೆಲ ಹೊತ್ತಲ್ಲಿ ಒಂದು ಭಾಗದ ಗೋಡೆ ಕುಸಿದು ಬಿದ್ದ ಶಬ್ಧ ಮನೆಯವರಿಗೆ ಕೇಳಿಸಿದೆ. ಗಾಬರಿಗೊಂಡ ಮಂಜುನಾಥ ಹಾಗೂ ಅವರ ಪತ್ನಿ ಮೂವರು ಮಕ್ಕಳನ್ನು ಮನೆಯ ಹೊರಕ್ಕೆ ಕರೆದೊಯ್ದಿದ್ದಾರೆ. ನೋಡನೋಡುತ್ತಲೆ ಪೂರ್ಣ ಪ್ರಮಾಣದಲ್ಲಿ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸಮಯಪ್ರಜ್ಞೆ ಮೆರೆದಿದ್ದರಿಂದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಹಾಗೂ ಮನೆಯವರು ರಾತ್ರಿ ಊಟ ಮುಗಿಸಿ 11 ಗಂಟೆ ಸುಮಾರಿಗೆ ಅಲ್ಲಿಯೇ ಮಲಗಿ ನಿದ್ರಿಸುತ್ತಿದ್ದರು. ಆದರೆ ಊಟ ಮುಗಿದ ಕ್ಷಣಾರ್ಧದಲ್ಲಿ ಈ ಘಟನೆ ಸಂಭವಿಸಿರುವುದು ಬಡ ಕೂಲಿ ಕಾರ್ಮಿಕನ ಕುಟುಂಬ ಬದುಕುಳಿದಿದೆ. ಮನೆ ಕುಸಿತದಿಂದ ಅಕ್ಕಿ, ಬೇಳೆ-ಕಾಳು, ವಿದ್ಯುತ್ ಉಪಕರಣಗಳು, ಮನೆಗೆ ಹಾಕಲಾದ ಹೆಂಚು, ಕಟ್ಟಿಗೆ ಸಾಮಗ್ರಿಗಳು ನುಜ್ಜುಗುಜ್ಜಾಗಿದ್ದು, 3 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ವಿವೇಕ ಶೇಣ್ವಿ, ಗ್ರಾಪಂ ಸಿಬ್ಬಂಧಿಗಳಾದ ರವಿ ನಾಯ್ಕ, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೂರು ಕಲ್ಪಿಸಿಕೊಡಿ: ಕೂಲಿ-ನಾಲಿ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ಸಂಸಾರವನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ ನಾಯ್ಕ ಅವರಿಗೆ ಈಗ ಮನೆ ಕಳೆದುಕೊಂಡಿರುವುದು ಆಘಾತ ತಂದಿದೆ. ಯಾವುದೇ ಮೂಲ ಆದಾಯ ಇಲ್ಲದಿರುವುದರಿಂದ ಜೀವನ ಸಾಗಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ನಡುವೆ ಮಳೆಯ ಆರ್ಭಟಕ್ಕೆ ಮನೆಯನ್ನೂ ಕಳೆದುಕೊಂಡಿರುವ ಮಂಜುನಾಥ ಅವರು ಜನಪ್ರತಿನಿಧಿಗಳ, ಅಧಿಕಾರಿಗಳ ಸಹಾಯ-ಸಹಕಾರ ಬಯಸಿದ್ದಾರೆ. `ಹೇಗಾದರೂ ಜೀವನ ಸಾಗಿಸುತ್ತೇನೆ, ಆದರೆ ಉಳಿಯಲು ಮನೆಯನ್ನು ಕಲ್ಪಿಸಿಕೊಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಊರಿನ ಗ್ರಾಮಸ್ಥರು ಈಗಾಗಲೆ ಕುಸಿದ ಮನೆಯನ್ನು ತೆರವುಗೊಳಿಸಿ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಂಜುನಾಥ ಅವರ ನೆರವಿಗೆ ಧಾವಿಸಬೇಕು ಎಂದು ಊರಿನ ಪ್ರಮುಖರಾದ ಕಮಲಾಕರ ನಾಯ್ಕ, ಮಂಜುನಾಥ ನಾಯ್ಕ, ಗಜಾನನ ಗೌಡ, ಪರಮೇಶ್ವರ ನಾಯ್ಕ, ಮಂಜುನಾಥ ಗೌಡ, ರತ್ನಾಕರ ನಾಯ್ಕ, ಗಣಪತಿ ನಾಯ್ಕ, ಲೋಕೇಶ ನಾಯ್ಕ ಇತರರು ಆಗ್ರಹಿಸಿದ್ದಾರೆ.
Leave a Comment