ಹಳಿಯಾಳ:- ಎಪಿಎಮ್ಸಿ, ಭೂ ಸುಧಾರಣಾ, ಕೃಷಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳ ಜಂಟಿ ‘ಐಕ್ಯ ಹೋರಾಟ ಸಮೀತಿ’ಯಿಂದ ಕರೆ ನೀಡಿದ ಹಳಿಯಾಳ ಬಂದ್ ಯಶಸ್ವಿಯಾಗಿದೆ.
ರಾಜ್ಯದ ವಿವಿಧ ಸಂಘಟನೆಗಳು ಕರ್ನಾಟಕ ಬಂದ ಕರೆ ನೀಡಿದ ಹಿನ್ನೆಲೆ ಹಳಿಯಾಳದ ಸಂಘಟನೆಗಳು ಹಳಿಯಾಳ ಬಂದ್ಗೆ ಕರೆ ನೀಡಿದ್ದವು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರೇ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ ಅಲ್ಲದೇ ಖಾಸಗಿ ಪ್ರಯಾಣಿಕ ವಾಹನಗಳು ಸ್ಥಗಿತಗೊಂಡಿದ್ದವು.


ಸರ್ಕಾರಿ ಕಚೇರಿಗಳು, ಬ್ಯಾಂಕಗಳು ಎಂದಿನಂತೆ ಕಾರ್ಯನಿರ್ವಹಿಸಿದವು ಹಾಗೂ ವಾಹನ, ಜನ ಸಂಚಾರ ಇದ್ದಿದ್ದು ಬಿಟ್ಟರೇ ಉಳಿದಂತೆ ಬಂದ್ ಯಶಸ್ವಿಯಾಗಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಳಿಯಾಳ ಘಟಕ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕಾರ್ಮಿಕ ಸಂಘಟನೆಯವರು, ಭಾರತ ಆಟೋ ಸ್ಟ್ಯಾಂಡ, ಭಾರತೀಯ ಮಾಜಿ ಸೈನಿಕರ ಸಂಘ, ಹಿರಿಯ ನಾಗರೀಕರ ವೇದಿಕೆ, ದಲಿತ ಸಂಘರ್ಷ ಸಮೀತಿ, ಕರ್ನಾಟಕ ರೈತ ಪ್ರಾಂತ ಸಂಘ, ಸಿಐಟಿಯು ಸಂಘಟನೆಗಳು ಜಂಟಿಯಾಗಿ ಐಕ್ಯ ಹೋರಾಟ ಸಮೀತಿಯ ಹೆಸರಲ್ಲಿ ಪ್ರತಿಭಟನೆ ನಡೆಸಿದವು.
ಇಲ್ಲಿಯ ಮರಾಠಾ ಭವನದ ಬಳಿ ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದ ಸಂಘಟನೆಯವರು ಬಳಿಕ ಮರಾಠಾ ಭವನದಿಂದ ಪ್ರತಿಭಟನಾ ಮೇರವಣಿಗೆ ಮೂಲಕ ವನಶ್ರೀ ವೃತ್ತ, ಬಸ್ ನಿಲ್ದಾಣ ರಸ್ತೆ, ಮೇದಾರಗಲ್ಲಿ, ಸಂಗೋಳ್ಳಿ ರಾಯಣ್ಣ ವೃತ್ತ, ಮುಖ್ಯ ಮಾರುಕಟ್ಟೆ ಬೀದಿ ಮೂಲಕ ಇಲ್ಲಿಯ ಛತ್ರಪತಿ ಶಿವಾಜಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಮೊಳಗಿಸಿದರು.
ಬಳಿಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ವಿವಿಧ ಸಂಘಟನೆಗಳ ಪ್ರಮುಖರಾದ ಕುಮಾರ ಬೋಬಾಟಿ, ಎಮ್.ವಿ.ಘಾಡಿ, ಅಬ್ದುಲ್ ಶೇಖ, ಸುರೇಶ ಶಿವಣ್ಣವರ, ಹರೀಶ ನಾಯ್ಕ, ಜಯಶ್ರೀ ಹಿರೇಕರ, ಅಶೋಕ ಮೇಟಿ, ಚಂದ್ರಕಾಂತ ದುರ್ವೆ, ವಿನೋದ ದೊಡ್ಮಣಿ, ಗೋಪಿ ಗರಗ, ಮಂಜುನಾಥ ಬೆಡದೊಳಕರ, ಪುಂಡ್ಲಿಕ ಗೊಡಿಮನಿ, ಬೆಳಗಾಂವಕರ ಇತರರು ಇದ್ದರು.
Leave a Comment