ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.

ಆದರೆ ಸ್ಮಶಾನವನ್ನೂ ಉದ್ಯಾನವನದಂತೆ ಒಪ್ಪ ಓರಣವಾಗಿಟ್ಟುಕೊಂಡು ಮುಕ್ತಿದಾಮ ಎನ್ನುವ ಹೆಸರಿಗೆ ಅನ್ವರ್ಥಕವಾಗಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಹೊನ್ನಾವರ ಪಟ್ಟಣ ವ್ಯಾಪ್ತಿಯ ಶರಾವತಿ ದಡದಲ್ಲಿರುವ ಹಿಂದೂ ರುದ್ರಭೂಮಿ.
ಹಸಿರು ಬಳ್ಳಿ, ಅರಳಿ ನಗುಬೀರಿದ ಹೂವುಗಳಿಂದಾವೃತ್ತವಾದ ಪ್ರವೇಶ ದ್ವಾರ, ಇಂಟರ್ಲಾಕ್ ನೆಲಹಾಸು, ಹತ್ತಿರದವರ ಸಾವಿನ ದುಗುಡ ಹೊತ್ತುಬರುವವರನ್ನು ಸ್ವಾಗತಿಸಲು ಬಣ್ಣ ಬಣ್ಣದ ಹೂವುಗಳನ್ನು ಹೆತ್ತು ಸಾಲಾಗಿ ನಿಂತಿರುವ ಗಿಡ ಮರ ಬಳ್ಳಿಗಳು ಉಸಿರು ಹಾರಿದ ದೇಹವ ದಹಿಸುವ ಬೆಂಕಿಯ ಕೆನ್ನಾಲಿಗೆಯ ಬಿಸಿ, ಚಿತೆಯಿಂದ ಹೊರಡುವ ಕಮಟು ವಾಸನೆಯ ಘಾಟು, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಕಂಬನಿಗಳೆಲ್ಲಾ ಸಂದಿಸುವ ತಾಣದ ಭಯಾನಕತೆಯನ್ನು ಕಳೆದಿದೆ ಇಲ್ಲಿ.


ಹೆಣ ಸುಡುವ ಕೆಲಸ ಎಂದರೆ ಶಿವನ ಬಿಟ್ಟಿ ಎನ್ನುವ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅದೇ ಕಾರಣಕ್ಕೆ ಲಯ ಕಾರಕನಾದ ಪರಶಿವನ ಮೂರ್ತಿಯೂ ಇಲ್ಲಿ ಪ್ರತಿಷ್ಠಾಪನೆಗೊಂಡಿದೆ. ಸತ್ಯ ಪರಿಪಾಲನೆಗಾಗಿ ಸುಡುಗಾಡು ಕಾಯ್ದ, ಮಗನ ಹೆಣ ಸುಡಲೂ ಬಿಡದೇ ಮಡದಿಯ ಶಿರ ಕಡಿದ ಹರಿಶ್ಚಂದ್ರನ ವಿಗ್ರಹಕ್ಕೂ ಇಲ್ಲಿ ಸ್ಥಾನ ನೀಡಿದ್ದಾರೆ. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿರುವ ಅರ್ಬನ್ ಬ್ಯಾಂಕ್ ಹೊನ್ನಾವರ ಇವರು ಲಕ್ಷಾಂತರ ರುಪಾಯಿ ಖರ್ಚುಮಾಡಿ ಚಿತಾಗಾರವನ್ನು ನಿರ್ಮಿಸಿಟ್ಟಿದ್ದಾರೆ. ಅನಂತ ಸಾಂತಯ್ಯ ಕೊನೇರಿ, ಅನಂತ ಸುಬ್ರಾಯ ಭಟ್ಟ ಹಾಗೂ ಗ್ಲೇನ್ ಗ್ಯಾಬ್ರಿಯಲ್ ಗೋನ್ಸಾಲ್ವೀಸ್ ಅವರು ದಾನವಾಗಿ ಕೊಟ್ಟ ಜಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಜಿ ಸಚಿವ ಶಿವಾನಂದ ನಾಯ್ಕ, ಸಿಂಡಿಕೇಟ್ ಬ್ಯಾಂಕ್, ಪಟ್ಟಣಪಂಚಾಯತ ಹೊನ್ನಾವರ ಹಾಗೂ ಶರಾವತಿ ಮುಕ್ತಿಧಾಮ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ಸುಡುಗಾಡು ಸಹ ಸುಂದರವಾಗಿ ರೂಪುಗೊಂಡಿದೆ.
Leave a Comment