ಹೊನ್ನಾವರ – ಅಕ್ಟೋಬರ್ 19 ಕ್ಕೆ ನಿಗಧಿಯಾಗಿರುವ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್ನ ಆಡಳಿತ ಮಂಡಳಿ ಚುನಾವಣೆಗೆ ಅನರ್ಹ ಸಂಘಗಳನ್ನೂ ಡೆಲಿಗೇಟೆಡ್ ಸಂಘಗಳನ್ನಾಗಿ ಪರಿಗಣಿಸುವಂತೆ ಕುಮಟಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೀಡಿದ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸಹಕಾರಿ ಸಂಘಗಳ ಚುನಾವಣೆಯಲ್ಲಿ ಸ್ಪರ್ದಿಸಲು ಮತ್ತು ಅರ್ಹ ಮತದಾರರೆನಿಸಲು ಸಂಘದ ಸದಸ್ಯರಾಗಿರುವ ಜೊತೆಗೆ ಸದಸ್ಯತ್ವದ ಅವಧಿಯಲ್ಲಿ ನಡೆದ ಐದು ಸಾಮಾನ್ಯ ಸಭೆಗಳಲ್ಲಿ ಕನಿಷ್ಠ ಮೂರು ಸಾಮಾನ್ಯ ಸಭೆಯಲ್ಲಿ ಹಾಜರಿರುವುದು ಕಡ್ಡಾಯ ಎನ್ನುವ ಸಹಕಾರಿ ನಿಯಮವಿದೆ. ಇದೇ ಕಾರಣಕ್ಕೆ ಸಾಮಾನ್ಯ ಸಭೆಯಲ್ಲಿ ಹಾಜರಾತಿ ಕೊರತೆ ಇರುವ ಸಂಘಗಳನ್ನು ಬಿಟ್ಟು ಮಾರ್ಕೇಟಿಂಗ್ ಸೊಸೈಟಿ ಚುನಾವಣೆಯ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಲು ವ್ಯವಸ್ಥಾಪಕರು ಮುಂದಾಗಿದ್ದರು. ಇದಕ್ಕೆ ಅನರ್ಹ ಸದಸ್ಯ ಸಂಘಗಳಿಂದ ತೀವೃ ವಿರೋಧ ವ್ಯಕ್ತವಾಗಿತ್ತಲ್ಲದೇ ಅವರೆಲ್ಲರೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಮಟಾ ಅವರು 16 ಅನರ್ಹ ಸದಸ್ಯ ಸಂಘಗಳನ್ನು ಸೇರಿಸಿ ಮತದಾರರ ಪಟ್ಟಿಯನ್ನು ತಯಾರಿಸುವಂತೆ ಟಿ.ಎ.ಪಿ.ಸಿ.ಎಮ್.ಎಸ್ನ ವ್ಯವಸ್ಥಾಪಕರಿಗೆ ಆದೇಶಿಸಿದ್ದರು. ಆದರೆ ಈ ಆದೇಶ ಸಹಕಾರಿ ಕಾನೂನಿಗೆ ವಿರುದ್ಧ ಎನ್ನುವ ಹಿನ್ನಲೆಯಲ್ಲಿ ಸಂಘದ ಹಾಲಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರು ಸಹಾಯಕ ನಿಬಂಧಕರ ಆದೇಶವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಹಾಯಕ ನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ತಾಲೂಕಾ ಮಟ್ಟದ ಸಹಕಾರಿ ಸಂಘಗಳ ವಿಚಾರಣೆ ನಡೆಸುವ ಅಧಿಕಾರ ಸಹಾಯಕ ನಿಬಂಧಕರಿಗೆ ಇಲ್ಲದಿದ್ದರೂ ತಮ್ಮ ವ್ಯಾಪ್ತಿಮೀರಿ ವಿಚಾರಣೆ ನಡೆಸಿದ್ದಾರೆನ್ನುವ ಆರೋಪ ಈ ಮೊದಲೇ ಕೇಳಿಬಂದಿದ್ದು ಉಚ್ಛ ನ್ಯಾಯಾಲಯದ ತಡೆಯಾಜ್ಞೆ ಅದನ್ನು ಪುಷ್ಠೀಕರಿಸಿದಂತಾಗಿದೆ. ಅನರ್ಹ ಸದಸ್ಯ ಸಂಘಗಳ ಮುಂದಿನ ನಡೆ ನಿಗೂಢವಾಗಿದ್ದು ಉಚ್ಛ ನ್ಯಾಯಾಲಯದ ತಡೆಯಾಜ್ಞೆಯನ್ನು ಪ್ರಶ್ನಿಸಿ ಮತದಾನಕ್ಕೆ ಮತ್ತು ಸ್ಪರ್ದೆಗೆ ಅವಕಾಶ ನೀಡುವಂತೆ ಮೇಲ್ಮನವಿ ಸಲ್ಲಿಸಬಹುದು ಎನ್ನಲಾಗಿದೆ.
ಸಹಾಯಕ ನಿಬಂಧಕರ ನೆತ್ತಿಯ ಮೇಲೆ ತೂಗುತ್ತಿದೆ ಅಪಾಯದ ಕತ್ತಿ
ಸದ್ಯ ಹೊನ್ನಾವರ ಮಾರ್ಕೇಟಿಂಗ್ ಸೊಸೈಟಿ ಚುನಾವಣಾ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಹಿಂದೆ ಚಿಕ್ಕಮಗಳೂರು ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿಯೂ ನಡೆದಿತ್ತು. ಅಲ್ಲಿ ಸ್ಪರ್ದಿಯಾಗಿದ್ದ ಬೋಜೇಗೌಡ ಅವರು ಅನರ್ಹ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಆಕ್ಷೇಪಣೆ ಎತ್ತಿದ್ದರೂ ಅದನ್ನು ಲೆಕ್ಕಿಸದೇ ಸಹಾಯಕ ನಿಬಂಧಕರು ಕೊನೆಯ ಕ್ಷಣದಲ್ಲಿ ಅನರ್ಹ ಮತದಾರರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದರು. ಚುನಾವಣೆಯಲ್ಲಿ ಸೋತಿದ್ದ ಬೋಜೆ ಗೌಡ ಅವರು ಸಹಾಯಕ ಆಯುಕ್ತರ ಆದೇಶವನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಬೋಜೆ ಗೌಡರ ಪ್ರಕರಣದ ವಿಚಾರಣೆ ನಡೆಸಿದ ಉಚ್ಛನ್ಯಾಯಾಲಯ ಸಹಾಯಕ ನಿಬಂಧಕರು ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಲ್ಲದೇ ಸಹಾಯಕ ನಿಬಂಧಕರು ಅನರ್ಹ ಮತದಾರರನ್ನು ಅರ್ಹರೆಂದು ಪರಿಗಣಿಸಿ ನಡೆಸಿದ ಚುನಾವಣೆಯ ಫಲಿತಾಂಶವನ್ನು ಸಹ ತಡೆಹಿಡಿದಿದೆ. ಆಳುವವರ ಕೈಗೊಂಬೆಯಾಗಿ ಅನರ್ಹರನ್ನು ಅರ್ಹರೆಂದು ಪರಿಗಣಿಸಿದ ಸಹಾಯಕ ನಿಬಂಧಕರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎನ್ನುವ ಕಟು ಶಬ್ಧಗಳಲ್ಲಿ ಸಹಾಯಕ ನಿಬಂಧಕರ ನಿಲುವನ್ನು ನ್ಯಾಯಾಲಯ ಟೀಕಿಸಿದೆ.
ಚುನಾವಣಾ ವಿಷಯದಲ್ಲಿ ಸಹಾಯಕ ನಿಬಂಧಕರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಚಿಕ್ಕಮಗಳೂರು ಡಿ.ಸಿ.ಸಿ ಬ್ಯಾಂಕ್ ಚುನಾವಣಾ ಪ್ರಕರಣದಲ್ಲಿ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಚಿಕ್ಕಮಗಳೂರು ಡಿ.ಸಿ.ಸಿ. ಬ್ಯಾಂಕ್ ಪ್ರಕರಣಕ್ಕೂ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್ ಚುನಾವಣಾ ವಿವಾದಕ್ಕೂ ತಾಳೆಯಾಗುತ್ತಿದ್ದು ಸಹಾಯಕ ನಿಬಂಧಕರ ಮೇಲೆ ಕೋರ್ಟ ಯಾವ ನಿಲುವನ್ನು ತಾಳುತ್ತದೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
Leave a Comment