ಹೊನ್ನಾವರ – ಇಡೀ ದಿನ ಜನಜಂಗುಳಿಯಿರುವ ಹೊನ್ನಾವರ ಬಂದರಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮೀನಿನ ಜೊತೆಗೆ ರೋಗವನ್ನು ಚೀಲದಲ್ಲಿ ತುಂಬಿಕೊಡುತ್ತಾರೆನೋ ಎನ್ನುವಂತ ವಾತಾವರಣ ನಿರ್ಮಾಣವಾಗಿದೆ.

ಆರೋಗ್ಯದ ಬಗ್ಗೆ ಕಾಳಜಿ ಇರುವವರು ಮೀನನ್ನು ಖರೀದಿಸುವುದಿರಲಿ ಈ ಪ್ರದೇಶದಲ್ಲಿ ಹಾಗೇ ಸುಮ್ಮನೆ ಓಡಾಡುವುದಕ್ಕೂ ಅಸಹ್ಯಪಡುತ್ತಾರೆ ಅಷ್ಟು ಹದಗೆಟ್ಟಿದೆ ಇಲ್ಲಿನ ಪರಿಸರ. ಮೇಲ್ಛಾವಣಿ ಇರುವ ಮೀನುಮಾರುಕಟ್ಟೆ ಇದ್ದರೂ ಬಂದರು ಇಲಾಖೆಗೆ ಸೇರಿದ ಜಾಗದಲ್ಲಿ ಕುಳಿತು ಸುಡುಬಿಸಲಲ್ಲಿಯೇ ವ್ಯಾಪಾರ ಮಾಡುವ ಮಹಿಳೆಯರ ಪಾಡು ಒಂದೆಡೆಯಾದರೆ. ಮೀನಿನ ಬುಟ್ಟಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕುಳಿತಲ್ಲಿಯೇ ಚೆಲ್ಲಿದ ಪರಿಣಾಮ ಕೊಳಚೆಗುಂಡಿಯಂತಾಗಿದೆ ಇಡೀ ಬಂದರು.
ಕನಿಷ್ಠ ಒಂದು ಪಂಪ್ಸೆಟ್ ವ್ಯವಸ್ಥೆಮಾಡಿದ್ದರೂ ಹೊಳೆಯಲ್ಲಿನ ನೀರನ್ನು ಬಳಸಿಯೇ ಮೀನು ವ್ಯಾಪಾರ ನಡೆಸುವ ಪ್ರದೇಶವನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬಹುದು. ಆದರೆ ಇದನ್ನೆಲ್ಲಾ ಮಾಡುವುದಕ್ಕೆ ಪಟ್ಟಣಪಂಚಾಯತಗೆ ಆರ್ಥಿಕ ತೊಡಕಿಗಿಂತ ಇಚ್ಛಾಶಕ್ತಿಯ ಕೊರತೆಯೇ ಹೆಚ್ಚು ಎನ್ನುವುದು ಸಾರ್ವಜನಿಕರು ಆರೋಪವಾಗಿದೆ. ಕೇಳಿದರೆ ಬಂದರು ಇಲಾಖೆಯವರು ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಾರೆನ್ನುವ ಹಳೆಯ ನೆವವನ್ನೇ ಪಟ್ಟಣಪಂಚಾಯತ ಅಧಿಕಾರಿಗಳು ಉಚ್ಛರಿಸುತ್ತಾ ಬಂದಿದ್ದಾರೆ ಹೊರತು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನ ಮಾತ್ರ ಕಾಣಿಸುತ್ತಿಲ್ಲವಾಗಿದೆ.


Leave a Comment