ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ರೈತರ ಬಹುಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಗೆ ವರ್ಷದಿಂದ ವರ್ಷಕ್ಕೆ ಕೊಳೆರೋಗ ಬಾಧೆ ತೀವ್ರಗೊಳ್ಳುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳ ನಿರ್ವಹಣೆಯ ಜತೆಗೆ ಪ್ರಮಾಣಕ್ಕೆ ತಕ್ಕಂತೆ ಗೊಬ್ಬರ, ಔಷಧಗಳನ್ನು ಸಿಂಪಡಿಸಿದರೆ ಕೊಳೆರೋಗ ನಿಯಂತ್ರಣ ಸಾಧ್ಯವಿದೆ' ಎಂದು ಕೃಷಿ ವಿಜ್ಞಾನಿ ಡಾ.ಯಶ್ವಿನಿ ಶರ್ಮಾ ಹೇಳಿದರು.

ತಾಲೂಕಿನ ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಿಪಂ ಉತ್ತರ ಕನ್ನಡ ಹಾಗೂ ತೋಟಗಾರಿಕೆ ಇಲಾಖೆ ಹೊನ್ನಾವರ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ
ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಾಗಾರದಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಗೇರು ಹಾಗೂ ವಿವಿಧ ಪ್ರಮುಖ ಬೆಳೆಬೆಳೆಗಳ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ರೈತರಿಗೆ ವಿಶೇಷ ಉಪನ್ಯಾಸ ನೀಡಿದರು. ಅಡಿಕೆ ಬೆಳೆ ರೈತರ ಜೀವನಾಡಿ ಬೆಳೆಯಾಗಿದ್ದು, ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ರೈತರು ಕೊಳೆರೋಗ ನಿಯಂತ್ರಣಕ್ಕೆ ಪ್ರಮಾಣಕ್ಕೆ ತಕ್ಕಂತೆ ಔಷಧಿಗಳನ್ನು ಸಿಂಪಡಿಸುವ ಜತೆಗೆ ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ಕೊಡಬೇಕು. 3 ಗ್ರಾಂ `ಬ್ಲೈಟೆಕ್ಸ್ ದ್ರಾವಣ’ (ಸಿ.ಓ.ಸಿ) ವನ್ನು 1 ಲೀಟರ್ ನೀರಿಗೆ ಬೆರೆಸಿ ಪ್ರತಿ ಮರಕ್ಕೆ ಹಾಕುವುದರಿಂದ ಶೇ.60 ರಷ್ಟು ಕೊಳೆರೋಗ ನಿಯಂತ್ರಣ ಮಾಡಬಹುದಾಗಿದೆ. ಮೈಲುತುತ್ತ (ಬೋರ್ಡೊ ದ್ರಾವಣ) 1 ಕೆ.ಜಿಗೆ 100 ಲೀಟರ್ ನೀರು ಮತ್ತು 1 ಕೆ.ಜಿ ಚಿಪ್ಪೆ ಸುಣ್ಣ ಮಿಶ್ರಣ ಮಾಡಿ ಅಡಿಕೆಗೆ ಸಿಂಪಡಿಸಬೇಕು. ತುತ್ತವನ್ನು ಬೇಕಾಗುಷ್ಟನ್ನೆ ಮುಂಚಿನ ದಿನ ನೆನೆಯಿಸಿಟ್ಟು ಔಷಧಿ ಸಿಂಪಡಿಸುವ ದಿನ ಸುಣ್ಣದ ತಿಳಿನೀರನ್ನು ಮಾತ್ರ ಮಿಶ್ರಣ ಮಾಡಬೇಕು. ನಂತರ ಚಾಕು ಅಥವಾ ಕತ್ತಿಯನ್ನು ಅದ್ದಿದಾಗ ನೀಲಿ ಬಣ್ಣ ಬರುವುದನ್ನು ಪರೀಕ್ಷಿಸಿಯೇ ಔಷಧ ಸಿಂಪಡಿಸಬೇಕು. ಎಷ್ಟೋ ರೈತರು ಈ ಪದ್ದತಿಯನ್ನು ಅನುಸರಿಸದೇ ಕಾಟಾಚಾರಕ್ಕೆ ಔಷಧಿ ಸಿಂಪಡಿಸುತ್ತಾರೆ. ಹತೋಟಿ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಮತ್ತು ತೋಟದಲ್ಲಿ ಕ್ರಮಬದ್ಧವಾಗಿ ಬಸಿಗಾಲುವೆ ಮಾಡುವುದರಿಂದಲೂ ಕೊಳೆರೋಗ ನಿಯಂತ್ರಣ ಸಾಧ್ಯ. 1 ಎಕರೆಗೆ 200 ಲೀಟರ್ ದ್ರಾವಣವ್ನನು ಸಿಂಪಡಿಸಬೇಕು. ಮಳೆ ಬರುವ ಪೂರ್ವದಲ್ಲಿ ಮೇ.15 ರಂದು ಒಂದು ಬಾರಿ ಸಿಂಪಡಿಸಿ, ನಂತರ ಒಂದು ತಿಂಗಳ ನಂತರ ಜೂ.15 ಕ್ಕೆ ಮತ್ತೆ ಸಿಂಪಡಿಸಬೇಕು. ಮಳೆಯ ಅನುಕೂಲತೆ ನೋಡಿ ಔಷಧಿ ಸಿಂಪಡಿಸಬೇಕು. ಔಷಧಿ ಸಿಂಪಡಿಸಿದ 24 ಗಂಟೆಯೊಳಗೆ ಮಳೆ ಬೀಳಬಾರದು ಈ ಪದ್ದತಿಯಲ್ಲಿ ಔಷಧಿ ಸಿಂಪಡಿಸುವುದರಿಂದ ಪೂರ್ಣ ಪ್ರಮಾಣದಲ್ಲಿ ಕೊಳೆರೋಗ ನಿಯಂತ್ರಿಸಬಹುದಾಗಿದೆ ಎಂದು ರೈತರ ಹಲವು ಗೊಂದಲಗಳಿಗೆ ಸೂಕ್ತ ಪರಿಹಾರ ಸೂಚಿಸಿದರು.
ಪ್ರಗತಿಪರ ರೈತ ತಿಮ್ಮಪ್ಪ ನಾಯ್ಕ ಮಾತನಾಡಿ ಜಿಲ್ಲೆಯ ಬಹುತೇಕ ರೈತರು ಅಡಿಕೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇರುವ ಭೂಮಿಯನ್ನು ದೇವರಂತೆ ಕಾಣಬೇಕು ಜೊತೆಗೆ ಮಾಡುವ ಕೃಷಿಯಲ್ಲಿ ಶ್ರದ್ಧೆ ಹೊಂದಬೇಕು. ರೈತರಾದ ನಾವು ಇಲಾಖೆಯು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಅಭಿವೃದ್ಧಿಪಥದಲ್ಲಿ ಸಾಗೋಣ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸೂರ್ಯಕಾಂತ ವಡೆರ್ ಮಾತನಾಡಿ ಬೆಳೆಗಳಿಗೆ ವಿವಿಧ ರೀತಿಯ ರೋಗ ಮತ್ತು ಕೀಟ ಬಾಧೆ ಕಂಡುಬರುತ್ತಿದೆ. ಇದನ್ನು ಹತೋಟಿಗೆ ತರುವ ಹೊಸತಾದ ಪ್ರಯೋಗಗಳು ಬಂದಿದ್ದು, ಇದನ್ನು ನೇರವಾಗಿ ರೈತರೊಂದಿಗೆ ಹಂಚಿಕೊಳ್ಳುವ ಉದ್ದೇಶವಾಗಿದೆ. ರೈತರು ಮತ್ತು ಇಲಾಖೆಯ ಅಧಿಕಾರಿಗಳ ನಡುವೆ ನಿರಂತರ ಸಂಪರ್ಕ ಹೊಂದಬೇಕೆನ್ನುವ ಪ್ರಯತ್ನಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಊರಿನ ಪ್ರಮುಖರಾದ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ಸಹಾಯಕ ತೋಟಗಾರಿಕಾ ಅಧಿಕಾರಿ ನಾಗಪ್ಪ ಕೋಟೂರು ಅವರು ಸ್ವಾಗತಿಸಿ ಇಲಾಖೆಯಲ್ಲಿ ರೈತರಿಗೆ ಸಿಗುವ ವಿವಿಧ ಯೋಜನೆಗಳು ಹಾಗೂ ಸಹಾಯಧನದ ಕುರಿತು ಮಾಹಿತಿ ನೀಡಿದರು. ತೋಟಗಾರಿಕಾ ಸಹಾಯಕ ಸತೀಶ ನಾಯ್ಕ ವಂದಿಸಿದರು. ಹೊದ್ಕೆ, ಶಿರೂರು, ಕಡ್ನೀರು ಭಾಗದ ನೂರಾರು ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
Leave a Comment