ಹೊನ್ನಾವರ; ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ವಿತರಣಾ ಕಂಪನಿ ಖಾಸಗೀಕರಣಗೊಳಿಸುವ ಕ್ರಮ ವಿರೋಧಿಸಿ ಹೆಸ್ಕಾ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣೆ ನಡೆಸಿದರು.
ಅಖಿಲ ಭಾರತ ವಿದ್ಯುತ್ ನೌಕರರ ಫೆಡರೇಶನ್ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಹೆಸ್ಕಾಂ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಸರಕಾರ ಜನಪರವಾಗಿ ಹಾಗೂ ರೈತರಿಗೆ, ಜನಸಾಮಾನ್ಯರಿಗೆ ಅನುಕೂಲವಾಗಲು ಹಲವು ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಕೇಂದ್ರ ಸರಕಾರ ವಿದ್ಯುತ್ ಕಂಪೆನಿಗಳನ್ನು ಖಾಸಗಿಯವರಿಗೆ ನೀಡುವುದರಿಂದ ರೈತರಿಗೆ ಉಚಿತ ನೀರಾವರಿ ವಿದ್ಯುತ್ ಸೇರಿ ಹಲವು ಯೋಜನೆ ಕೈಬಿಡಲಿದೆ. ಹೀಗಾಗಿ ಕೇಂದ್ರ ಸರಕಾರ ಈ ನಿರ್ಧಾರ ಹಿಂಪಡೆಯಬೇಕು. ಈ ಕುರಿತು ಸಮಗ್ರ ಚಿಂತನೆ ಮಾಡದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಸರಕಾರಿ ಸ್ವಾಮ್ಯದಲ್ಲಿದ್ದ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ಖಂಡಿಸಲಾಯಿತು.

ಸರ್ಕಾರದ ಸ್ವಾಮ್ಯದಲ್ಲಿದ್ದಂತಹ ಉತ್ಪಾದನೆ, ಪ್ರಸರಣೆ ಹಾಗೂ ಸರಬರಾಜು ಕಾರ್ಯಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ವಿದ್ಯುತ್ ಪ್ರಸರಣವನ್ನು ಖಾಸಗಿ ಕಂಪನಿಗಳಿಗೆ ವಹಿಸಿದ್ದರಿಂದ ವಿದ್ಯುತ್ ಶುಲ್ಕ ಹೆಚ್ಚಾಗಿದೆ. ಜನಸಾಮಾನ್ಯರ ಮೇಲೆ ವಿಪರೀತ ಹೊರೆ ಬಿದ್ದಿದೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಇದಲ್ಲದೇ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಜನವಿರೋಧಿ, ನೌಕರ ವಿರೋಧಿ ವಿದ್ಯುತ್ ಬಿಲ್ 2020 ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ವಿನೋಧ ಭಾಗ್ವತ, ರಾಮಕೃಷ್ಣ ಭಟ್, ಆರ್.ಎನ್.ಪಟಗಾರ, ಸ್ಥಳಿಯ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ, ಕಾರ್ಯದರ್ಶಿಶಂಕರ ಗೌಡ, ಕೇಂದ್ರ ಸಮಿತಿ ಸದಸ್ಯ ಅಂತೋನಿ ಫರ್ನಾಂಡಿಸ್,ರಾಧಾ ಭಟ್, ಗೇರುಸೊಪ್ಪಾ, ಕಾಸರಕೋಡ್, ಹೊನ್ನಾವರ ಪಟ್ಟಣ ಹಾಗೂ ಗ್ರಾಮೀಣ ಶಾಖೆಯ ಸಿಬ್ಬಂದಿಗಳು, ಡಿವಿಜನ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Leave a Comment