ಕುಮಟಾ: ಲಾಕ್ಡೌನ್ ಸಡಿಲಿಕೆ ಬಳಿಕವೂ ತಾಲೂಕಿನ ಹಲವು ಗ್ರಾಮೀಣ ಭಾಗಗಳಿಗೆ ಬಸ್ ಸಂಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದು, ದಿನಕ್ಕೊಮ್ಮೆಯಾದರೂ ಮೊದಲಿದ್ದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಕುಮಟಾ ವಾ.ಕ.ರ.ಸಾ. ಘಟಕಕ್ಕೆ ಮನವಿ ಸಲ್ಲಿಸಲಾಯಿತು.

ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಆದಾಯವಿಲ್ಲದೇ, ಮನೆಯಲ್ಲಿದ್ದ ಗ್ರಾಮೀಣ ಭಾಗದ ಬಡ ಜನತೆ ಲಾಕ್ಡೌನ್ ತೆರವಿನ ಬಳಿಕ ಅನಿವಾರ್ಯವಾಗಿ ಬೇರೆಬೇರೆ ಪ್ರದೇಶಗಳಲ್ಲಿ, ಪಟ್ಟಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಹಾಗೂ ಕುಗ್ರಾಮದವರು ಪ್ರತಿನಿತ್ಯ ಬಸ್ ವ್ಯವಸ್ಥೆಯಿಲ್ಲದೇ, ಪರದಾಡುತ್ತಿದ್ದಾರೆ. ಈ ಬಗ್ಗೆ ವಾಕರಸಾ ಅಧಿಕಾರಿಗಳನ್ನು ಕೇಳಿದರೆ ಆದಾಯದ ಕಾರಣದಿಂದ ಬಸ್ ಸಂಚಾರ ನಿಲ್ಲಿಸಲಾಗಿದೆ ಎನ್ನುತ್ತಾರೆ. ಕೂಡಲೇ ಮೊದಲಿದ್ದ ಎಲ್ಲ ಭಾಗದ ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೊಂದರಂತೆಯಾದರೂ ಬಸ್ ಸೇವೆ ನೀಡಬೇಕು. ಇಲ್ಲವಾದರೆ ಗ್ರಾಮೀಣ ಭಾಗದ ಜನತೆಯೊಂದಿಗೆ ತಾಲೂಕಾ ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿ.ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ ಮಾತನಾಡಿ, ಕನಿಷ್ಟ ಪಕ್ಷ ಎಲ್ಲ ಗ್ರಾಮೀಣ ಪ್ರದೇಶದ ಬಸ್ಗಳನ್ನು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ಬಿಡಬೇಕು. ಆದಾಯ ಸಮಸ್ಯೆಯಾದರೆ ಎರಡು ಮೂರು ಮಾರ್ಗಗಳನ್ನು ಸೇರಿಸಿ ಒಂದೇ ಬಸ್ ಬಿಟ್ಟರೂ ಜನರಿಗೆ ಅಷ್ಟರಮಟ್ಟಿಗೆ ತೊಂದರೆಯಾಗದು. ಆದಾಯದ ನೆಪವೊಡ್ಡಿ ಜನರಿಗೆ ಮೂಲಭೂತ ಸೌಲಭ್ಯದಿಂದ ವಂಚಿಸಿ ಅನ್ಯಾಯ ಮಾಡಬಾರದು ಎಂದು ಹೇಳಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ ಮಾತನಾಡಿ, ಕೊರೊನಾ ತಡೆ ಕಾರಣಕ್ಕೆ ಲಾಕಡೌನ್ ಸಂದರ್ಭದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಲಾಕ್ಡೌನ್ ತೆರವಾದ ಬಳಿಕ ಕೆಲವೊಂದು ಗ್ರಾಮೀಣ ಬಸ್ ಸಂಚಾರ ಮಾತ್ರ ಚಾಲ್ತಿಯಲ್ಲಿದೆ. ಪಟ್ಟಣದಿಂದ ದೂರದೂರದ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲವೇ ಇಲ್ಲ. ಅಂತಹ ಪ್ರದೇಶಗಳಿಗೂ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸಾರಿಗೆ ಘಟಕದ ವ್ಯವಸ್ಥಾಪಕಿ ಸೌಮ್ಯ ನಾಯಕ ಅನುಪಸ್ಥಿತಿಯಲ್ಲಿ ಘಟಕದ ನಿಂಯತ್ರಣಾಧಿಕಾರಿ ಶಿವಾನಂದ ನಾಯ್ಕ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಪ್ರಮುಖರಾದ ಅಣ್ಣಪ್ಪ ನಾಯ್ಕ, ಮಂಜು ಜೈನ್, ಆಲ್ವರಿಸ್, ಚಂದ್ರಹಾಸ ನಾಯ್ಕ, ಯಶವಂತ, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.
Leave a Comment