ಗುಡ್ಡದ ಮೇಲಿನ ಜಾಗದಲ್ಲಿ ಬೇಲಿಗಾಗಿ ಬಳಸುತ್ತಿದ್ದ ಕಳ್ಳಿ ಗಿಡಗಳು ಈಗ ಬಹಳ ಅಪರೂಪವೆನಿಸುತ್ತಿದೆ. ಮುಳ್ಳುತಂತಿ, ವಿದ್ಯುತ್ ತಂತಿ ಬೇಲಿಗಳ ಜೊತೆ ಕಲ್ಲಿನ ಪಾಗರ ಹಾಕಿ ಕಂಪೌಂಡ್ ಮಾಡುವ ಪರಿಪಾಟ ಹೆಚ್ಚುತ್ತಿರುವುದರಿಂದ ತೇವಾಂಶ ಕಡಿಮೆ ಇರುವ ಜಾಗದಲ್ಲಿಯೂ ಬೆಳೆಯಬಲ್ಲ ಕಳ್ಳಿಗಿಡಗಳನ್ನು ಬೇಲಿಗೆ ಬಳಸುವ ರೂಢಿಯೇ ಜನರಿಗೆ ತಪ್ಪಿಹೋದಂತಾಗಿದೆ. ಕಿರಿದಾದ ಬೆರಳೆಣಿಕೆಯಷ್ಟು ಎಲೆಗಳನ್ನು ಹೊಂದಿರುವ, ಹಸಿರು ಕಾಂಡದ ಸುತ್ತಲೂ ಚುಚ್ಚುವ ಮುಳ್ಳುಗಳನ್ನು ಮೆತ್ತಿಕೊಂಡಿರುವ ಕಳ್ಳಿಗಿಡಗಳನ್ನು ಹಿಂದೆ ಹೆಚ್ಚಾಗಿ ಶೇಂಗಾ ಬೆಳೆಯುತ್ತಿದ್ದ ಕುಂಬ್ರಿಗಳ ಸುತ್ತ, ಗೇರು ಹಕ್ಕಲ ಗಡಿಗಳಲ್ಲಿ ಬೆಳೆಸುತ್ತಿದ್ದರು.


ಹೆಚ್ಚಾಗಿ ಎಲೆಗಳು ಇರದ ಕಾರಣ ಇವುಗಳ ಬೆಳವಣಿಗೆಗೆ ನೀರಿನ ಲಭ್ಯತೆ ಕಡಿಮೆ ಇದ್ದರೂ ಯಾವ ತೊಂದರೆಯೂ ಇಲ್ಲ. ಆದರೆ ನೆಟ್ಟು ಒಂದೆರಡು ವರ್ಷ ಹಾಗೇ ಬಿಟ್ಟರೆ ಸುತ್ತಲೂ ಗೆಲ್ಲುಗಳನ್ನು ಚಾಚುವ ಇವುಗಳ ನಿರ್ವಹಣೆ ತುಸು ಕಷ್ಟ ಎನ್ನುವ ಕಾರಣಕ್ಕೆ ಜನರು ಇವುಗಳಿಗೆ ಬೆನ್ನು ಹಾಕಿರಬಹುದು ಎನ್ನುವ ಅಭಿಪ್ರಾಯವಿದೆಯಾದರೂ ಹೊನ್ನಾವರ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಮತೀರ್ಥ ಗುಡ್ಡದಮೇಲೆ ಮಾತ್ರ ಸುಮಾರು ಜನರು ತಮ್ಮ ಜಾಗಗಳಿಗೆ ಕಳ್ಳಿಗಿಡಗಳನ್ನೇ ನೆಟ್ಟು ಕಂಪೌಂಡ್ ಮಾಡಿಕೊಂಡಿರುವುದು ಕಂಡುಬರುತ್ತಿದೆ.
Leave a Comment