ಪುರುಷರತ್ನ, ಪುರುಷರತ್ನಮು, ಸೂರ್ಯಕಾಂತಿ, ಒರಿದಲೈ ತಾಮರೈ, ನಡುಮರೈ, ಕುಟ್ಟಿಗಂ, ಚರಾಟ ಎಂಬ ಹೆಸರುಗಳಿಂದ ಗುರ್ತಿಸಲ್ಪಡುವ ಸಸ್ಯವಿದು. ಏಕವಾರ್ಷಿಕ ಸಸ್ಯವಾಗಿರುವ ಇದು ತನ್ನ ಒಡಲಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದ್ದು, ಅಪಾರ ಬೇಡಿಕೆಯಿಂದ ಅವನತಿಯ ಅಂಚು ತಲುಪಿರುವ ಅಪರೂಪದಲ್ಲಿ ಅಪರೂಪವಾದ ಸಸ್ಯವಿದು. ಬೆಟ್ಟಗುಡ್ಡ ಪ್ರದೇಶಗಳು, ಹುಲ್ಲುಗಾವಲು, ಪಾಳುಭೂಮಿ, ಹೊಲ ತೋಟಗಳಲ್ಲಿ ಕಳೆಯಂತೆ ಬೆಳೆಯುವ ಪುಟ್ಟ ಸಸ್ಯವಾಗಿದ್ದು, 6 ರಿಂದ 9 ಅಂಗುಲ ಎತ್ತರ ಬೆಳೆಯುತ್ತೆ.

ಇದು ಹುಲ್ಲಿನ ರೀತಿ ಇರುವುದರಿಂದ ಗುರುತಿಸುವುದು ತುಂಬಾ ಕಷ್ಟಕರವಾಗಿದ್ದು, ಹೂವುಗಳನ್ನು ನೋಡಿ ಗುರುತಿಸಬಹುದಾಗಿದ್ದು, ಇದರಲ್ಲಿ ಎರಡು ಮೂರು ಪ್ರಭೇದಗಳಿವೆ. ಪುರಾತನ ಕಾಲದಿಂದಲೂ ಆಯುರ್ವೇದ, ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ಧತಿಯಲ್ಲಿ, ಋಷಿಮುನಿಗಳು, ನುರಿತ ಆಯುರ್ವೇದ ವೈದ್ಯರು, ಪಂಡಿತರು, ಅನೇಕ ವ್ಯಾಧಿಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ.ಈಗಲೂ ಸಹ ಈ ಗಿಡಕ್ಕೆ ಅಪಾರ ಬೇಡಿಕೆಯಿದೆ. ಪುರುಷರತ್ನ ಸಸ್ಯವನ್ನು ಸಮೂಲ ಸಹಿತ ತಂದು, ಶುಭ್ರಗೊಳಿಸಿ,ನೆರಳಲ್ಲಿ ಒಣಗಿಸಿ, ವಸ್ತ್ರಾಗಾಲಿತ ಚೂರ್ಣ ಮಾಡಿಕೊಂಡು, ಅದಕ್ಕೆ ಸರಿಸಮನಾಗಿ ಸಿಪ್ಪೆ ಸುಲಿದ ಬಾದಾಮಿ ಚೂರ್ಣ ಕಲಸಿ, ಒಂದು ಗಾಜಿನ ಸೀಸೆಯಲ್ಲಿ ಭದ್ರಪಡಿಸಿಟ್ಟುಕೊಂಡು ದಿನವು ಬೆಳಿಗ್ಗೆ-ಸಂಜೆ ಊಟಕ್ಕೆ 1/2 ಗಂಟೆ ಮುಂಚೆ,ಒಂದು ಲೋಟ ಉಗರು ಬೆಚ್ಚಗಿನ ಹಾಲಿಗೆ 1 ಚಮಚ ಚೂರ್ಣ, 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಕುಡಿಯುತ್ತಿದ್ದರೆ, ದೇಹದಲ್ಲಿ ನಿಶಕ್ತಿ ದೂರವಾಗಿ ದೇಹಕ್ಕೆ ಅಪಾರ ಶಕ್ತಿ ಬರುತ್ತೆ.ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನಪುಂಷಕತ್ವ ದೂರವಾಗುತೆ. ದೇಹಸಾಮರ್ಥ್ಯ ಹೆಚ್ಚಿಸಿ, ಲೈಂಗಿಕ ಸಮಸ್ಯೆಗಳಿಗೆ ಮುಕ್ತಿನೀಡಿ, ಪುರುಷತ್ವವನ್ನು ಹೆಚ್ಚಿಸುವುದರಲ್ಲಿ, ಅಶ್ವಗಂಧಕ್ಕಿಂತಲೂ ಎರಡುಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಸ್ತ್ರೀಯರು ಸೇವಿಸಿದರೆ ಅಂಡಾಣು ವೃದ್ಧಿಯಾಗಿ, ಸಂತಾನ ಪಡೆಯಲು ಅನುಕೂಲವಾಗುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಮಾಂಸ ಖಂಡಗಳಿಗೆ ಬಲ ತುಂಬುತ್ತೆ. ಸಮೂಲ ಸಹಿತ ಅರೆದು ಒಂದು ನೆಲ್ಲಿಕಾಯಿಗಾತ್ರ ಹಸುವಿನ ಹಾಲಿನಲ್ಲಿ ಕಲಸಿ ಕುಡಿದರೆ,ದೇಹದಲ್ಲಿ ರಕ್ತ ಶುದ್ಧಿಯಾಗುತ್ತೆ. ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಭೇದಿ ನಿಲ್ಲುತ್ತೆ. ಪುರುಷರತ್ನ ಸಮೂಲ, ನೆಲನೆಲ್ಲಿ ಸಮೂಲ ಸಮನಾಗಿ ತೆಗೆದುಕೊಂಡು ನುಣ್ಣಗೆ ಅರೆದು, ನೆಲ್ಲಿಕಾಯಿ ಗಾತ್ರದಲ್ಲಿ ತೆಗೆದುಕೊಂಡು, ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 48 ದಿನಗಳ ಕಾಲ (ಒಂದು ಮಂಡಲ) ಕುಡಿದರೆ ಒಡಲು ಶುದ್ಧಿಯಾಗಿ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ದೇಹವು ವಜ್ರಕಾಯವಾಗಿ, ಅನೇಕ ವ್ಯಾಧಿಗಳಿಂದ ರಕ್ಷಣೆ ನೀಡುತ್ತೆ.

ಪುರುಷರತ್ನವನ್ನು ಸಮೂಲ ಸಹಿತ ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು 200ml ನೀರಿಗೆ 2 ಚಮಚ ಚೂರ್ಣ,1 ಚಮಚ ಜೀರಿಗೆ ಹಾಕಿ,ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, 50ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ, ಸೋಸಿಕೊಂಡು, ಬೆಳಿಗ್ಗೆ ಸಂಜೆ ಖಾಲಿ ಹೊಟ್ಟೆಯಲ್ಲಿ 25ml ನಂತೆ,1 ಚಮಚ ಕೆಂಪು ಕಲ್ಲು ಸಕ್ಕರೆ ಬೆರಸಿ ಕುಡಿದರೆ, ಸಂತಾನ ಇಲ್ಲದವರಿಗೆ, ಮಕ್ಕಳು ಪಡೆಯಲು ರಾಮಬಾಣದಂತೆ ಕೆಲಸ ಮಾಡುತ್ತೆ. ಪುರುಷರತ್ನ ಸಮೂಲ, ನೆಲನೆಲ್ಲಿ ಸಮೂಲ ಸಮನಾಗಿ ತೆಗೆದುಕೊಂಡು, ನುಣ್ಣಿಗೆ ಅರೆದು, ಒಂದು ನೆಲ್ಲಿಕಾಯಿ ಪ್ರಮಾಣದಲ್ಲಿ, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಕುಡ್ದಿಯುತ್ತಿದ್ದರೆ, ಹಳದಿ ಕಾಮಾಲೆ (ಜಾಂಡಿಸ್) ಗುಣವಾಗುತ್ತೆ. ಪುರುಷರತ್ನದ ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳು ದೂರವಾಗುತ್ತೆ. ಪುರುಷರತ್ನದ ಸಮೂಲವನ್ನು ತಂದು, ನೆರಳಲ್ಲಿ ಒಣಗಿಸಿ, ವಸ್ತ್ರಗಾಲಿತ ಚೂರ್ಣವನ್ನು ಮಾಡಿಟ್ಟುಕೊಂಡು, ಒಂದು ಲೋಟ ಹಸುವಿನ ಹಾಲಲ್ಲಿ 1 ಚಮಚ ಚೂರ್ಣ, 1 ಚಮಚ ಜೇನುತುಪ್ಪ ಕಲಸಿ ಕುಡಿಯುತ್ತಿದ್ದರೆ, ಸ್ತ್ರೀಯರ ಸ್ತನಗಳು ಗಟ್ಟಿಯಾಗಿ, ಯೌವನದಲ್ಲಿರುವಂತೆ ಆಕಾರ ಪಡೆದುಕೊಳ್ಳುತ್ತವೆ ಎಂದು ಪುರಾತನ ಗ್ರಂಥಗಳಲ್ಲಿ ನಮೂದಿಸಿದ್ದಾರೆ. ಜೊತೆಗೆ ಎದೆಹಾಲು ಸಹ ಹೆಚ್ಚುತ್ತೆ ಎಂದು ಉಲ್ಲೇಖಿಸಿದ್ದಾರೆ. ಪುರುಷರತ್ನ, ನೆಲನೆಲ್ಲಿ ಸಮೂಲ ಸಮನಾಗಿ ತೆಗೆದುಕೊಂಡು ಅದಕ್ಕೆ ಚಿಟಿಕೆ ಅರಸಿಣ ಸೇರಿಸಿ, ನುಣ್ಣಿಗೆ ಅರೆದು, ಗಟ್ಟಿಯಾಗಿರುವ ಮೊಸರಲ್ಲಿ ಕಲಸಿ, ರಾತ್ರಿ ಮುಖಕ್ಕೆ ಲೇಪನ ಮಾಡಿಕೊಂಡು ಬೆಳಿಗ್ಗೆ ಉಗರು ಬೆಚ್ಚಗಿನ ನೀರಲ್ಲಿ ತೊಳೆದುಕೊಂಡರೆ, ಮುಖದ ಚರ್ಮವು ಮೃದುವಾಗಿ, ಕಾಂತಿಯಿಂದ ಹೊಳೆಯುತ್ತದೆ. ಮೊಡವೆ,ಮಚ್ಚೆಗಳು ದೂರವಾಗುತ್ತೆ. ಪುರುಷರತ್ನದ ಬೇರನ್ನು ಗಂಧ ತೇಯ್ದು, ಮಕ್ಕಳಿಗೆ ನೆಕ್ಕಿಸಿದರೆ, ಹೊಟ್ಟೆನೋವು ಶಮನವಾಗುತ್ತೆ. ಪುರುಷರತ್ನ ಹೆಸರೇ ಹೇಳುವಂತೆ, ಅಪಾರ ಶಕ್ತಿಯುಳ್ಳ ಹಾಗೂ ಅದ್ಭುತವಾದ ಮೂಲಿಕೆ.
Leave a Comment