ಹೊನ್ನಾವರ – ಕೊರೊನಾ ಮಹಾವ್ಯಾಧಿಯ ಭೀತಿಯಿಂದ ಬಂದ್ ಆಗಿದ್ದ ಶನಿವಾರದ ವಾರದ ಸಂತೆ ಅಕ್ಟೋಬರ್ 10 ರಿಂದ ಪುನರಾರಂಭವಾಗಿದೆ. ಜನರು ತರಕಾರಿ ದಿನಸಿಗಳ ಖರೀದಿಗೆ ಮುಂದಾಗುತ್ತಿದ್ದರೂ ಮೊದಲಿನ ಉತ್ಸಾಹ ಕಂಡುಬರಲಿಲ್ಲ.

ಲಾಕ್‍ಡೌನ್ ಜಾರಿಯಾಗುವ ಮೊದಲು ಪಟ್ಟಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಆಗಮಿಸಿ ಸರಿಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು, ಹಣ್ಣು, ಬಟ್ಟೆ, ಚಪ್ಪಲಿ, ಗೃಹಬಳಕೆ ವಸ್ತುಗಳು ವಗೈರೆ ಖರೀದಿಸಲು ಮುಂದಾಗುತ್ತಿದ್ದರು. ಈ ಬಾರಿ ಸಂತೆ ನಡೆಯುವ ಬಗ್ಗೆ ಖಚಿತ ಮಾಹಿತಿ ಇಲ್ಲದ ಕಾರಣವೋ ಅಥವಾ ಗ್ರಾಮೀಣ ಭಾಗದ ಜನರ ಮನಸ್ಸಿನಲ್ಲಿ ಹೊಕ್ಕಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲವೋ ಸಂತೆಯತ್ತ ಸುಳಿಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ.
ಸುದೀರ್ಘ ಅವಧಿಯ ಬಿಡುವಿನ ನಂತರ ಸಂತೆ ಆರಂಭವಾಗಿರುವ ಹಿನ್ನಲೆಯಲ್ಲಿ ಜನರು ಬರುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮೊದಲೇ ಊಹಿಸಿದ್ದ ವ್ಯಾಪಾರಿಗಳೂ ಸಾಮಾನುಗಳನ್ನು ಕಡಿಮೆ ಪ್ರಮಾಣದಲ್ಲಿಯೇ ತಂದಿರುವುದಾಗಿ ತಿಳಿಸುತ್ತಾರೆ. ದಿನಸಿ ಸಾಮಾನುಗಳಿಗಿಂತ ಹೆಚ್ಚಾಗಿ ತರಕಾರಿ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿಗಿಂತ ಕಡಿಮೆಯಾಗಿರುತ್ತದೆ ಎನ್ನುವ ಕಾರಣಕ್ಕೆ ತರಕಾರಿ ಖರೀದಿಗೋಸ್ಕರವೇ ಸಂತೆಗೆ ಬರುವವರ ಸಂಖ್ಯೆಯೂ ದೊಡ್ಡದಿತ್ತು. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಯಲ್ಲೂ ತರಕಾರಿ ಅಂಗಡಿಗಳು ತಲೆಯೆತ್ತಿರುವುದೂ ಜನರು ಸಂತೆಯತ್ತ ಸುಳಿಯದಿರಲು ಕಾರಣ ಎನ್ನಲಾಗುತ್ತಿದೆ.


ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಬಹುದು..!
ಹೀಗೊಂದು ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಕೊರೊನಾ ಸಂಕ್ರಮಣದ ಆರು ತಿಂಗಳ ಅವಧಿಯಲ್ಲಿ ಕೊರೊನಾ ಸಂಬಂಧಿತ್ತ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆಯೇ ಹೊರತು ಕೊರೊನಾ ಸೋಂಕಿನ ಪ್ರಮಾಣ ಮಾತ್ರ ತಗ್ಗಿಲ್ಲ. ಈಗಲೂ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರವೂ ಗಟ್ಟಿ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಸಿಲುಕಿದೆ. ಹೀಗಿರುವಾಗ ಆತಂಕದ ನಡುವೆಯೇ ಆರಂಭವಾಗಿರುವ ವಾರದ ಸಂತೆ ಮತ್ತಷ್ಟು ಅನಾಹುತಕ್ಕೆ ಎಡೆಮಾಡಿಕೊಡಬಹುದು ಎನ್ನುವ ವಿಚಾರವೂ ಕೇಳಿಬರುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಂತೆಯಲ್ಲಿ ಸಾಧ್ಯವಾಗದ ಮಾತು ಇನ್ನು ಮಾಸ್ಕ್ ತೊಟ್ಟುಕೊಳ್ಳುವುದು ಕಡ್ಡಾಯವಾಗಿದ್ದರೂ ಮಾಸ್ಕ್ ಮುಖದಮೇಲೇರುವುದು ಪೊಲೀಸರನ್ನು,ಪಟ್ಟಣ ಪಂಚಾಯತ ಅಧಿಕಾರಿಗಳನ್ನು ಕಂಡಾಗ ಮಾತ್ರ ಎನ್ನುವ ಸ್ಥಿತಿ ಇದೆ. ಕೊರೊನಾ ಕುರಿತು ಸಂಗತಿಗಳನ್ನು ಸಂಪೂರ್ಣ ತಿರಸ್ಕರಿಸಲಿಕ್ಕೂ ಆಗದ, ಅದಕ್ಕೇ ಜೋತುಬಿದ್ದು ಮನೆಯ ಮೂಲೆಯಲ್ಲಿಯೇ ಕುಳಿತು ಬದುಕುವುದಕ್ಕೂ ಆಗದ ಸಂದಿಗ್ಧತೆಯಲ್ಲಿರುವ ಜನರು ಕೊರೊನಾ ಮುನ್ನೆಚ್ಚರಿಕೆ ಪಾಲಿಸಿಯೇ ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

[ಸಂತೆ ಇದ್ದರೆ ನಮ್ಮಂತ ಕೂಲಿ ಮಾಡಿ ಬದುಕುವ ಕುಟುಂಬಗಳಿಗೆ ಒಂದಿಷ್ಟು ಕಡಿಮೆ ಬೆಲೆಗೆ ತರಕಾರಿ ದಿನಸಿ ಸಿಗುತ್ತದೆ. ಆದರೆ ನಾವು ಮಾಸ್ಕ್ ಹಾಕಿಕೊಂಡು ಬಂದಿದ್ದರೂ ಮಾಸ್ಕ್ ಹಾಕದಿದ್ದವರು ಸಮೀಪ ಬಂದಾಗ ಭಯವಾಗುತ್ತದೆ. ಸಂತೆ ಆರಂಭವಾಗಿರುವುದು ಒಳ್ಳೆಯದು ಮಾಸ್ಕ್ ಧರಿಸದವರಿಗೆ ಸಂತೆಪೇಟೆಗೆ ಪ್ರವೇಶಿಸಲೇ ಬಿಡಬಾರದು – ಶ್ರೀನಿವಾಸ, ಸಂತೆಗೆ ಬಂದವರು
Leave a Comment