(ಪ್ರವಾಸೋದ್ಯಮದ ಅಭಿವೃದ್ಧಿ ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುವ ನಿರೀಕ್ಷೆ)
ಹೊನ್ನಾವರ – ಎದುರಾದ ಎಲ್ಲಾ ಸವಾಲುಗಳನ್ನು ನಿವಾರಿಸಿಕೊಂಡ ತಾಲೂಕಿನ ಕಾಸರಕೋಡ ಇಕೋ ಬೀಚ್ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಬೀಚ್ ಎನ್ನುವ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

5.6 ಕಿಲೋಮೀಟರ್ ವಿಸ್ತೀರ್ಣದ ಕಡಲತೀರದಲ್ಲಿ ಸದ್ಯ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಬೀಚ್‍ನ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಜಿಲ್ಲೆಯ ಪ್ರವಾಸೋಧ್ಯಮದ ಏಳಿಗೆಗೆ ಇಂಬು ನೀಡಬಹುದಾದ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ದೇಶದ 13 ಬೀಚ್‍ಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಬೀಚ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿತ್ತು. ಅಂದು ಉತ್ತರಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್.ನಕುಲ್ ಅವರು ಜಿಲ್ಲೆಯ ಉಳಿದೆಲ್ಲಾ ಬೀಚ್‍ಗಳನ್ನು ಬಿಟ್ಟು ಹೊನ್ನಾವರದ ಕಾಸರಕೋಡ್ ಕಡಲತೀರವನ್ನು ಶಿಫಾರಸ್ಸು ಮಾಡಿದ್ದರು.
ಪೌಂಡೇಶನ್ ಫಾರ್ ಎನ್ವಿರಾನ್‍ಲಮೆಂಟಲ್ ಎಜುಕೇಶನ್ ಸಂಸ್ಥೆ ಬೀಚ್ ಗುಣಮಟ್ಟವನ್ನು ಪರಿಶೀಲಿಸಿ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ನೀಡಲಿದ್ದು ಇದನ್ನು ಪಡೆಯುವುದಕ್ಕಾಗಿ ಬೀಚ್‍ನಲ್ಲಿ ಲೈಪ್ ಗಾಡ್ಸ್, ಸ್ವಚ್ಛತಾ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಬೀಚ್ ಮೆನೇಜರ್, ಪ್ರಾಥಮಿಕ ಚಿಕಿತ್ಸೆ ನೀಡಲು ನುರಿತ ಸಿಬ್ಬಂದಿ, ಸಿ.ಸಿ.ಟಿವಿ ಕಣ್ಗಾವಲು, ಸೋಲಾರ್, ವೀಕ್ಷಣಾ ಗೋಪುರ, ಪಾಥ್‍ವೇ, ಪಾರ್ಕಿಂಗ್, ತ್ಯಾಜ್ಯ ನಿರ್ವಹಣೆಯಲ್ಲಿ ಗುಣಮಟ್ಟ, ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಂಚುಗಳು, ಮಕ್ಕಳ ಆಟಿಕೆ ಸಾಮಾನುಗಳ ಜೊತೆ ಇತರೇ ಅಭಿವೃದ್ಧಿ ಕೆಲಸಗಳು ಸೇರಿದಂತೆ 33 ಮಾನದಂಡಗಳನ್ನು ಪೂರೈಸಿಕೊಳ್ಳಬೇಕಾಗಿತ್ತು.
ಸರಿಸುಮಾರು ಎರಡು ವರ್ಷಗಳ ಪ್ರಯತ್ನದ ಫಲವಾಗಿ ಬೀಚ್ ತನ್ನ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿಕೊಂಡಿದೆ ಎನ್ನುವುದನ್ನು ಎನ್.ಜಿ.ಓ ಖಾತರಿಪಡಿಸಿಕೊಂಡು ಬ್ಲ್ಯೂ ಪ್ಲಾಗ್ ಪ್ರಮಾಣ ಪತ್ರ ನೀಡಿದೆ. 60 ರಾಷ್ಟ್ರಗಳ ಸದಸ್ಯತ್ವ ಪಡೆದಿರುವ ಸಂಸ್ಥೆ ನೀಡುವ ಸರ್ಟಿಫಿಕೇಟ್‍ನಿಂದ ಆ ಎಲ್ಲಾ ರಾಷ್ಟ್ರಗಳ ಪ್ರವಾಸಿಗರು ಗುಣಮಟ್ಟದ ಬೀಚ್ ಹುಡುಕಾಟದಲ್ಲಿರುವಾಗ ಕಾಸರಕೋಡ ಇಕೋ ಬೀಚ್ ಸಹ ಅವರೆದುರು ತೆರೆದುಕೊಳ್ಳಲಿದೆ. ಇದರಿಂದ ವಿದೇಶಿ ಪ್ರವಾಸಿಗರ ಆಗಮನ ಹೆಚ್ಚುವ ಜೊತೆಗೆ ಸ್ಥಳೀಯರ ಆಕರ್ಷಣೆಗೂ ಕಾರಣವಾಗಿ ಬೀಚ್‍ಗೆ ಬೇಟಿ ನೀಡುವವರ ಸಂಖ್ಯೆ ಹೆಚ್ಚಿದಂತೆ ನೇರಾನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ನಿಸರ್ಗದತ್ತವಾದ ಸುಂದರ ಪರಿಸರವನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ಸಿಕ್ಕ ಈ ಯಶಸ್ಸು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.


ಬೀಚ್‍ನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೇರಿಸುವ ಪ್ರಯತ್ನದಲ್ಲಿ ಪ್ರವಾಸೋದ್ಯಮ ಇಲಾಖೆ ಹಲವು ಏಳು ಬೀಳುಗಳನ್ನು ಕಂಡಿದೆ. ಕಳೆದ ಮೂರು ತಿಂಗಳ ಹಿಂದೆ ಬೀಚ್‍ನಲ್ಲಿನ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿತು ಇನ್ನೇನು ಸರ್ಟಿಫಿಕೇಟ್‍ಗೆ ಶಿಫಾರಸ್ಸು ಮಾಡಬೇಕು ಅನ್ನುವಷ್ಟರಲ್ಲಿ ಸಮುದ್ರದ ಆಳೆತ್ತರದ ಅಲೆಗಳು ವೀಕ್ಷಣಾಗೋಪುರ, ಶೌಚಾಲಯ, ವಾಕಿಂಗ್ ಪಾಥ್ ಮುಂತಾದುವಗಳನ್ನು ಕೊಚ್ಚಿಕೊಂಡು ಹೋಗಿ ಅಪಾರ ಹಾನಿಯಾಗಿತ್ತು. ಆದರೂ ಎದೆಗುಂದದೇ ಕೊಚ್ಚಿಕೊಂಡು ಹೋಗಿರುವುದನ್ನು ಮತ್ತೆ ಕಟ್ಟುವುದಕ್ಕೆ ಪಣತೊಟ್ಟ ಇಲಾಖೆ ಇಂದು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದೆ.
ಕಾಸರಕೋಡ ಇಕೋ ಬೀಚ್‍ನಲ್ಲಿ ಸಮುದ್ರದ ಅಲೆಗಳಿಗೆ ಕೈಗೊಂಡ ಅನೇಕ ಅಭಿವೃದ್ಧಿ ಕೆಲಸಗಳು ಕೊಚ್ಚಿಕೊಂಡು ಹೋದಾಗ ಚಿಂತೆಯಾಗಿತ್ತು. ಆದರೆ ನಮಗೆ ಮತ್ತೂ ಒಂದಷ್ಟು ಕಾಲಾವಕಾಶ ಇದ್ದುದರಿಂದ ಹಾಳಾಗಿದ್ದನ್ನು ದುರಸ್ಥಿ ಮಾಡುವ ಭರವಸೆ ಇತ್ತು. ಎಲ್ಲರ ಶ್ರಮದ ಫಲವಾಗಿ ಈವತ್ತು ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಬಂದಿದೆ – ರವಿದಾಸ್ ವಾಲೇಕರ್, ಪ್ರವಾಸೋದ್ಯಮ ಇಲಾಖೆ
Leave a Comment