ಕುಮಟಾ: ಇಂಡೇನ್ ಅಡಿಗೆ ಅನಿಲ ವಿತರಕರಾದ ಚೈತ್ರದೀಪ ಎಂಟರ್ ಪ್ರೈಜಸ್ ನವರು ಬಡ ಗ್ರಾಹಕರಿಂದ ನಿಯಮ ಮೀರಿ ಸಾಗಾಟ ದರವನ್ನು ಮನಸೋ ಇಚ್ಚೆ ಆಕರಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಎ.ಸಿ ಎಮ್ ಅಜಿತ್ ಮಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಅಡಿಗೆ ಅನಿಲ ಗ್ರಾಹಕರ ಪರವಾಗಿ ವಕೀಲ ಆರ್.ಜಿ.ನಾಯ್ಕ ಸುದ್ಧಿಗೋಷ್ಟಿ ನಡೆಸಿ ವಾರದೊಳಗೆ ತಾಲೂಕು ಆಡಳಿತ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಎಮ್ ಅಜಿತ್ ಏಜನ್ಸಿ ಮಾಲಿಕರು ಹಾಗೂ ಗ್ರಾಹಕರ ಸಭೆ ನಡೆಸಿ ಮಾತನಾಡಿದರು.ಸರ್ಕಾರದ ನಿಯಮದಂತೆ ಅಡಿಗೆ ಅನಿಲದ ಮೂಲ ಬೆಲೆ 611 ರೂ 50 ಇದೆ. ಸಿಲೆಂಡರ್ ದಾಸ್ತಾನು ಮಳಿಗೆಯಿಂದ 5 ಕಿ.ಮೀ ಅಂತರದಲ್ಲಿನ ಗ್ರಾಹಕರಿಗೆ ಸಾಗಾಟ ಬೆಲೆಯನ್ನೂ ಯಾವುದೇ ಕಾರಣಕ್ಕೂ ಆಕರಿಸುವಂತಿಲ್ಲ. ನಂತರ ಪ್ರತಿ ಕಿ.ಮೀ ಗೆ 1 ರೂಪಾಯಿ 60 ಪೈಸೆಯಂತೆ ಆಕರಿಸಬೇಕು. ಈ ನಿಯಮವನ್ನು ಏಜನ್ಸಿಯ ಮಾಲಕರು ಮೀರಿದ್ದಾರೆ. ಈ ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಿ ಗ್ರಾಹಕರಿಗೆ ನ್ಯಾಯ ಓದಗಿಸಬೇಕು ಎಂದು ಏಜನ್ಸಿ ಮಾಲಕ ಮದನ ನಾಯಕ ಅವರಿಗೆ ಎಚ್ಚರಿಸಿದರು.ವಕೀಲ ಆರ್.ಜಿ.ನಾಯ್ಕ ಮಾತನಾಡಿ ಕಳೆದ 37 ವರ್ಷಗಳಿಂದ ಇದೇ ರೀತಿ ಗ್ರಾಹಕರಿಂದ ಸುಲಿಗೆ ಮಾಡಲಾಗುತ್ತಿದೆ. ಇದಕ್ಕೆ ಗ್ಯಾಸ್ ಏಜನ್ಸಿಯ ಮಾಲಕರೇ ಹೊಣೆಗಾರರಾಗುತ್ತಾರೆ. ಪ್ರತಿ ಗ್ರಾಹಕರಿಂದ 50 ರೂಗಳಿಂದ 60 ರೂಪಾಯಿಗಳನ್ನು ಪ್ರತಿ ಸಿಲೆಂಡರ್ ಮೇಲೆ ಹೆಚ್ಚುವರಿ ಹಣ ಪಡೆದು ಹಗಲು ದರೋಡೆ ಮಾಡಲಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ತಾಲೂಕು ಆಡಳಿತದ ಮೊರೆ ಹೋಗಬೇಕಾಯಿತು ಎಂದರು.ಚೈತ್ರದೀಪ ಎಂಟರ್ ಪ್ರೈಜಸ್ ಮಾಲಕ ಮದನ ನಾಯಕ ಪ್ರತಿಕ್ರಿಯಿಸಿ ಈ ರೀತಿ ಆಗುತ್ತಿರುವುದು ನನ್ನ ಗಮನದಲ್ಲಿಲ್ಲ. ಇದಕ್ಕೆ ನನ್ನ ಕೆಲಸಗಾರರೇ ಕಾರಣವಾಗಿರಬಹುದು. ನನಗೆ ನ್ಯಾಯವಾಗಿ ಬರಬೇಕಿದ್ದ ಹಣವನ್ನು ಮಾತ್ರ ಮಾತ್ರ ಕೆಲಸಗಾರರು ನೀಡುತ್ತಿದ್ದರಿಂದ ಈ ಬಗ್ಗೆ ಮಾಹಿತಿ ಇರಲಿಲ್ಲ. ತಕ್ಷಣ ಅವರನ್ನು ವಿಚಾರಣೆ ಮಾಡುತ್ತೇನೆ ಎಂದು ಸಮಜಾಯಿಸಿ ನೀಡಿದರು.ಜಿ.ಪಂ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ ಈ ರೀತಿ ಕೆಲಸಗಾರರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಮಾಲಕರಾದ ನೀವು ಇದಕ್ಕೆ ಸಂಪೂರ್ಣ ಜವಾಬ್ದಾರರಾಗಿರುತ್ತಿರಿ. ನಿಮ್ಮ ಕೆಲಸಗಾರರ ಮೇಲೆ ನಿಮಗೆ ಹಿಡಿತ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ ಎಂದರು.ಚೈತ್ರದೀಪ ಎಂಟರ್ ಪ್ರೈಜಸ್ ಮಾಲಕ ಮದನ ನಾಯಕ ನಮ್ಮಿಂದ ಲೋಪವಾಗಿರುವುದು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ. ಯಾವುದೇ ಕಾರಣಕ್ಕೂ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲು ಮಾಡುವುದಿಲ್ಲ. ನನಗೆ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಗ್ಯಾಸ ಸಿಲೆಂಡರ್ ವಿತರಿಸಲು ಪರವಾನಿಗೆ ಇದೆ. ಆದರೆ ಗ್ರಾಹಕರ ಒತ್ತಾಯದ ಮೇಲೆ ಹಳ್ಳಿಗಳಿಗೆ ವಿತರಿಸುತ್ತಿದ್ದೇನೆ. ನೀವು ಹೊಸ ಏಜನ್ಸಿ ಪಡೆಯಲು ನನ್ನ ಆಕ್ಷೇಪ ಇಲ್ಲ. ಈ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು. ನಾಳೆಯಿಂದ ನಾನೇ ಖುದ್ದಾಗಿ ಗ್ಯಾಸ್ ವಿತರಣಾ ವಾಹನದಲ್ಲಿ ತೆರಳಿ ಗ್ರಾಹಕರಿಗೆ ನ್ಯಾಯ ಒದಗಿಸುವೆ.ಅಲ್ಲದೇ ಕುಮಟಾ ಪಟ್ಟಣ ವ್ಯಾಪ್ತಿಯ ನಂತರ ಮಾಸೂರು ಕ್ರಾಸ್,ಕಡ್ಲೆ,ಹೊಲನಗದ್ದೆ, ಮಾದರಿರಸ್ತೆ,ಗುಡೇಅಂಗಡಿ,ಬಾಡ,ಕಾಗಾಲ,ಗುಡ್ ಕಾಗಾಲ, ಅಘನಾಶಿನಿ ಭಾಗಗಳಿಗೆ ನಿಗದಿತ ದರವನ್ನು ನಾಮಫಲಕದಲ್ಲಿ ಬರೆದು ಸಾಗಾಟ ವಾಹನದಲ್ಲಿ ಪ್ರದರ್ಶಿಸಲಾಗುತ್ತದೆ. ಮುಂದೆ ಗ್ರಾಹಕರಿಂದ ಯಾವುದೇ ಆಕ್ಷೇಪ ಬರದಂತೆ ಜಾಗ್ರತೆ ವಹಿಸುತ್ತೇನೆ.ಹೆಚ್ಚುವರಿ ಹಣ ಪಡೆದಲ್ಲಿ ನನ್ನ ಗಮನಕ್ಕೆ ತರಬೇಕು ಎಂದರು.ಬಾಡ ವಲಯದ ಅಡಿಗೆ ಅನಿಲ ಗ್ರಾಹಕರಾದ ಜೆ.ಎಸ್.ನಾಯ್ಕ, ಮಂಗಲದಾಸ್ ನಾಯ್ಕ, ಹೊಲನಗದ್ದೆ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಪಟಗಾರ, ಕರುಣಾಕರ ಭಟ್ಟ, ಶ್ರೀನಿವಾಸ ನಾಯ್ಕ, ವಿನಾಯಕ ನಾಯ್ಕ,ವಸಂತ ಗೌಡ, ಭಾಸ್ಕರ ನಾಯ್ಕ, ಮೋಹನ ನಾಯ್ಕ ಅಘನಾಶಿನಿ, ವಿನಾಯಕ ನಾಯ್ಕ ಅಘನಾಶಿನಿ,ಪ್ರಮೋದ ನಾಯ್ಕ ಕಾಗಾಲ ಇನ್ನಿತರರು ಇದ್ದರು.
ಚೈತ್ರದೀಪ ಎಂಟರ್ ಪ್ರೈಜಸ್ ನವರ ವ್ಯವಸ್ಥೆಯಲ್ಲಿ ತಪ್ಪು ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಾಲಕರು ಸಿಲೆಂಡರ್ ವೆಚ್ಚ ಹಾಗಾ ಸಾಗಾಟ ವೆಚ್ಚಗಳ ಪ್ರತ್ಯೇಕ ರಸೀದಿ ಕಡ್ಡಾಯವಾಗಿ ನೀಡಬೇಕು. ಜನರು ಕೂಡ ಜಾಗ್ರತರಾಗಿರಬೇಕು. ಇದಕ್ಕೆ ಅವರು ಒಪ್ಪಿದ್ದಾರೆ. ತಾಲೂಕು ಆಡಳಿತದ ವತಿಯಿಂದ ಪ್ರತ್ಯೇಕ ವಿಚಾರಣೆ, ಸಿಲೇಂಡರ್ ತೂಕ ಹಾಗೂ ಗ್ರಾಹರ ಅಭಿಪ್ರಾಯ ಸಂಗ್ರಹಣೆ ಮಾಡಲು ಆಹಾರ ನಿರೀಕ್ಷಕರಿಗೆ ಸೂಚಿಸಿದ್ದೇನೆ. ಈ ಬಗ್ಗೆ ಮಾಲಿಕರ ಹೇಳಿಕೆ ಪಡೆಯಲಾಗುವುದು. ಅವರಿಗೆ ಯಾವುದೇ ಸಮಸ್ಯೆ ಆದಲ್ಲಿ ನಮಗೆ ತಿಳಿಸಬಹುದಾಗಿದೆ.ಪಟ್ಟಣ ವ್ಯಾಪ್ತಿಯಲ್ಲಿ ಗ್ರಾಹಕರು ಕೇವಲ 611 ರೂಪಾಯಿ 50 ಪೈಸೆ ಮಾತ್ರ ಪಾವತಿಸಬೇಕು. ಸಾಗಾಟ ವೆಚ್ಚ ಉಚಿತವಾಗಿರುತ್ತದೆ. ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕು.ಎಮ್.ಅಜಿತ್ಸಹಾಯಕ ಆಯುಕ್ತರುಕುಮಟಾ ಉಪವಿಭಾಗ
Leave a Comment