ಹಳಿಯಾಳ:- ಕೆಲವರು ಬಹುಕೋಟಿಯ ಒಳಚರಂಡಿ ಯೋಜನೆಯ ಪರವಾಗಿದ್ದು ಹೋರಾಟವನ್ನೇ ನಡೆಸಿದರು ಇನ್ನೂ ಕೆಲವರು ಭಾರಿ ವಿರೋಧ ಮಾಡಿ ತಣ್ಣಗಾದರು ಆದರೇ ಯೋಜನೆ ಕಾಮಗಾರಿ ಮಾತ್ರ ಇಬ್ಬರಿಗೂ ಸಮಸ್ಯೆಯಾಗದೆ ಸಾರ್ವಜನೀಕರಿಗೆ ಮಾತ್ರ ದಿನನಿತ್ಯ ಕಿರಿಕಿರಿಯನ್ನುಂಟು ಮಾಡುತ್ತಿರುವುದು ಅಲ್ಲದೇ ಪ್ರತಿದಿನ ಜನರು ಹಿಡಿಶಾಪ ಹಾಕುವಂತಾಗಿದೆ.

ಹಳಿಯಾಳಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಪೋಲಿಸ್ ರಕ್ಷಣೆಯಲ್ಲಿ ಆರಂಭವಾಗಿದ್ದ ಒಳಚರಂಡಿ ಯೋಜನೆ ಕಾಮಗಾರಿ ಹಲವಾರು ಬಡಾವಣೆ, ಗಲ್ಲಿಗಳ ಜನರ ನೆಮ್ಮದಿಯನ್ನೇ ಹಾಳು ಗೆಡವಿದ್ದು ಪ್ರತಿನಿತ್ಯ ಹಿಡಿಶಾಪಹಾಕುವಂತಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಅಧಿಕಾರಿಗಳು ನೀಡಿದ ಭರವಸೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗಿರುವುದು ಅಷ್ಟೇ ಸತ್ಯವಾಗಿದೆ.
76.20 ಕೋಟಿ ರೂ. ಬೃಹತ್ ಮೊತ್ತದ ಒಳಚರಂಡಿ ಕಾಮಗಾರಿಯನ್ನು ಧಾರವಾಡದ ಸುಪ್ರದಾ ಕನ್‍ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯವರು ನಡೆಸುತ್ತಿದ್ದು ಮನಸೋ ಇಚ್ಚೆ ಕಾಮಗಾರಿ ನಡೆಸಿ ಸಾರ್ವಜನೀಕರ ಕಷ್ಟಕ್ಕೆ ಸ್ಪಂದಿಸದೆ ರಸ್ತೆಗಳನ್ನು ಹೊಂಡ ಮತ್ತು ಕೆಸರಿನ ಆಗರವಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆಗೆ ಕ್ಯಾರೆ ಎನ್ನುವುದಿಲ್ಲ ಎನ್ನುವುದು ಒಂದೆಡೆ ಆದರೇ ಕಾಮಗಾರಿ ಪರ ಹೋರಾಟ ಮಾಡಿದವರು ಹಾಗೂ ಕಾಮಗಾರಿ ವಿರೋಧಿಸಿ ಹೋರಾಟ ಮಾಡಿ ತಣ್ಣಗಾದವರು ಇಂದು ಸಾರ್ವಜನೀಕರ ಸಮಸ್ಯೆಗಳನ್ನು ಕೇಳಲು ಬರುತ್ತಿಲ್ಲವೆಂಬುದು ಹಳಿಯಾಳ ರಾಜಕೀಯದ ಬಗ್ಗೆ ಜನ ಚೆನ್ನಾಗಿ ಅರಿಯಬೇಕಾಗಿದೆ.

ಈಗಾಗಲೇ ಕಾಮಗಾರಿ ಪ್ರಾರಂಭವಾಗಿ 7 ತಿಂಗಳುಗಳೇ ಕಳೆದಿವೆ. ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಿಂದ ಆರಂಭವಾದ ಕಾಮಗಾರಿ ಚವ್ವಾಣ ಪ್ಲಾಟ್, ಬಸವನಗರ, ಸದಾಶೀವನಗರ, ತಾನಾಜಿಗಲ್ಲಿ, ಕೆಎಚ್‍ಬಿ ಕಾಲೋನಿ(ಆನೆಗುಂದಿ ಬಡಾವಣೆ), ಗುತ್ತಿಗೇರಿಗಲ್ಲಿ, ಗೌಳಿಗಲ್ಲಿ, ದುರ್ಗಾನಗರ, ಬಿಕೆ ಹಳ್ಳಿ ರಸ್ತೆ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ನಡೆಸಲಾಗುತ್ತಿದ್ದು ಇಲ್ಲಿ ಒಳಚರಂಡಿ ಪೈಪಲೈನ್‍ಗಾಗಿ ಅಗೆದು ಬಗೆದ ರಸ್ತೆಗಳೆಲ್ಲ ಇಂದು ಕೆಸರಿನ ಕಚ್ಚಾ ರಸ್ತೆಗಳಾಗಿ, ಹೊಂಡಗಳ ಆಗರವಾಗಿ ಮಾರ್ಪಟ್ಟಿವೆ. ಹಲವು ಬಡಾವಣೆಗಳಲ್ಲಂತೂ ವಾಹನ ಸವಾರಿ ದೊಡ್ಡ ಸವಾಲೇ ಆಗಿದ್ದು ಹೆಚ್ಚು ಕಮ್ಮಿ ಆದರೂ ಬಿದ್ದು ಗಂಭೀರ ಸ್ವರೂಪದ ಗಾಯಗಳನ್ನು ಮಾಡಿಕೊಳ್ಳುವುದು ಕಟ್ಟಿಟ್ಟ ಬುತ್ತಿಯಾಗಿದೆ.

ಪ್ರಸಕ್ತ ಮಳೆಗಾಲದಲ್ಲಂತೂ ಸಾಕಷ್ಟು ಜನರು ಕಾಮಗಾರಿ ನಡೆಸುವ ಸ್ಥಳಗಳಲ್ಲಿ ಕೆಸರುಗದ್ದೆಯಂತಾದ ರಸ್ತೆಗಳಲ್ಲಿ ಬಿದ್ದು ಯಾತನಾಮಯ ದಿನಗಳನ್ನು ಕಳೆಯುತ್ತಿದ್ದಾರೆ. ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಜಲ್ಲಿಕಲ್ಲು(ಖಡಿ)ಗಳನ್ನು ಹಾಕಲಾಗಿದ್ದು ಪ್ರತಿನಿತ್ಯ ಈ ಭಾಗದ ಜನರು ಮನೆಯಿಂದ ಹೊರಗೆ ಕಾಲಿಡಲು ಭಯಪಡಬೇಕಾದ ಸನ್ನಿವೇಶಗಳು ನಿರ್ಮಾಣವಾಗಿರುವುದು ಒಳಚರಂಡಿ ಕಾಮಗಾರಿ ನಡೆಸುತ್ತಿರುವವರ ಮೇಲೆ ಜನರು ಹಿಡಿಶಾಪ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
Leave a Comment