ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.

ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ ವರೆಗಾದರೂ ಸ್ವಲ್ಪ ಸ್ವಲ್ಪ ಮಳೆ ಸುರಿಯುತ್ತಿದ್ದರೆ ಅನುಕೂಲ ಎನಿಸಿದರೂ, ಈಗಾಗಲೇ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ಮನೆಗೆ ತರಬೇಕಾದ ಅನಿವಾರ್ಯತೆ ಇರುವ ರೈತರ ಪಾಲಿಗೆ ಈ ಮಳೆ ಎನ್ನುವುದು ಶನಿಯಂತೆ ಕಾಡುತ್ತಿದೆ. ತಾಲೂಕಿನ ಮಾವಿನಕುರ್ವಾ, ಹಳದಿಪುರ, ಕರ್ಕಿ, ಮಂಕಿ, ಕೆಳಗಿನೂರು ಸೇರಿದಂತೆ ಮುಂಗಾರಿನ ಆರಂಭಿಕ ದಿನಗಳಲ್ಲಿಯೇ ನಾಟಿ ಕೆಲಸ ಮುಗಿಸಿದ್ದ ಬಹುತೇಕ ರೈತರ ಗದ್ದೆಗಳು ಕೊಯ್ಲಿಗೆ ಬಂದಿದೆ. ತೆನೆ ಬಲಿತು ಹುಲ್ಲು ಹಣ್ಣಾಗಿ ಒಣಗುತ್ತಿದ್ದು ಈ ಸಮಯದಲ್ಲಿ ಮಳೆ ಬಂದರೆ ಬೆಳೆ ನೆಲಕಚ್ಚುತ್ತದೆ. ಭತ್ತ ಉದುರುವ ಜೊತೆಗೆ ಹುಲ್ಲು ನೆನೆದು ಕೊಯ್ಲಿಗೆ ಬರದಂತಾಗುತ್ತದೆ. ಅದೇ ಕಾರಣಕ್ಕೆ ಒಂದು ಹದಿನೈದು ದಿನ ಮಳೆ ಬರದಿದ್ದರೆ ಹುಲ್ಲು ಭತ್ತವನ್ನಾದರೂ ರಕ್ಷಿಸಿಕೊಳ್ಳುತ್ತಿದ್ದೆವು ಎನ್ನುವ ಗೊಣಗಾಟ ರೈತಾಪಿವಲಯದಲ್ಲಿ ಕೇಳಿಬರುತ್ತಿದೆ.
ನೆರೆ ಬಂದು ನೆಟ್ಟಿದ್ದ ಸಸಿ ಮುಳುಗಿತ್ತಾದರೂ ಸ್ವಲ್ಪ ದಿನದಲ್ಲಿಯೇ ಮಳೆ ಕಡಿಮೆಯಾಗಿ ನೀರಿಳಿದುಹೋದ ಕಾರಣ ಬೆಳೆಗೆ ಯಾವುದೇ ಹಾನಿಯಾಗಿರಲಿಲ್ಲ. ಈಗ ಮತ್ತೆ ಮೂರ್ನಾಲ್ಕು ದಿನದಿಂದ ಮಳೆ ಸುರಿಯುತ್ತಿರುವುದು ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತೆ ಮಾಡುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ ರೈತರು.
Leave a Comment