ಮೀಸಲಾತಿ ಪ್ರಶ್ನಿಸಿ ಪಕ್ಷೇತರ ಸದಸ್ಯೆ ತಾರಾ ನಾಯ್ಕ ದೂರು –ಹಿಂದುಳಿದ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ತಪ್ಪಿಸುವ ಹುನ್ನಾರವೆಂಬ ಆರೋಪ
ಹೊನ್ನಾವರ – ಇಲ್ಲಿನ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ನಿಗಧಿಪಡಿಸಿರುವ ಮೀಸಲಾತಿ ನ್ಯಾಯಸಮ್ಮತವಾಗಿಲ್ಲ ಅದಕ್ಕೆ ತಡೆಯಾಜ್ಞೆ ನೀಡುವಂತೆ ಪಕ್ಷೇತರ ಸದಸ್ಯೆ ತಾರಾ ಕುಮಾರಸ್ವಾಮಿ ನಾಯ್ಕ ಹೈಕೋರ್ಟ ಮೊರೆ ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. ಬಿಜೆಪಿ ಬಹುಮತವಿರುವ ಪಟ್ಟಣಪಂಚಾಯತ ಮೀಸಲಾತಿ ಪ್ರಶ್ನಿಸಿ ಸ್ವತಂತ್ರ ಸದಸ್ಯೆ ಕೋರ್ಟ ಮೆಟ್ಟಿಲೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.


2019 ಮೇ ತಿಂಗಳಿನಲ್ಲಿ ನಡೆದ 20 ಸದಸ್ಯ ಬಲದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 12 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರಡನ್ನೂ ಗಳಿಸುವುದು ಪಕ್ಕಾ ಎನ್ನುವ ಸ್ಥಿತಿಯಿದೆ. ಇತ್ತೀಚೆಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ) ಮೀಸಲಾತಿ ಬಂದಿದೆ. ಚುನಾವಣಾ ಫಲಿತಾಂಶದ ದಿನದಿಂದಲೂ ಅಧ್ಯಕ್ಷರ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಶಿವರಾಜ ಮೇಸ್ತ ಮತ್ತು ವಿಜಯ ಕಾಮತ್. ಆದರೆ ಮೀಸಲಾತಿ ಶಿವರಾಜ ಮೇಸ್ತ ಪರವಾಗಿ ಬಂದ ಹಿನ್ನಲೆಯಲ್ಲಿ ವಿಜಯ ಕಾಮತ್ ಅನಿವಾರ್ಯವಾಗಿ ಕಣದಿಂದ ಹಿಂದೆ ಸರಿಯುವಂತಾಗಿತ್ತು.
ಒಂದು ಹಂತದಲ್ಲಿ ಶಿವರಾಜ ಮೇಸ್ತ ದಾರಿ ಸುಗಮವಾಯಿತು ಎನ್ನುವಾಗಲೇ ಹಿಂದುಳಿದ ಸಮಾಜದಿಂದ ಆಯ್ಕೆಯಾದ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷ ಸದಸ್ಯರನ್ನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಎಂದು ಬಿಂಬಿಸುವ ತೆರೆಮರೆಯ ಪ್ರಯತ್ನ ಪಕ್ಷದ ಪಡಸಾಲೆಯಿಂದಲೇ ನಡೆಯಿತು. ಈ ಮೂಲಕ ಶಿವರಾಜ ಮೇಸ್ತ ಅವರಿಗೆ ನೀವೆಷ್ಟೇ ಪ್ರಭಲರಾಗಿದ್ದರೂ ಪಕ್ಷದ ತೀರ್ಮಾನವೇ ಅಂತಿಮ ಮತ್ತು ಪಕ್ಷ ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಅಧ್ಯಕ್ಷ ಗಾದಿಯಲ್ಲಿ ಕೂಡ್ರಿಸಬಲ್ಲುದು ಎನ್ನುವ ಸಂದೇಶವನ್ನು ರವಾನಿಸುವ ಕಾರ್ಯತಂತ್ರವೂ ಇದರ ಹಿಂದೆ ಅಡಗಿತ್ತು ಎನ್ನುವುದು ಗುಟ್ಟಾಗಿಯೇನೂ ಉಳಿಯಲಿಲ್ಲ.

ಪ್ರಕಟವಾದ ಮೀಸಲಾತಿಯಂತೆ ಅಧಿಕಾರ ಹಿಡಿಯುವ ಸದಸ್ಯರು ಬಹುಮತ ಪಡೆದ ಪಕ್ಷದಲ್ಲಿದ್ದರೂ ಮೀಸಲಾತಿ ಪ್ರಶ್ನಿಸಿ ಕೋರ್ಟ ಮೊರೆ ಹೋದರೆ ಹಿಂದುಳಿದ ವರ್ಗದವರಿಗೆ ಅಧಿಕಾರ ತಪ್ಪಿಸುವ ಹುನ್ನಾರ ಎನ್ನುವ ಅಪವಾದದ ಜೊತೆಗೆ ಪಕ್ಷದ ಒಡಕಿಗೂ ಕಾರಣವಾಗಬಹುದು ಎನ್ನುವ ಮುಂದಾಲೋಚನೆಯಿಂದಲೇ ಪಕ್ಷಕ್ಕೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯಿಂದ ಮೀಸಲಾತಿ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗುತ್ತಿದೆ.
ತಾನು ಬೇರೆಯವರ ಕೈಗೊಂಬೆಯಾಗಿ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ ಮೊರೆ ಹೋಗಿದ್ದೇನೆ ಎನ್ನುವುದನ್ನು ತಾರಾ ನಾಯ್ಕ ಅಲ್ಲಗೆಳೆದಿದ್ದಾರೆ. ಪಕ್ಷೇತರ ಸದಸ್ಯರನ್ನು ಯಾವುದಕ್ಕೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅನುದಾನ ಹಂಚಿಕೆಯಲ್ಲೂ ತಾರತಮ್ಯ ವಾಗುತ್ತೆ ಇದೇ ಕಾರಣಕ್ಕೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕರೆ ಅನುಕೂಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದ್ದರೆ ಮೇಲ್ವರ್ಗದ ಯಾರಾದರೊಬ್ಬರು ಸುಪ್ರೀಂ ಆಯ್ಕೆಯಾಗಿರುತ್ತಿದ್ದರು. ಹಿಂದುಳಿದ ವರ್ಗಕ್ಕೆ ಮೀಸಲಾತಿ ಬಂದಿರುವುದರಿಂದ ಎಲ್ಲರನ್ನೂ ಆಕಾಂಕ್ಷಿಗಳೆಂದು ಬಿಂಬಿಸಿ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿದೆ ಎನ್ನುವ ಮಾತೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶಾಸಕ ದಿನಕರ ಶೆಟ್ಟಿ ಪಾಲಿಗೆ ಅತ್ತ ದರಿ ಇತ್ತ ಪುಲಿ
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಹೊನ್ನಾವರ ಪಟ್ಟಣದಲ್ಲಿ ಜಿ.ಎಸ್.ಬಿ ಸಮುದಾಯ ಆರ್ಥಿಕವಾಗಿ ಪ್ರಭಲವಾಗಿರುವ ಜೊತೆಗೆ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿಯೂ ಗುರುತಿಸಿಕೊಂಡಿದ್ದಾರೆ. ಇತರೇ ಸಮುದಾಯಗಳನ್ನು ಪ್ರಭಾವಿಸುವ ಸಾಮಥ್ರ್ಯವನ್ನೂ ಹೊಂದಿದ್ದಾರೆನ್ನುವ ಕಾರಣಕ್ಕೇ ಪಟ್ಟಣಪಂಚಾಯತದಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಾಗ ಜಿ.ಎಸ್.ಬಿ ಸಮಾಜದ ವಿಜಯ ಕಾಮತ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ದೊಡ್ಡಮಟ್ಟದಲ್ಲಿ ಕೇಳಿಬಂದಿದ್ದು. ಇನ್ನು ಪರೇಶ ಮೇಸ್ತ ಪ್ರಕರಣದ ನಂತರ ಬಹುತೇಕ ಮೀನುಗಾರ ಸಮಾಜ ಕಾಂಗ್ರೆಸ್ ವಿರೋಧಿಯಾಗಿ ಬಿಜೆಪಿಯನ್ನು ಬೆಂಬಲಿಸಿತು. ಪಟ್ಟಣದಲ್ಲಿ ಬಹುಸಂಖ್ಯಾತರಾಗಿರುವ ಹಿನ್ನಲೆಯಲ್ಲಿ ಈ ಸಮುದಾಯದಿಂದ ಹೆಚ್ಚು ಮಂದಿ ಸದಸ್ಯರಾಗಿಯೂ ಚುನಾಯಿತರಾದ ಕಾರಣ ಶಿವರಾಜ ಮೇಸ್ತ ಹೆಸರು ಮುನ್ನೆಲೆಗೆ ಬಂದಿದೆ.
ಯಾರೊಬ್ಬರನ್ನು ಬೆಂಬಲಿಸುವ ಅಥವಾ ಕೈ ಬಿಡುವ ಸ್ಥಿತಿಯಲ್ಲಿ ಶಾಸಕ ದಿನಕರ ಶೆಟ್ಟಿ ಇರಲಿಲ್ಲ. ವಿಜು ಕಾಮತ್ ಅವರನ್ನು ಬೆಂಬಲಿಸಿದರೆ ಮೀನುಗಾರ ಸಮುದಾಯಕ್ಕೆ ಅಧಿಕಾರ ತಪ್ಪಿಸಿದ ಆರೋಪ, ಶಿವರಾಜ ಮೇಸ್ತ ಬಗ್ಗೆ ಒಲವು ತೋರಿದೆ ಜಿ.ಎಸ್.ಬಿ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾದ ಸಂದಿಗ್ದ ಸ್ಥಿತಿ ನಿರ್ಮಾಣವಾಗಿತ್ತು. ಮೀಸಲಾತಿ ಬಂದ ನಂತರವಾದರೂ ಈ ಗೊಂದಲ ಬಗೆಹರಿಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಆಘಾತವಾಗಿದ್ದು ಮೀಸಲಾತಿಯನ್ನು ಪ್ರಶ್ನಿಸಿ ಪಕ್ಷಕ್ಕೆ ಸಂಬಂಧವಿಲ್ಲದ ಮೂರನೇ ವ್ಯಕ್ತಿ ಕೋರ್ಟ ಮೆಟ್ಟಿಲೇರಿರುವುದು ಸಮಸ್ಯೆಯನ್ನು ಜೀವಂತವಾಗಿರುವಂತೆ ಮಾಡಿದೆ.
ಮತ್ತೆ ಮೀಸಲಾತಿ ಬದಲಾಗಬಹುದಾ ಬದಲಾದರೆ ಬದಲಾದ ನಂತರದ ಬೆಳವಣಿಗೆಯನ್ನು ಶಾಸಕ ದಿನಕರ ಶೆಟ್ಟಿ ಯಾವ ರೀತಿ ನಿಭಾಯಿಸಬಹುದು ಭವಿಷ್ಯದ ಚುನಾವಣೆಗಳಲ್ಲಿ ಈ ಬೆಳವಣಿಗೆ ಪಕ್ಷದಮೇಲೆ ಯಾವರೀತಿ ಪರಿಣಾಮ ಬೀರಬಲ್ಲುದು ಎನ್ನುವ ಕುತೂಹಲ ಗರಿಗೆದರಿದೆ.
ಮೀಸಲಾತಿ ಪ್ರಶ್ನಿಸಿ ಕೋರ್ಟ ಮೊರೆ ಹೋಗಿರುವ ತಾರಾ ನಾಯ್ಕ ಬಿಜೆಪಿಯವರೂ ಅಲ್ಲ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ಹಿಂದುಳಿದ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನು ತಪ್ಪಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ತಾರಾ ನಾಯ್ಕ ಮೂಲಕ ಕೋರ್ಟಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ – ಶಿವರಾಜ ಮೇಸ್ತ, ಪಟ್ಟಣ ಪಂಚಾಯತ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ
Leave a Comment