ಸರ್ಕಾರದ ನೆರವಿಲ್ಲ.. ಪ್ರಯಾಣಿಕರೂ ಬರುತ್ತಿಲ್ಲ ಹೀಗಾದ್ರೆ ಹೇಗೆ ಸ್ವಾಮಿ ನಾವು ಬದುಕೋದು..?
ಹೊನ್ನಾವರ – “ನೇರವಾಗಿ ಸರ್ಕಾರಕ್ಕೆ ಒಂದು ರೂಪಾಯಿ ಟ್ಯಾಕ್ಸ್ ಕಟ್ಟದವರಿಗೂ ಕೊರೊನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆಂದು ಸರ್ಕಾರ ಸಹಾಯಧನ ನೀಡುತ್ತಿದೆ ಇದು ಒಳ್ಳೆಯದೇ ಆದರೆ ಪ್ರತೀ ವರ್ಷ ಲಕ್ಷ ರೂಪಾಯಿ ಟ್ಯಾಕ್ಸ ಕಟ್ಟುತ್ತಿದ್ದ ಟೆಂಪೋದವರು 7 ತಿಂಗಳಿಂದ ನೈಯಾಪೈಸೆ ದುಡಿಮೆ ಇಲ್ಲದೆ ಖಾಲಿ ಕುಳಿತಿದ್ದೇವೆ ನಿಮ್ಮ ಪರಿಸ್ಥಿತಿ ಏನಾಗಿದೆ? ಮನೆ ಮಂದಿ ಎರಡು ಹೊತ್ತು ಊಟ ಮಾಡುತ್ತಿದ್ದಾರಾ ? ಉಪವಾಸವಿದ್ದಾರಾ ಎಂದು ಯಾವೊಬ್ಬ ಅಧಿಕಾರಿಯಾಗಲೀ ಜನಪ್ರತಿನಿಧಿಯಾಗಲೀ ಕೇಳುತ್ತಿಲ್ಲ ಯಾರಿಗೇಳಾಣ ನಮ್ ಕಷ್ಟಾನ” ತಾಲೂಕಿನ ಟೆಂಪೋ ಮಾಲಕರು ಚಾಲಕರು ತಮ್ಮೊಳಗಿನ ಹತಾಶೆಯನ್ನು ನೋವನ್ನು ತೋಡಿಕೊಳ್ಳುತ್ತಿರುವ ರೀತಿ ಇದು.

ಕೊರೊನಾ ಎಂಬ ಬರಿಗಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಯ ಹೊಡೆತಕ್ಕೆ ನಲುಗಿದ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವ ಲಕ್ಷಣಗಳು ಕಂಡು ಬರುತ್ತಿದ್ದರೂ ಕೆಲವೊಂದು ವ್ಯವಸ್ಥೆಗಳು ಸರಿಪಡಿಸಲಾರದಷ್ಟು ಅಸ್ಥವ್ಯಸ್ತಗೊಂಡಿದೆ. ಅವುಗಳಲ್ಲಿ ಖಾಸಗಿ ಟೆಂಪೋ ಉದ್ಯಮವೂ ಒಂದು. ಹೆಚ್ಚುಕಡಿಮೆ ಹೊನ್ನಾವರ ತಾಲೂಕೊಂದರಲ್ಲಿಯೇ 150 ಖಾಸಗಿ ಟೆಂಪೋಗಳಿವೆ. ಚಾಲಕ, ನಿರ್ವಾಹಕ, ಮಾಲಕ ಹೀಗೆ ಒಂದೊಂದು ಟೆಂಪೋದಿಂದ ಏನಿಲ್ಲವೆಂದರೂ ಮೂರು ಕುಟುಂಬಗಳು ಅನ್ನವನ್ನು ಸಂಪಾದಿಸಿಕೊಳ್ಳುತ್ತಿದ್ದವು. ಒಟ್ಟಾರೆ 450 ಕುಟುಂಗಳು ಇಂದು ನೇರವಾಗಿ ಟೆಂಪೋ ದಂಧೆಯನ್ನೇ ಅವಲಂಬಿಸಿವೆ. ಮಾರ್ಚ 22ಕ್ಕೆ ಸ್ಥಗಿತವಾದ ಟೆಂಪೋ ಸಾರಿಗೆ ಅಕ್ಟೋಬರ್ 18 ಕಳೆದರೂ ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಿಲ್ಲ. ಬೇರೆ ದಾರಿಯೇ ಇಲ್ಲದ ಕಾರಣಕ್ಕೆ ಕೆಲವು ಮಾಲಕರು ಟೆಂಪೋವನ್ನು ರಸ್ತೆಗಿಳಿಸಿದ್ದಾರಾದರೂ ಪ್ರಯಾಣಿಕರಿಲ್ಲದೆ ಆದಾಯಕ್ಕಿಂತ ಕರ್ಚಿನ ಬಾಬ್ತು ಹೆಚ್ಚುತ್ತಿದೆ ಎಂದು ಆತಂಕಿತರಾಗಿದ್ದಾರೆ.


ಟೆಂಪೋದವರು ಪ್ರತೀ ಮೂರು ತಿಂಗಳಿಗೊಮ್ಮೆ 8 ಸಾವಿರ ರುಪಾಯಿ ಟ್ಯಾಕ್ಸ್ ಕಟ್ಟಬೇಕು, ವರ್ಷಕ್ಕೆ 35 ರಿಂದ 40 ಸಾವಿರ ರುಪಾಯಿ ಇನ್ಶೂರೆನ್ಸ್ ಹಣ ಪಾವತಿಸಬೇಕು. ಡಿಸೇಲ್, ಚಾಲಕರ ಸಂಬಳ, ನಿರ್ವಾಹಕರ ಸಂಬಳ, ಗಾಡಿ ಮೆಂಟೇನನ್ಸ್ ಎಲ್ಲಾ ಸೇರಿದರೆ ಒಂದು ಟೆಂಪೋಗೆ ಏನಿಲ್ಲವೆಂದರೂ ಒಂದು ತಿಂಗಳಿಗೆ ಕನಿಷ್ಠ 50 ಸಾವಿರ ಎತ್ತಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದೇನೇ ಸಾಹಸ ಮಾಡಿದರೂ ತಿಂಗಳಿಗೆ 50 ಸಾವಿರ ಗಡಿಯನ್ನ ಮುಟ್ಟುವುದು ಸಾಧ್ಯವಿಲ್ಲ ಎನ್ನುತ್ತಾರೆ ಟೆಂಪೋದವರು.
ಖಾಸಗಿ ಟೆಂಪೋದವರ ಬದುಕು ಯಾವತ್ತೂ ಮುಳ್ಳಿನ ಹಾದಿಯ ಪಯಣವೇ ಆಗಿತ್ತು. ಆದರೂ ಹಗಲಿರುಳೆನ್ನದೇ ಕಷ್ಟಪಟ್ಟು ದುಡಿದು ಅಷ್ಟಿಷ್ಟು ಗಳಿಸುತ್ತಿದ್ದೆವು. ಸ್ವಾಭಿಮಾನದ ದುಡಿಮೆ ಎನ್ನುವ ಕಾರಣಕ್ಕೆ ಬ್ಯಾಂಕ್ಗಳಲ್ಲಿ ಸಾಲ ಮಾಡಿಯಾದರೂ ಹಲವರು ಟೆಂಪೋಗಳನ್ನು ಮಾಡಿಕೊಂಡಿದ್ದರು. 7 ತಿಂಗಳಿಂದ ದುಡಿಮೆಯಿಲ್ಲ ಎಂದರೆ ಸಾಲ ಕೊಟ್ಟ ಬ್ಯಾಂಕ್ನವರು ಸುಮ್ಮನಿರುತ್ತಾರ. ಈಗಾಗಲೇ ಬಹಳಷ್ಟು ಜನರ ಸಾಲದ ಕಂತು ಐದಾರು ತಿಂಗಳಿಂದ ಕಟ್ಟಬಾಕಿಯಾಗಿದೆ. ಜನಜೀವನ ಮೊದಲಿನ ಸ್ಥಿತಿಗೆ ಬಂದರೂ ಖಾಸಗಿ ಟೆಂಪೋದವರು ತಮ್ಮ ದಯನೀಯ ಸ್ಥಿತಿಯಿಂದ ಮೇಲೆದ್ದುಬರುವುದಕ್ಕೆ ವರ್ಷಗಳೇ ಉರುಳಬೇಕೇನೋ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜನಪ್ರತಿನಿಧಿಗಳಾದವರು ಟೆಂಪೋದವರ ಕಷ್ಟವನ್ನು ಅರ್ಥಮಾಡಿಕೊಂಡು ಸರ್ಕಾರಕ್ಕೆ ಇಲ್ಲಿನ ನೈಜ ಸ್ಥಿತಿಗತಿಗಳಬಗ್ಗೆ ವಿವವರಿಸಿ ಕನಿಷ್ಠ ಒಂದು ವರ್ಷದ ಟ್ಯಾಕ್ಸ್, ಇನ್ಶೂರೆನ್ಸ್ ವಿನಾಯತಿ ನೀಡುವ ಜೊತೆಗೆ ಉಳಿದೆಲ್ಲಾ ಅಸಂಘಟಿತ ವಲಯಕ್ಕೆ ಆರ್ಥಿಕ ಸಹಾಯಧನ ಘೋಷಿಸಿದಂತೆ ಖಾಸಗಿ ಟೆಂಪೋ ಚಾಲಕರು ನಿರ್ವಾಹಕರು ಮಾಲಕರಿಗೂ ವಿಶೇಷ ಪ್ಯಾಕೇಜ್ ನೀಡಿ ಕಷ್ಟದಲ್ಲಿದ್ದವರ ನೆರವಿಗೆ ದಾವಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
[ಪ್ರತಿ ಮೂರು ತಿಂಗಳಿಗೆ ತುಂಬುತ್ತಿದ್ದ ಟ್ಯಾಕ್ಸ್ ಮೊತ್ತದಲ್ಲಿ ಒಂದು ತಿಂಗಳದ್ದು ರಿಯಾಯತಿ ಬಿಟ್ಟರೆ ಅಸಂಘಟಿತ ವಲಯವಾಗಿದ್ದರೂ ನಮಗೆ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ. ಟೆಂಪೋ ನಂಬಿಕೊಂಡರೆ ಬದುಕುವುದಕ್ಕಾಗುವುದಿಲ್ಲ ಎಂದು ಬಹಳಷ್ಟು ಮಂದಿ ಚಾಲಕರು ನಿರ್ವಾಹಕರು ಬೇರೆ ಕೆಲಸಗಳತ್ತ ಹೋಗುತ್ತಿದ್ದಾರೆ. ಆದರೆ ಬಂಡವಾಳ ತೊಡಗಿಸಿದ ಮಾಲಕರು ಅಸಹಾಯಕರಾಗಿ ಕುಳಿತಿದ್ದಾರೆ. ಸರ್ಕಾರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ನೆರವಿಗೆ ದಾವಿಸಬೇಕು – ಶ್ರೀಧರ ನಾಯ್ಕ, ಟೆಂಪೋ ಮಾಲಕರು]
ಮುಖ್ಯಾಂಶಗಳು
- ಕುಮಟಾ ಮಾರ್ಗ -35, ಭಟ್ಕಳ ಮಾರ್ಗ-70, ಗೇರಸೊಪ್ಪಾ ಮಾರ್ಗ -27, ಕೊಡಾಣಿ ಮಾಗೋಡ ಮಾರ್ಗ -18 ತಾಲೂಕಿನಲ್ಲಿ ಒಟ್ಟೂ 150 ಪ್ರಯಾಣಿಕರ ಟೆಂಪೋಗಳಿವೆ.
- 450 ಕುಟುಂಬಗಳು ಟೆಂಪೋ ಉದ್ಯಮವನ್ನು ನೇರ ಅವಲಂಬಿತವಾಗಿವೆ.
- ದುಡಿಮೆ ಇಲ್ಲದಿದ್ದರೂ ಬ್ಯಾಂಕ್ ಸಾಲದ ಕಂತು, ಟ್ಯಾಕ್ಸ್, ಇನ್ಶೂರೆನ್ಸ್ ಕಟ್ಟಬೇಕಾದ ಅನಿವಾರ್ಯತೆ
- ಅಸಂಘಟಿತವಲಯವಾಗಿದ್ದರೂ ಸರ್ಕಾರದಿಂದ ಇದುವರೆಗೂ ಯಾವುದೇ ನೆರವು ಸಿಕ್ಕಿಲ್ಲ.
Leave a Comment