ಗೇರಸೊಪ್ಪಾದಿಂದ ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ೧೨೦ ಕೋಟಿ ವೆಚ್ಚದ ಕನಸಿನ ಯೋಜನೆ ಅನುಷ್ಠಾನವಾಗುತಿದ್ದು ನಗರವಾಸಿಗಳ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಪಟ್ಟಣಕ್ಕೆ ನೀರನ್ನು ಪೂರೈಸುವ ಜೊತೆಗೆ ಪೈಪ್‌ಲೈನ್ ಹಾದುಹೋಗುವ ೮ ಗ್ರಾಮಪಂಚಾಯತಗಳಿಗೂ ನೀರನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದ್ದು ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಕಾಲದಲ್ಲಿ. ಇದೀಗ ಹಾಲಿ ಶಾಸಕ ದಿನಕರ ಶೆಟ್ಟಿ, ಸುನಿಲ್ ನಾಯ್ಕ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ.

ಇದುವರೆಗೆ ಹೊನ್ನಾವರ ಪಟ್ಟಣಕ್ಕೆ ಕುಮಟಾ ಕೋಣಕಾರದಿಂದ ನೀರು ಸರಬರಾಜಾಗುತ್ತಿತ್ತಾದರೂ ಪದೇ ಪದೇ ಪೈಪ್ ಒಡೆದು, ನೀರೆತ್ತುವ ಪಂಪ್ ಹಾಳಾಗುವ ಕಾರಣದಿಂದ ವಾರಗಟ್ಟಲೇ ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎನ್ನುವಂತೆ ಕಾಣಿಸುತ್ತಿರುವ ಶರಾವತಿ ಕುಡಿಯುವ ನೀರಿನ ಯೋಜನೆಗೆ ಎದುರಾದ ತೊಡಕುಗಳನ್ನೆಲ್ಲಾ ನಿವಾರಿಸಿಕೊಳ್ಳುವಲ್ಲಿ ಶಾಸಕ ದಿನಕರ ಶೆಟ್ಟಿ ಯಶಸ್ವಿಯಾಗಿದ್ದಾರೆ. ಬೃಹತ್ ಗಾತ್ರದ ನೀರಾವರಿ ಪೈಪ್‌ಗಳು ಹೊನ್ನಾವರ ಪಟ್ಟಣದಿಂದ ಗೇರಸೊಪ್ಪಾವರೆಗೂ ಅಲ್ಲಲ್ಲಿ ಶೇಖರಣೆಯಾಗುತ್ತಿದೆ.
ದೂರದ ಮುರ್ಡೇಶ್ವರಕ್ಕೆ ಶರಾವತಿ ನದಿ ನೀರಿನ ಪೂರೈಕೆಯಾಗುತ್ತಿದ್ದರೂ ತಾಲೂಕಿನ ಜನರಿಗೆ ತಮ್ಮಲ್ಲಿರುವ ಜಲಮೂಲವನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಲಿಲ್ಲ ಎನ್ನುವ ಕೊರಗು ನೀಗಲಿದ್ದು ತಾಲೂಕು ಕೇಂದ್ರದ ಜೊತೆಗೆ ನಗರಬಸ್ತಿಕೇರಿ, ಉಪ್ಪೋಣಿ, ಹೆರಂಗಡಿ, ಜಲವಳ್ಳಿ, ಖರ್ವಾ, ಹಡಿನಬಾಳ, ಮುಗ್ವಾ ಹೊಸಾಕುಳಿ ಮುಂತಾದ ಗ್ರಾಮಗಳಲ್ಲಿ ಬೇಸಿಗೆಉ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀರಿನ ಬವಣೆಯೂ ನೀಗಲಿದೆ. ಹೊಳೆಸಾಲಿನ ಜನರಿಗೆ ಅನುಕೂಲವಾಗಿದ್ದ ಏತ ನೀರಾವರಿ ಯೋಜನೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಕೆಲವು ಕಡೆ ಸ್ಥಗಿತವಾಗಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ಆ ಸಾಲಿಗೆ ಸೇರದಿರಲಿ ಎನ್ನುವ ಆಶಯ ಈ ಭಾಗದ ಜನರದ್ದಾಗಿದೆ.

Leave a Comment