ಮುಖ್ಯಾಂಶಗಳು
5500 ಕೋಟಿ ವೆಚ್ಚದ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆ
ಒಂದು ಲಕ್ಷಕ್ಕೂ ಅಧಿಕ ಮರಗಳು ಸೇರಿಂದತೆ 800 ಎಕರೆ ಕಾಡು ನಾಶವಾಗುವ ಸಾಧ್ಯತೆ
ವಿದ್ಯುತ್ ಮಾರ್ಗಗಳಿಂದಾಗಿ ವನ್ಯ ಜೀವಿಗಳ ಕಾರಿಡಾರ್ ತುಂಡಾಗುವ ಅಪಾಯ
ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿಗೆ ತೊಂದರೆಯಗುವ ಸಾಧ್ಯತೆ

ಹೊನ್ನಾವರ;
5500 ಕೋಟಿ ಅಂದಾಜು ವೆಚ್ಚದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು ನವೆಂಬರ್ 4 ರವೆಗೆ ಯಾವುದೇ ರೀತಿಯ ಸಮೀಕ್ಷಾ ಕಾರ್ಯಗಳನ್ನು ನಡೆದಂತೆ ಹೈಕೋರ್ಟ ತಡೆಯಾಜ್ಞೆ ನೀಡಿದೆ.
ಉತ್ತರಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಗಳ ನಡುವೆ ಹಂಚಿಕೆಯಾಗಿರುವ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಗಳಿಂದಾಗಿ ಅಪಾರ ಪ್ರಮಾಣದ ವನ್ಯ ಸಂಪತ್ತನ್ನು ಕಳೆದುಕೊಂಡಿದೆ. ಮತ್ತೊಂದು ಬೃಹತ್ ಯೋಜನೆಯ ಮೂಲಕ ಇಲ್ಲಿನ ಪರಿಸರವನ್ನು ಹಾಳುಗೆಡವಲು ಸರ್ಕಾರ ಮತ್ತು ಕೆ.ಪಿ.ಸಿ.ಎಲ್ ಮುಂದಾಗಿದೆ ಎನ್ನುವ ಆರೋಪ ಪರಿಸರವಾದಿಗಳಿಂದ ಕೇಳಿಬಂದಿತ್ತು. ಪ್ರತಿರೋಧವನ್ನು ಲೆಕ್ಕಿಸದ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿ ಭೂಗರ್ಭದ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು.

ಸಾಗರ ಅರಣ್ಯ ವಿಭಾಗಕ್ಕೆ ಸೇರಿದ ಜೋಗ ಭಾಗದಲ್ಲಿ 9 ಮತ್ತು ಹೊನ್ನಾವರ ಅರಣ್ಯ ವಿಭಾಗಕ್ಕೊಳಪಡುವ ಪ್ರದೇಶದಲ್ಲಿ ಮೂರು ಸುರಂಗ ಮಾರ್ಗಗಳನ್ನು ಕೊರೆದು ನೀರನ್ನು 500 ಮೀಟರ್ ಮೇಲಕ್ಕೆತ್ತಿ ಭೂಗತ ಜಲ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಹರಿಸಿ ವಿದ್ಯುತ್ ಉತ್ಪಾದಿಸುವ ಈ ಬೃಹತ್ ಯೋಜನೆಗಾಗಿ ಸಮೀಕ್ಷಾ ಕಾರ್ಯಗಳು ನಡೆಸಲು ಗುತ್ತಿಗೆ ಪಡೆದ ಕಂಪನಿ ಮುಂದಾಗಿತ್ತು. ಸಾಗರ ವಿಭಾಗಕ್ಕೊಳಪಡುವ ಜೋಗ ಭಾಗದಲ್ಲಿ ಭೂಮಿಯನ್ನು ಕೊರೆದು ಪರೀಕ್ಷಿಸುವ ಕಾರ್ಯ ನಡೆದಿತ್ತು ಆದರೆ ಹೊನ್ನಾವರ ಅರಣ್ಯವಿಭಾಗಕ್ಕೊಳಪಡುವ ಪ್ರದೇಶದಲ್ಲಿ ಯಾವುದೇ ಸರ್ವೇ ಕಾರ್ಯ ಇದುವರೆಗೂ ಆರಂಭವಾಗಿರಲಿಲ್ಲ ಎನ್ನಲಾಗಿದೆ.
ಯೋಜನೆಯ ಅನುಷ್ಠಾನದಿಂದ ಪರಿಸರದಮೇಲಾಗುವ ದುಷ್ಪರಿಣಾಮಗಳನ್ನು ಮುಂದಿಟ್ಟು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅಕ್ಟೋಬರ್ 16 ರಿಂದ ಸಮೀಕ್ಷೆ ಸ್ಥಗಿತವಾಗಿತ್ತಾದರೂ ಮುಂದಿನ ವಿಚಾರಣಾ ದಿನಾಂಕವಾದ ನವೆಂಬರ್ 4 ರ ವರೆಗೆ ಯಾವುದೇ ಸಮೀಕ್ಷಾ ಕಾರ್ಯವನ್ನು ನಡೆಸದಂತೆ ನ್ಯಾಯಾಲಯ ಸೂಚಿಸಿದೆ.
ಉದ್ದೇಶಿತ ಜಲವಿದ್ಯುತ್ ಉತ್ಪಾದನಾ ಯೋಜನೆಯ ಪ್ರಸ್ತಾವನೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ 300 ಎಕರೆ ಅರಣ್ಯ ಮಾತ್ರ ನಾಶವಾಗಲಿದೆ ಎಂದು ಕೆ.ಪಿ.ಸಿ.ಎಲ್ ಲೆಕ್ಕ ನೀಡಿದೆ ಆದರೆ ರಸ್ತೆ, ಸುರಂಗ, ವಿದ್ಯುತ್ ತಂತಿಗಳನ್ನು ಎಳೆಯುವ ಮಾರ್ಗ, ಪವರ್ ಹೌಸ್ ನಿರ್ಮಾಣಕ್ಕೆ ಸೇರಿದಂತೆ 800 ಎಕರೆ ಕಾಡು ನಾಶ ವಾಗಲಿದೆ ಎನ್ನುವುದು ಪರಿಸರವಾದಿಗಳ ಆರೋಪವಾಗಿದೆ.
ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದೇ ಕೆ.ಪಿ.ಸಿ.ಎಲ್.ನವರುಸಮೀಕ್ಷಾ ಕಾರ್ಯ ಆರಂಭಿಸಿದ್ದರು ಆದರೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನ್ಯಾಯಾಲಯ ಯಾವ ರೀತಿ ಆದೇಶ ನೀಡುತ್ತದೆಯೋ ಅದನ್ನು ಪಾಲಿಸುವುದಷ್ಟೇ ನಮ್ಮ ಪಾಲಿಗಿರುವ ಆಯ್ಕೆ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
ಶರಾವತಿ ಕಣಿವೆಯಲ್ಲಿ ಈಗಾಗಲೇ ಲಿಂಗನಮಕ್ಕಿ ಮತ್ತು ಗೇರಸೊಪ್ಪಾದಲ್ಲಿ ಜಲಾಶಯಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಭಾಗದಲ್ಲಿಯೇ ಮತ್ತೊಂದು ಯೋಜನೆಯನ್ನು ಹೇರುವುದು ಸಾಧುವಲ್ಲ. ಜಲಾಶಯದ ಕೆಳಭಾಗದಲ್ಲಿರುವ ಹೊಳೆಸಾಲಿನ ಜನ ಜೀವನದ ಮೇಲೆ ದೂರಗಾಮಿ ಪರಿಣಾಮವನ್ನು ಬೀರಲಿದೆ ಎನ್ನುವ ಚಿಂತನೆಯ ಜೊತೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಆದರೆ ಆಳುವ ವರ್ಗದ ಸಾತ್ ದೊರೆಯದ ಹಿನ್ನಲೆಯಲ್ಲಿ ಜನರ ವಿರೋಧದ ದ್ವನಿ ಹೋರಾಟವಾಗಿ ರೂಪುಗೊಂಡಿರಲಿಲ್ಲ.
Leave a Comment