ನಾಡಿನ ಸುಪ್ರಸಿದ್ಧ ದೇವಾಲಯಗಳಲ್ಲೊಂದೆನಿಸಿರುವ ಇಡಗುಂಜಿ ಮಹಾಗಣಪತಿಯ ಸನ್ನಿಧಿಗೆ ನಿತ್ಯವೂ ಸಾವಿರಾರು ಭಕ್ತರು ಬೇಟಿ ನೀಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಇಡಗುಂಜಿಗೆ ಸಾಗುವ ಉಪ ರಸ್ತೆಯಲ್ಲಿ 50 ಮೀಟರ್ ದೂರದಲ್ಲಿ ಹೊನ್ನಾವರ ಅರಣ್ಯ ಇಲಾಖೆಯವರು ನಿರ್ಮಿಸಿದ ವಿನಾಯಕವನವಿದೆ. ಉದ್ಯಾನವನ, ಕುಳಿತು ವಿಶ್ರಾಂತಿ ಪಡೆಯಲು ಬೆಂಚುಗಳು, ಪಾರಾಗೋಲ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹದಂತ ಮೂಲಭೂತ ಸೌಖರ್ಯಗಳ ಜೊತೆ ಮಕ್ಕಳ ಮನಸ್ಸಿಗೆ ಮುದ ನೀಡಬಲ್ಲ ಜೋಕಾಲಿ, ಜಾರುಬಂಡಿ, ಜಿಂಕೆಯ ಪ್ರತಿಮೆಗಳು ಸುಸ್ಥಿತಿಯಲ್ಲಿವೆ.

ಸೀತೆಯನ್ನು ಅಪಹರಿಸಿದ ಲಂಕಾಧೀಶ ರಾವಣ ಆಕೆಯನ್ನು ಒಲಿಸಿಕೊಳ್ಳಲು ಅಶೋಕಾವನದಲ್ಲಿಟ್ಟು ರಾಕ್ಷಸಿಯರನ್ನು ಕಾವಲಿಗಿಟ್ಟಿದ್ದು, ರಾಮನ ಭಕ್ತ ಹನುಮ ಅಶೋಕಾವನದಲ್ಲಿ ಸೀತಾಮಾತೆಯನ್ನು ಕಂಡು ರಾಮ ಕಳುಹಿಸಿಕೊಟ್ಟಿದ್ದ ಮುದ್ರೆಯುಂಗುರ ನೀಡುವ ಕಥಾನಕಗಳೆಲ್ಲಾ ಇಲ್ಲಿ ಕಲಾಕೃತಿಯಾಗಿ ಅರಳಿದೆ. ಚೌತಿ ಹಬ್ಬದ ಆಚರಣೆಯ ಹಿನ್ನಲೆಗಳನ್ನು ತಿಳಿಸುವ ಶಿಲ್ಪಗಳು, ಕುಬೇರನ ಗರ್ವಭಂಗದಂತ ಪ್ರಸಂಗಗಳನ್ನ ವಿರಣೆಗಳೊಂದಿಗೆ ದೃಶ್ಯ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಇಲ್ಲಿ ನಿಸರ್ಗದತ್ತವಾಗಿ ರೂಪುಗೊಂಡಿದ್ದ ಪರಿಸರವನ್ನೇ ನಾಜೂಕಾಗಿ ಉದ್ಯಾನವದ ರೀತಿಯಲ್ಲಿ ಅಣಿಗೊಳಿಸಲಾಗಿದೆ. ಶ್ರೀ ಸಿದ್ಧಿವಿನಾಯಕ ಗ್ರಾಮ ಅರಣ್ಯ ಸಮಿತಿಯ ನಿರ್ವಹಣೆಯಲ್ಲಿರುವ ಉದ್ಯಾನವನಕ್ಕೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿಯೂ ಪ್ರವಾಸಿಗರ ಕೊರತೆಯಾಗಿಲ್ಲ ಎನ್ನುತ್ತಾರೆ ಇಲ್ಲಿಯ ನಿರ್ವಹಣೆ ಕೆಲಸಗಾರರು. ವಿಶಾಲವಾದ ಪ್ರದೇಶವನ್ನು ಹೊಂದಿರುವ ಉದ್ಯಾನವನಕ್ಕೆ ಮತ್ತಷ್ಟು ಮೆರಗು ನೀಡುವ ಕೆಲಸವಾಗಬೇಕಿದ್ದು ಅನುದಾನ ಒದಗಿಸುವುದಕ್ಕೆ ಇಲಾಖೆ ಮುಂದಾಗಬೇಕಿದೆ.

Leave a Comment