ತಾಲೂಕು ಕೇಂದ್ರ ಹೊನ್ನಾವರದಿಂದ ಸುಮಾರು ೧೨ ಕಿಲೋ ಮೀಟರ್ ದೂರದಲ್ಲಿರುವ ಬಳಕೂರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಯ ಕಡಲ ಒಡಲನ್ನು ಸೇರುವ ಶರವಾತಿಯ ಎಡದಂಡೆ ಪ್ರದೇಶವಾಗಿದೆ. ಬಹುಸಂಖ್ಯಾತರು ಕೃಷಿಯನ್ನೇ ಮೂಲ ಕಸುಬನ್ನಾಗಿ ಹೊಂದಿರುವ ಇಲ್ಲಿನ ಗುಡ್ಡದಲ್ಲಿನ ಗುಹೆಯೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ಬಳಕೂರು, ಗುಡೇಮಕ್ಕಿ ಮತ್ತು ಮಣ್ಣಿಗೆ ಗ್ರಾಮಗಳ ಮಧ್ಯವರ್ತಿ ಸ್ಥಳವಾಗಿರುವ ಗುಡ್ಡದಮೇಲೆ ಪಾಂಡವರ ಅರೆ ಎನ್ನುವ ಪ್ರದೇಶವಿದೆ. ಜಾನಪದ ಕಥೆಗಳ ಪ್ರಕಾರ ದ್ವಾಪರ ಯುಗದಲ್ಲಿ ಈ ಪ್ರದೇಶದಲ್ಲಿರುವ ಗುಹೆಯಲ್ಲಿ ಪಾಂಡವರು ವಾಸವಾಗಿದ್ದರು ಶ್ರೀಕೃಷ್ಣ ಕಲ್ಲಿನ ಕೋಳಿಯಾಗಿ ಕೂಗಿದ ನಂತರ ಗುಹೆಯ ಮಾರ್ಗವಾಗಿ ಅಲ್ಲಿಂದ ಹೊರಟು ಹೋದರು ಎನ್ನುವ ಯಾರಿಂದಲೋ ಕೇಳಿದ್ದ ಸಂಗತಿಯನ್ನು ಹಿರಿಯರು ತಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದಾರೆ.

ಅಲ್ಲಿ ಪಾಂಡವರು ನೆಲೆಸಿದ್ದರು ಎನ್ನುವುದು ಕಲ್ಪನೆಯಾಗಿರಬಹುದಾದರೂ ಇಲ್ಲಿ ಗುಹೆ ಇರುವುದು ಮಾತ್ರ ಇಂದಿಗೂ ವಾಸ್ತವ. ( ಬ್ರಿಟಿಷರ್ ದಾಳಿಯಿಂದ ರಕ್ಷಿಸಿಕೊಳ್ಳಲು ಪೂರ್ವಿಕರು ಹಲವು ಕಡೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು ಎನ್ನುವ ಮಾತಿದೆ. ಅದನ್ನು ಪುಷ್ಠೀಕರಿಸುವಂತೆ ಹಳೆಯ ಮನೆಗಳನ್ನು ಮುರಿದಾಗ, ಗುಡ್ಡದಲ್ಲಿ ಮಣ್ಣು ಅಗೆಯುವಾಗ ರಸ್ತೆ ಕಾಮಗಾರಿಗಳನ್ನು ನಡೆಸುವಾಗ ಹಲವು ಕಡೆ ಗುಹೆಯ ರಚನೆ ಕಂಡುಬAದಿರುವುದನ್ನು ಗಮನಿಸಬಹುದಾಗಿದೆ.) ಈ ಗುಹೆಯ ವಿಶಿಷ್ಠತೆ ಏನಪ್ಪಾ ಅಂದರೆ ಮಳೆಗಾಲದಲ್ಲಿ ಅದೆಷ್ಟೇ ಮಳೆ ಸುರಿದರೂ ಬಳಕೂರು ಗುಡ್ಡದಲ್ಲಿನ ಮಳೆ ನೀರು ಊರಿಗೆ ಹರಿದು ಬರುವುದಿಲ್ಲ. ಎಲ್ಲಾ ಕಡೆಯ ನೀರು ಈ ಗುಹೆಯ ಮೂಲಕ ಅಂತರ್ಗತವಾಗಿಯೇ ಸಾಗಿ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶರಾವತಿಯನ್ನು ಸೇರುತ್ತದೆ.
ಇಡಗುಂಜಿಯಿAದ ಬಳಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಮ್ಯಾನ್ ಹೋಲ್ ರೀತಿಯಲ್ಲಿ ಗುಹೆ ತೆರೆದುಕೊಂಡಿದೆಯಾದರೂ ಮಳೆ ಸುರಿಯುತ್ತಿರುವಾಗ ಇಲ್ಲಿ ನೀರಿನ ಬೋರ್ಗರೆತದ ಶಬ್ಧ ಮಾತ್ರ ಕೇಳಿಸುತ್ತದೆ ಬಿಟ್ಟರೆ ನೀರು ಹರಿಯುವ ದೃಶ್ಯ ಕಾಣಿಸುವುದಿಲ್ಲ. ಗುಡ್ಡದಲ್ಲಿನ ಮಳೆಯ ನೀರನ್ನು ಭೂಗರ್ಭದೊಳಗಿಂದಲೇ ನದಿಗೆ ಸೇರಿಸುವ ಗುಹೆ ಆಧುನಿಕ ಒಳಚರಂಡಿಯ ಮಾದರಿಯನ್ನು ಹೋಲುತ್ತಿದ್ದು ಇದು ಹಿಂದಿನವರ ತಾಂತ್ರಿಕ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯೋ ಅಥವಾ ನಿಸರ್ಗ ನಿರ್ಮಿತವೋ ಎನ್ನುವುದು ಮಾತ್ರ ಪ್ರಶ್ನೆಯಾಗುಳಿದಿದೆ.

Leave a Comment