ಕುಮಟಾ:ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ರೂವಾರಿ ಪ್ರೋ.ಎಂ.ಜಿ.ಭಟ್ಟ ನೇತೃತ್ವದ ತಂಡ ಅಚ್ಚುಕಟ್ಟಾಗಿ ನುಡಿ ಹಬ್ಬವನ್ನು ಆಚರಿಸುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಹೇಳಿದರು.

ಅವರು ರವಿವಾರ ಪಟ್ಟಣದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಿದ 11ನೇ ವರ್ಷದ ನುಡಿ ಹಬ್ಬ ಕಾರ್ಯಕ್ರಮಕ್ಕೆ ಪಾಲ್ಗೊಂಡು ಮಾತನಾಡಿ, ಈ ಪುರ ಭವನಕ್ಕೆ ಟೌನ್ಹಾಲ್ ಎಂಬ ಹೆಸರಿಡಬೇಕೆಂಬ ನಿರ್ಧಾರವಾಗಿತ್ತು. ಆದರೆ ನಾನು ಈ ಹಾಲ್ಗೆ ಕನ್ನಡದಲ್ಲೆ ನಾಮಕರಣ ಮಾಡಬೇಕೆಂಬ ಸದುದ್ದೇಶದಿಂದ ನಮ್ಮೆಲ್ಲ ಪುರಸಭೆ ಸದಸ್ಯರು ಮತ್ತು ಮೇಲಾಧಿಕಾರಿಯ ಸಹಕಾರದಿಂದ ಪುರಭವನ ಎಂದು ನಾಮಕರಣ ಮಾಡುವ ಮೂಲಕ ಕನ್ನಡ ಭಾಷಾ ಅಭಿಮಾನವನ್ನು ಮೆರೆದಿರುವ ಖುಷಿ ಇದೆ. ನಾವೆಲ್ಲರೂ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳೋಣ ಎಂದರು.
ಡಾ.ಜಿ.ಜಿ.ಹೆಗಡೆ ಮಾತನಾಡಿ, ಕನ್ನಡ ಭಾಷೆಯ ಮೇಲೆ ನಾನಾ ರೀತಿಯ ದಾಳಿಗಳಾಗುತ್ತಿದ್ದರೂ ಕನ್ನಡ ನಮ್ಮ ಹೃದಯ ಭಾಷೆಯಾಗುವ ಮೂಲಕ ಯಾವತ್ತೂ ಜೀವಂತವಾಗಿರುತ್ತದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಶ್ರೀಧರ ಉಪ್ಪಿನಗಣಪತಿ ಮಾತನಾಡಿ, ಎಲ್ಲರೂ ಕನ್ನಡ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳನ್ನು ಗೌರವಿಸುವ ಜೊತೆಗೆ ಮಾತೃ ಭಾಷೆಯಾದ ಕನ್ನಡವನ್ನು ಹೆಚ್ಚು ಪ್ರೀತಿಸುವ ಕಾರ್ಯವಾಗಬೇಕು ಎಂದರು.
ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾದ ಅಧ್ಯಕ್ಷ ಪ್ರೋ.ಎಂ.ಜಿ.ಭಟ್ಟ ಪ್ರಾಸ್ತಾವಿಕ ಮಾತನಾಡಿ, ಕಳೆದ 10 ವರ್ಷಗಳಿಂದ ನುಡಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ. ಆದರೆ ಈ ಬಾರಿಯ 11ನೇ ವರ್ಷಕ್ಕೆ ಕೋವಿಡ್ ಕಾರಣಕ್ಕೆ ಸರಳವಾಗಿ ಆಚರಿಸುವ ಉದ್ದೇಶದಿಂದ ಪುರ ಭವನವನ್ನು ಕೇಳಿದಾಗ, ಪ್ರೀತಿಯಿಂದ ಒಪ್ಪಿಗೆ ಸೂಚಿಸಿದ ಪುರಸಭೆ ಮುಖ್ಯಾಧಿಕಾರಿ ಸುರೇಶ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಲು ಹೆಚ್ಚಿನ ಸಹಕಾರ ನೀಡಿದ್ದಾರೆ. ಇಂತಹ ಅಧಿಕಾರಿಗಳಿದ್ದರೆ ಕನ್ನಡ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಲು ಇನ್ನಷ್ಟು ಉತ್ಸಾಹ ಮೂಡುತ್ತದೆ. ಹಾಗಾಗಿ ಮಾತೃ ಭಾಷೆಯ ಪ್ರೀತಿ ಪ್ರತಿಯೊಬ್ಬರಲೂ ಇರುವಂತಾಗಲಿ. ಆ ಮೂಲಕ ಕನ್ನಡ ಅಜಯಾಮರವಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಬಿ.ಎಸ್.ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರಾಜ ನಾಯ್ಕ, ದಯಾನಂದ ಭಂಡಾರಿ, ಶಿಕ್ಷಕ ಮಂಜುನಾಥ ನಾಯ್ಕ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
Leave a Comment