ಹೊನ್ನಾವರ: ಕೊರೊನಾ ಕಳೆಯುವ ನಿರೀಕ್ಷೆಯ ಭಾರ ಹೊತ್ತು ಬೆಳಕಿನ ಹಬ್ಬವನ್ನು ಎದುರು ನೋಡುತ್ತಿರುವ ಜನತೆ
ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಎದುರುಗೊಳ್ಳಲಿದೆ. ಸಂಪ್ರದಾಯಬದ್ಧ ಆಚರಣೆಯ ಕೊಂಡಿಯನ್ನು ಕಡಿದುಕೊಳ್ಳದ ಹಳ್ಳಿಯ ಜನರು ಈಗಿಂದಲೇ ಹಬ್ಬದ ತಯಾರಿಗೆ ತೊಡಗಿದ್ದು ಕೊರೊನಾ ಕಂಟಕ ದೀಪಾವಳಿಯ ನಂತರವಾದರೂ ಕಳೆದೀತೆ ಎಂದು ಬೆಟ್ಟದಷ್ಟು ನಿರೀಕ್ಷೆಯ ಭಾರವನ್ನು ಹೊತ್ತು ಕಾದು ಕುಳಿತಂತೆ ಕಾಣಿಸುತ್ತಿದೆ.

ದೀಪಾವಳಿ ಎಂದರೆ ಸಾಕು ಊರಿನ ಮಹಿಳೆಯರೆಲ್ಲಾ ಒಟ್ಟಾಗಿ ವಾರ ಮೊದಲೇ ಕುಂಬಾರರ ಮನೆಗೆ ಹೋಗಿ ಮಣ್ಣಿನ ಮಡಕೆ ತಂದು ಶೇಡಿಯ ಚಿತ್ತಾರ ಬರೆಯುವ ಜೊತೆಗೆ ಹುಲ್ಲಿನ ಇರುಕೆ ನೇಯ್ದುಕೊಡುವಂತೆ ಹಿರಿಯ ಮಹಿಳೆಗೆ ದುಂಬಾಲು ಬೀಳುವ ಕಾಲ ಈಗಿಲ್ಲ. ಮಣ್ಣಿನ ಮಡಕೆಯ ಜಾಗವನ್ನು ತಾಮ್ರದ ಕೊಡಗಳು ಆವರಿಸಿವೆ.


ಆದರೂ ಎಣ್ಣೆ ಸ್ನಾನ, ಬೂದಿ ಹಬ್ಬ, ಹಿಂಡಲ ಕಾಯಿ ಆರತಿ, ಕಹಿಕುಡಿಯುವುದು, ಮಣ್ಣಿನ ಹಣತೆಯ ದೀಪ ಬೆಳಗುವುದು, ಮನೆ ಮಂದಿಯ ಆಭರಣಗಳನ್ನು ಬಲೀಂದ್ರನಿಗೆ ತೊಡಿಸಿ ಖುಷಿ ಪಡುವುದು, ನರಕ ಚತುರ್ಧಶಿಯ ಮಾರನೇ ದಿನ ಸಿಗುವ ಬಾಳೆಲೆಯಲ್ಲಿ ಕಟ್ಟಿದ ಮೊಸರನ್ನದ ಬುತ್ತಿಯ ಉಣ್ಣುವ ಕ್ಷಣದ ಹಂಬಲದಲ್ಲಿರುವ ಮನೆಯ ಮಕ್ಕಳು. ಮದುವೆಯಾಗಿ ಗಂಡನ ಮನೆ ಸೇರಿದ ಹೆಣ್ಣುಮಕ್ಕಳು ತವರಿನ ಗೂಡಿಗೆ ಮರಳುವ ಕಾತರ.

ಪಾಡ್ಯಮಿಯ ದಿನದ ಗೋ ಪೂಜೆ ಸೇರಿದಂತೆ ಸಾಲು ಸಾಲು ಸಂಭ್ರಮದ ಕ್ಷಣಗಳನ್ನೇ ಹೊತ್ತು ತರುವ ಹಬ್ಬ ದೀಪಾವಳಿ ಕೊರೊನಾದ ಕಷ್ಟ ನಷ್ಟ ನೋವುಗಳನ್ನು ಕಳೆದು ಮನ ಮನೆಗಳಲ್ಲಿ ನಲಿವಿನ ಬೆಳಕನ್ನು ಪಸರಿಸಲಿ ಎನ್ನುವ ಹಾರೈಕೆ ಜನ ಸಾಮಾನ್ಯರದು.
Leave a Comment