ಪ್ರಶಾಂತ ಪಾಯ್ದೆ ಕನ್ನಡ ಕಿರುತೆರೆಯಲ್ಲಿ ಅವಕಾಶದ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸ್ಪುರದ್ರೂಪಿ ಯುವಕ ಹುಟ್ಟಿದ್ದು ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕಾರವಾರದಲ್ಲಿ. ಬಾಲ್ಯದ ಜೀವನ ಓದು ಬರಹ ಎಲ್ಲಾ ಹೊನ್ನಾವರದಲ್ಲಿ. ಆರ್ಥಿಕವಾಗಿ ಸಾಕಷ್ಟು ಏರಿಳಿತಗಳನ್ನು ಕಂಡ ಕುಟುಂಬದಲ್ಲಿ ಜನಿಸಿ ಎಳವೆಯಲ್ಲಿಯೇ ಓದಿನ ಜೊತೆ ಮನೆ ಮನೆಗೆ ಹಾಲು ಹಾಕುವ ಜೊತೆಗೆ ಕೋರಿಯರ್ ಬಾಯ್ ಆಗಿಯೂ ದುಡಿದ ಈತ ಗೆಳೆಯರ ಜೊತೆ ನಾಟಕದ ಗೀಳನ್ನು ಅಂಟಿಸಿಕೊಂಡಿದ್ದ.

ಓದಿನ ನಂತರ ಮುಂದೇನು ಎನ್ನುವ ಪ್ರಶ್ನೆ ಎದುರಾದಾಗ ಹೆಚ್ಚಿನೆಲ್ಲಾ ಹುಡುಗರ ಹಾದಿಯನ್ನೇ ಪ್ರಶಾಂತನೂ ತುಳಿದ. 2002 ರಲ್ಲಿ ಉದ್ಯೋಗವನ್ನರಸಿ ಬೆಂಗಳೂರಿನ ಬಸ್ಸು ಹತ್ತಿದವನು ಕೆಲಸದ ಒತ್ತಡದ ನಡುವೆಯೂ ಕಲೆಯಬಗೆಗಿನ ಸೆಳೆತ ಹೆಚ್ಚಿ ಮುಕ್ತ ಪೌಂಡೇಶನ್‍ನವರ ಒಡನಾಟ ಸಿಕ್ಕು ಬೀದಿ ನಾಟಕಗಳಲ್ಲಿ ಅಭಿನಯಿಸತೊಡಗಿದ. ನಂತರ ಗುರು ರಾಘವೇಂದ್ರ ಸೀರಿಯಲ್ ನಿರ್ದೇಶಕ ಬ.ಲ ಸುರೇಶ ಅವರ ಕಣ್ಣಿಗೆ ಬಿದ್ದು ಗುರುರಾಘವೇಂದ್ರ ದಾರವಾಹಿಯಲ್ಲಿ ಗುರುಗಳ ಬಾಲ್ಯ ಸ್ನೇಹಿತ ನಾಣಿಯ ಪಾತ್ರದಲ್ಲಿ ಅಭಿನಯಿಸಿದ ಈತ ನಂತರ ಒಂದರ ಬೆನ್ನಿಗೆ ಒಂದರಂತೆ ಸುಮಾರು 18 ದಾರವಾಹಿಗಳಲ್ಲಿ ಅಭಿನಯಿಸಿದ್ದಾನೆ.
ಧಾರವಾಹಿಯ ಅಭಿನಯದಲ್ಲಿ ಸಿಕ್ಕ ಯಶಸ್ಸನ್ನೇ ಬೆಳ್ಳಿ ತೆರೆಗೂ ಮುಂದುರಿಸಿದ ಪ್ರಶಾಂತ ಗೀತಾ ಬ್ಯಾಂಗಲ್ ಸ್ಟೋರ್ ಸಿನೆಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾನೆ. ಸದ್ಯ ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಹ್ಯಾಂಡ್ಸ್‍ಮ್ ಬಾಯ್ ಪ್ರಶಾಂತ ಅಭಿನಯ ಜಗತ್ತಿನಲ್ಲಿ ಬಹುದೂರ ಸಾಗುವ ಭರವಸೆಯನ್ನಂತೂ ಹುಟ್ಟು ಹಾಕಿದ್ದಾನೆ. ಸ್ಯಾಂಡಲ್‍ವುಡ್‍ನಲ್ಲಿ ಮಿಂಚುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವಕನಿಗೆ ಆಲ್ ದಿ ಬೆಸ್ಟ್ ಹೇಳೋಣ.

Leave a Comment